ಬೆಂಗಳೂರು: ಪಾಕಿಸ್ತಾನದಿಂದ ಕರೆಗಳನ್ನು ಸಿಮ್ ಬಾಕ್ಸ್ ಮೂಲಕ ಸ್ಥಳೀಯ ಕರೆಗಳನ್ನಾಗಿ ಬದಲಾಯಿಸಿ ಅದರಿಂದ ಭಾರತೀಯ ಸೇನೆಯ ಬಗ್ಗೆ ಮಾಹಿತಿ ರವಾನೆ ಮಾಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಿಲಿಟರಿ ಇಂಟಲಿಜೆನ್ಸ್ ಮತ್ತು ಕೇಂದ್ರ ಅಪರಾಧ ವಿಭಾಗವು ಜಂಟಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ವಯನಾಡ್ ಮೂಲದ ಶರಾಫುದ್ದೀನ್( 41) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಸ್ಲೀಪರ್ ಸೆಲ್ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಕಂಡು ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಒಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿತ್ತು. ಅಲ್ಲದೆ, ಸಿಮ್ ಬಾಕ್ಸ್ ಮೂಲಕ ಹನಿಟ್ರಾಪ್ ಮಾಡುತ್ತಿದ್ದ ಗುಂಪನ್ನು ಕೂಡ ಸೆರೆ ಹಿಡಿಯಲಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ಆತಂಕಕಾರಿ ಚಟುವಟಿಕೆ ನಡೆದಿರುವುದು ಕಂಡು ಬಂದಿದೆ.
ಬೆಂಗಳೂರಿನ ಒಂದು ಜಾಗದಲ್ಲಿ ದುಷ್ಕರ್ಮಿಗಳು ಸಿಮ್ ಬಾಕ್ಸ್ ಇಟ್ಟುಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬದಲಾಯಿಸುತ್ತಿದ್ದರು. ಈ ಜಾಗದ ಮೇಲೆ ಪೊಲೀಸರು ದಾಳಿ ನಡೆಸಿ ಸಿಮ್ ಬಾಕ್ಸ್ ವಶಕ್ಕೆ ಪಡೆದಾಗ ಪಾಕಿಸ್ತಾನ ಇಂಟೆಲಿಜೆನ್ಸ್‌ನಿಂದ ಕರೆ ಬಂದಿರುವುದೂ ಪತ್ತೆಯಾಗಿದೆ. ಭಾರತ ಸೇನೆಯ ಬಗ್ಗೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡುವ ಪ್ರಯತ್ನ ನಡೆದಿರುವುದೂ ಕಂಡುಬಂದಿದೆ. ಇದರ ಹಿಂದೆ ಉಗ್ರರ ಕೈವಾಡ ಇರಬಹುದೇ ಎಂಬ ಶಂಕೆ ಮೂಡಿದೆ.
ಆರೋಪಿ ಶರಾಫುದ್ದೀನ್ ಮತ್ತು ಗ್ಯಾಂಗ್ ಬೆಂಗಳೂರಿನ ಭುವನೇಶ್ವರಿನಗರ, ಚಿಕ್ಕಸಂದ್ರ, ಸಿದ್ದೇಶ್ವರ ಲೇಔಟ್ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಒಟ್ಟು 58 ಸಿಮ್ ಬಾಕ್ಸ್ ಇಟ್ಟಿದ್ದರು. ಸುಮಾರು 2,144 ಸಿಮ್ ಬಳಸಿ ಕರೆಗಳನ್ನು ಬದಲಾಯಿಸಲಾಗುತ್ತಿದ್ದು, ಪೊಲೀಸರು ಎಲ್ಲ ಸಿಮ್ ಬಾಕ್ಸ್ ಹಾಗೂ ಸಿಮ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಹಿಂದೆ ಉಗ್ರರ ಕೈವಾಡ ಇರಬಹುದೇ ಎಂದು ಹೆಚ್ಚಿನ ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ನಕಲಿ ಸಿಮ್ ಬಳಸಿ ಬೆದರಿಕೆ, ಹನಿಟ್ರ್ಯಾಪ್ ಮಾಡುತ್ತಿದ್ದವರು ಪೊಲೀಸ್ ಬಲೆಗೆ