Site icon Vistara News

ಕುಡಿತದ ಚಟ ಸಹಿಸದೆ ಬೆಂಗಳೂರಿನಲ್ಲಿ ಮಗನನ್ನೇ ಕೊಂದ ತಂದೆ; ಇಲ್ಲಿದೆ ಒಂದು ಟ್ವಿಸ್ಟ್

Yogesh

Father kills his son due to addiction of alcohol in Bengaluru

ಬೆಂಗಳೂರು: ರಾಜ್ಯ ರಾಜಧಾನಿಯ ಬಸವೇಶ್ವರ ನಗರದಲ್ಲಿ (Basaveshwara Nagar) ನಡೆದ ಯುವಕನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಯುವಕನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ, ಆತನ ತಂದೆಯೇ ಕೊಲೆ ಮಾಡಿ, ಆತ್ಮಹತ್ಯೆ (Suicide) ಎಂಬುದಾಗಿ ಬಿಂಬಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ (Post Mortem) ವರದಿಯಲ್ಲೂ ಆತ್ಮಹತ್ಯೆ ಅಲ್ಲ ಕೊಲೆ ಎಂಬುದಾಗಿ ಉಲ್ಲೇಖಿಸಿದ ಕಾರಣ ಯುವಕನ ತಂದೆಯನ್ನು ಬಂಧಿಸಲಾಗಿದೆ.

ಕಳೆದ ಮಾರ್ಚ್‌ 6ರಂದು ಬಸವೇಶ್ವರ ನಗರದಲ್ಲಿ ಯೋಗೇಶ್ ಎಂಬ ಯುವಕನು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ಆತನ ತಂದೆ ಯೋಗೇಶ್‌ ನಾಟಕವಾಡಿದ್ದರು. ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯೋಗೇಶ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೇ ಆತನ ತಂದೆ ಬಿಂಬಿಸಿದ್ದರು. ಆದರೆ, ಮಗನ ಕುಡಿತದ ಚಟ ಸಹಿಸಿಕೊಳ್ಳದೆ ಮಗನನ್ನೇ ಆತ ಕೊಂದಿದ್ದಾರೆ ಎಂಬುದೀಗ ಬಯಲಾಗಿದೆ.

ಕೊಲೆ ಆರೋಪಿ ಪ್ರಕಾಶ್.‌

ಪ್ರಕರಣ ಬಯಲಾಗಿದ್ದು ಹೇಗೆ?

ಪದವಿ ಓದುತ್ತಿದ್ದ ಯೋಗೇಶ್‌ ಕುಡಿತದ ದಾಸನಾಗಿದ್ದ. ಪ್ರತಿದಿನ ಆತ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ. ಇದರಿಂದ ಕುಪಿತಗೊಂಡ ಪ್ರಕಾಶ್‌, ಕುಡಿತ ಬಿಡು ಎಂದು ಗದರಿದ್ದರು. ಇದೇ ವಿಷಯಕ್ಕೆ ಮಾರ್ಚ್‌ 6ರಂದು ತಂದೆ-ಮಗನ ಮಧ್ಯೆ ಗಲಾಟೆ ನಡೆದಿತ್ತು. ಇದೇ ವೇಳೆ ಕೋಪಗೊಂಡಿದ್ದ ಪ್ರಕಾಶ್‌, ಮಗನ ಕತ್ತು ಬಿಗಿದು ಕೊಲೆ ಮಾಡಿದ್ದರು. ಇದಾದ ಬಳಿಕ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಾಟಕ ಆಡಿದ್ದರು.

ಇದನ್ನೂ ಓದಿ: Murder Case : ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಯುವಕನ ಬರ್ಬರ ಕೊಲೆ

ಪ್ರಕಾಶ್‌ ಹಾಗೂ ಯೋಗೇಶ್‌ ಮಧ್ಯೆ ನಡೆದ ಗಲಾಟೆ ಕುರಿತು ಅಕ್ಕಪಕ್ಕದ ಮನೆಯವರಿಗೆ ಗೊತ್ತಿತ್ತು. ಹಾಗಾಗಿ, ಯೋಗೇಶ್‌ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇಲ್ಲ ಎಂಬುದಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಲಾಟೆ ಕುರಿತು ಪೊಲೀಸರಿಗೆ ತಿಳಿಸಿದ್ದರು. ಮನೆ ಪರಿಶೀಲನೆ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪೊಲೀಸರಿಗೂ ಅನುಮಾನಗಳು ಇದ್ದವು. ಇದಾದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ವರದಿಯಲ್ಲಿ ಆತ್ಮಹತ್ಯೆ ಅಲ್ಲ ಕೊಲೆ ಎಂದು ಉಲ್ಲೇಖಿಸಿದ ಕಾರಣ ಯೋಗೇಶ್‌ ತಂದೆಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version