ಬೆಂಗಳೂರು: ನಾಗವಾರದಲ್ಲಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದು ತಾಯಿ ಹಾಗೂ ಮಗು ಮೃತಪಟ್ಟ ಪ್ರಕರಣದಲ್ಲಿ ಪೊಲೀಸರು ಕೊನೆಗೂ ಎಫ್‌ಐಆರ್‌ನಲ್ಲಿ ಆರೋಪಿಗಳನ್ನು ಹೆಸರಿಸಿದ್ದಾರೆ. ಈ ಕುರಿತು ಪೂರ್ವ ವಿಭಾಗ ಡಿಸಿಪಿ ಡಾ. ಭೀಮಾಶಂಕರ ಗುಳೇದ್ ಮಾಹಿತಿ ನೀಡಿದ್ದಾರೆ.
ನಾಗಾರ್ಜುನ ಕನ್ಸ್‌ಟ್ರಕ್ಷನ್ ಕಂಪನಿ(NCC) ಮೊದಲನೆ ಆರೋಪಿ(ಎ೧) ಎಂದು ಹೆಸರಿಸಲಾಗಿದೆ. ಕಂಪನಿಯ ಜೂನಿಯರ್ ಇಂಜಿನಿಯರ್ ಪ್ರಭಾಕರ್ ಎ2, ನಿರ್ದೇಶಕ ಚೈತನ್ಯ ಎ3, ಎಸ್‌ಪಿಎಂ ಮತಾಯಿ ಎ4, ಪಿಎಂ ವಿಕಾಸ್ ಸಿಂಗ್ ಎ5, ಸೂಪರ್‌ವೈಸರ್ ಲಕ್ಷ್ಮೀಪತಿ ಎ6, ಮೆಟ್ರೊ ಡೆಪ್ಯುಟಿ ಚೀಫ್ ಇಂಜಿನಿಯರ್ ವೆಂಕಟೇಶ್ ಶೆಟ್ಟಿ ಎ7, ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಶ್ ಬಂಡೇಕರಿ ಎಂಟನೇ ಆರೋಪಿ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಭೀಮಾಶಂಕರ್ ಗುಳೇದ್, ಮಂಗಳವಾರ ಮೆಟ್ರೋ ಪಿಲ್ಲರ್ ಕುಸಿದು ಇಬ್ಬರ ಸಾವು ಆಗಿತ್ತು. ಆ ಪ್ರಕರಣದಲ್ಲಿ ಮೃತ ಮಹಿಳೆಯರ ಪತಿ ದೂರು ನೀಡಿದ್ದಾರೆ. ಅವರು ಕೊಟ್ಟ ದೂರಿನಲ್ಲಿ ಯಾರ ಹೆಸರೂ ಇರಲಿಲ್ಲ. ರಸ್ತೆ ಸಂಚಾರಿ ಸರಿಪಡಿಸುವ ಹಾಗೂ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಲ್ಲಿ ನಾವು ಮಂಗಳವಾರ ಕೆಲಸ ಮಾಡಿದ್ದೆವು. ಹೀಗಾಗಿ ಎಫ್‌ಐಆರ್‌ನಲ್ಲಿ ಯಾವುದೇ ಹೆಸರು ಉಲ್ಲೇಖಿಸಿರಲಿಲ್ಲ. ನಾಗಾರ್ಜುನ ಕನ್ಪಷ್ಟ್ರಕ್ಷನ್ ಅವರ ಬಳಿ ಮಾಹಿತಿ ಕೇಳಿದ್ದೇವೆ. ಸದ್ಯ ಅವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸುತ್ತಿದ್ದೇವೆ. ಸುಮಾರು ಏಳರಿಂದ ಎಂಟು ಜನರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸುತ್ತಿದ್ದೇವೆ. ಇಷ್ಟು ಬೇಗ ಯಾವುದನ್ನೂ ಹೇಳುವುದಕ್ಕೆ ಆಗುವುದಿಲ್ಲ. ಎಫ್‌ಎಸ್‌ಎಲ್ ವರದಿ ಬರಬೇಕು, ಅದನ್ನು ಪರಿಶೀಲನೆ ನಡೆಸುತ್ತೇವೆ.
ನೊಟೀಸ್ ನೀಡಿ ವಿಚಾರಣೆ ನಡೆಸಿದ ಬಳಿಕ ಯಾರು ಯಾವ ಪಾತ್ರ ವಹಿಸಿದ್ದಾರೆಂಬುದನ್ನು ನೋಡುತ್ತೇವೆ. ನಮ್ಮ ತಜ್ಞರು ಏನು ಹೇಳುತ್ತಾರೆ ಹಾಗೂ ತನಿಖೆಯಲ್ಲಿ ಹೊರಬರುವ ಅಂಶಗಳ ಆಧಾರದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೇಲ್ನೋಟಕ್ಕೆ ಈ ಸೆಕ್ಷನ್ ಅಡಿ ಬರುವ ವ್ಯಕ್ತಿಗಳು ಎಂಬ ಕಾರಣಕ್ಕೆ ಅವರಿಗೆ ನೊಟೀಸ್ ನೀಡಲಾಗಿದೆ ಎಂದರು.
ವಿಧಾನಸೌಧದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ, ಮಂಗಳವಾರ FIRನಲ್ಲಿ ಯಾರ ಹೆಸರೂ ಇರಲಿಲ್ಲ. ಯಾರ ಹೆಸರೂ ಅವರಿಗೆ ಗೊತ್ತಿರಲಿಲ್ಲ. ಇದೀಗ ಅವರು ಹೆಸರು ಸೂಚಿಸಿ FIR ಮಾಡಿದ್ದಾರೆ. ಇವರ ವಿರುದ್ಧ ಕ್ರಮ ಆಗಲಿದೆ. ನಿರ್ಲಕ್ಷದಿಂದ ಪ್ರಾಣ ಹಾನಿಯಾಗಿದೆ. ಈ ರೀತಿ ಆಗಬಾರದು, ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ | Namma Metro Pillar | ನಮ್ಮ ಮೆಟ್ರೋ ಪಿಲ್ಲರ್ ಎಷ್ಟು ಸುರಕ್ಷಿತ? ಡಿಸೈನ್ ಹೇಗಿರಬೇಕು?