Site icon Vistara News

Fire Accident : ಅಂಗಡಿ ಉಳಿಸಿಕೊಳ್ಳಲು ಸಿಲಿಂಡರ್ ಹೊರಗೆಸೆದ ಕಬಾಬ್ ಮಾಲೀಕ; ಆಟೋ ಸೇರಿ 5 ಬೈಕ್‌ಗಳು ಬೆಂಕಿಗಾಹುತಿ

Fire Accident

ಬೆಂಗಳೂರು: ಬೆಂಗಳೂರಿನ ವಿವೇಕನಗರ ಬಳಿ ಇರುವ ಈಜಿಪುರದಲ್ಲಿ ಸಿಲಿಂಡರ್ ಸ್ಫೋಟದಿಂದ (Fire Accident) ಆಟೋ ಸೇರಿ ಐದು ಬೈಕ್‌ಗಳು ಸಂಪೂರ್ಣ ಸುಟ್ಟು ಹೋಗಿದೆ. ಅದಲ್ಲದೆ ಪಕ್ಕದಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ವೈಯರ್‌ಗಳು ಕೂಡ ಸುಟ್ಟು ಭಸ್ಮವಾಗಿವೆ. ವಿವೇಕನಗರ ಪೊಲೀಸ್ ಠಾಣೆಯ ಅನತಿ ದೂರದಲ್ಲಿ ನಿನ್ನೆ ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ.

ಕಬಾಬ್ ಅಂಗಡಿಯಲ್ಲಿ ಸಿಲಿಂಡರ್ ಅಳವಡಿಸುವ ಸಂಧರ್ಭದಲ್ಲಿ ಬೆಂಕಿ ಹತ್ತಿಕೊಂಡಿದೆ‌. ಇದರಿಂದ ಗಾಬರಿಯಾದ ಕಬಾಬ್ ಅಂಗಡಿ ಸಿಬ್ಬಂದಿ, ಏಕಾಏಕಿ ಬೆಂಕಿ ಹತ್ತಿಕೊಂಡಿರುವ ಸಿಲಿಂಡರ್‌ ಅನ್ನು ಮುಂಭಾಗದ ರಸ್ತೆಗೆ ಎಸೆದುಬಿಟ್ಟಿದ್ದ. ಆ ಸಿಲಿಂಡರ್ ನೇರವಾಗಿ ಆಟೋ ಒಳಗೆ ಬಿದ್ದರಿಂದ ಏಕಾಏಕಿ ಆಟೋಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಹೆಚ್ಚಾಗುತ್ತಲೇ ಅಕ್ಕಪಕ್ಕದ ಐದು ದ್ವಿಚಕ್ರವಾಹನಗಳಿಗೆ ಆವರಿಸಿತ್ತು. ಏನಾಯಿತು ಎಂದು ನೋಡುವುದರಲ್ಲೇ ವಾಹನಗಳು ಬೆಂಕಿಗಾಹುತಿ ಆಗಿದ್ದವು.

Fire accident

ಇದನ್ನೂ ಓದಿ: Karnataka Weather : ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ; ಕರಾವಳಿ, ಮಲೆನಾಡಿನಲ್ಲಿ ಸಾಧಾರಣ ಮಳೆ

ನಂತರ ಅಕ್ಕಪಕ್ಕದ ಅಂಗಡಿಯವರು, ನಿವಾಸಿಗಳು ನೀರು ಹಾಕಿ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದ್ದಾರೆ. ಜನರ ಓಡಾಟ ಹೆಚ್ಚಿರುವ ಈ ಇಕ್ಕಟ್ಟಿನ ಸ್ಥಳದಲ್ಲಿ ಕಬಾಬ್ ಅಂಗಡಿ ಸೇರಿದಂತೆ ಹಲವು ಅಂಗಡಿಗಳಿವೆ. ಹೀಗಾಗಿ ಈ ಬೆಂಕಿ ದುರಂತ ತೀವ್ರವಾಗಿ ಆಗಿದ್ದರೆ, ಒಂದಕ್ಕೊಂದು ಅಂಗಡಿ ಮುಗ್ಗಟ್ಟುಗಳಿಗೆ ಬೆಂಕಿ ಆವರಿಸುವ ಸಾಧ್ಯತೆ ಇತ್ತು.

ಇನ್ನು ಸಿಲಿಂಡರ್‌ಗಳು ಸಾಮಾನ್ಯವಾಗಿ ಬೆಂಕಿ‌ ಹತ್ತಿಕೊಳ್ಳುವುದು ಕಡಿಮೆ.. ಹೀಗಾಗಿ ಇದೊಂದು ಅಕ್ರಮ ರೀಫಿಲ್ಲಿಂಗ್ ಗ್ಯಾಸ್‌ನಿಂದ ತರಿಸಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ ಇದರ ಬಗ್ಗೆ ಅಗ್ನಿಶಾಮಕ ಸಿಬ್ಬಂದಿಗೂ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳೀಯರ ಹಾಗು ಅಗ್ನಿಶಾಮಕ ಸಿಬ್ಬಂದಿಯ ಶ್ರಮದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಕಿ ಹತ್ತಿಕೊಳ್ಳಲು ಕಾರಣ ಏನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version