ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಯಾಗುತ್ತಿದ್ದಂತೆ ಮೊದಲ ಪ್ರಕರಣ ದಾಖಲಾಗಿದ್ದು, ಉತ್ತರ ಪ್ರದೇಶದ ಯುವತಿಯೊಬ್ಬಳನ್ನು ಮತಾಂತರಿಸಿದ ದೂರು ಯಶವಂತಪುರ ಠಾಣೆಯಲ್ಲಿ ದಾಖಲಾಗಿದೆ.
ಮದುವೆಯ ಭರವಸೆ ನೀಡಿ ಉತ್ತರ ಪ್ರದೇಶದ 18 ವರ್ಷದ ಯುವತಿಯನ್ನು ಕರೆದೊಯ್ದು ಮತಾಂತರ ಮಾಡಲಾಗಿದೆ ಎಂದು ಸೈಯದ್ ಮುಯೀನ್ ಎಂಬ ಯುವಕನ ವಿರುದ್ಧ ದೂರು ದಾಖಲಾಗಿದೆ.
ಯುವತಿಯ ಕುಟುಂಬ ಉತ್ತರ ಪ್ರದೇಶದ ಗೋರಖ್‌ಪುರ ಮೂಲದ್ದಾಗಿದೆ. ತಂದೆ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಇಬ್ಬರು ಸಹೋದರಿಯರು, ಓರ್ವ ಸಹೋದರ ಇದ್ದಾರೆ. ಯಶವಂತಪುರ ವ್ಯಾಪ್ತಿಯ ಬಿ.ಕೆ.ನಗರದಲ್ಲಿ 15 ವರ್ಷಗಳಿಂದ ವಾಸವಾಗಿದ್ದಾರೆ. ಮಗಳು ಅನ್ಯ ಧರ್ಮೀಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದುಬಂದ ಬಳಿಕ ಆರು ತಿಂಗಳ ಹಿಂದೆ ಪೋಷಕರು ಬುದ್ಧಿವಾದ ಹೇಳಿದ್ದರು.
ಅಕ್ಟೋಬರ್ 5ರಂದು ಯುವತಿ ಕಾಣೆಯಾಗಿದ್ದಳು. ಅಂಗಡಿಗೆ ಹೋಗಿಬರುವುದಾಗಿ ಹೋದವಳು ವಾಪಸ್ ಬಂದಿರಲಿಲ್ಲ. ಯಶವಂತಪುರ ಠಾಣೆಯಲ್ಲಿ ಕುಟುಂಬದವರು ನಾಪತ್ತೆ ದೂರು ದಾಖಲಿಸಿದ್ದರು. ವಾರದ ಬಳಿಕ ಬುರ್ಖಾ ಧರಿಸಿ ಠಾಣೆಗೆ ಬಂದಿದ್ದ ಯುವತಿ, ತಾನು ಮತಾಂತರಗೊಂಡಿರುವುದಾಗಿ ತಿಳಿಸಿದ್ದಳು. ಮತಾಂತರಗೊಂಡ ಯುವತಿಯನ್ನು ಮದುವೆಯಾಗುವುದಾಗಿ ಹೇಳಿಕೊಂಡು ಮುಯೀನ್ ಕರೆತಂದಿದ್ದ. ಮಗಳ ನಡೆ ಕಂಡು ಗಾಬರಿಗೊಂಡ ಪೋಷಕರು, ಇದೀಗ ಮುಯೀನ್ ವಿರುದ್ಧ ಮದುವೆಯ ಭರವಸೆ ನೀಡಿ ಮತಾಂತರಗೊಳಿಸಿರುವ ಆರೋಪ ದಾಖಲಿಸಿದ್ದಾರೆ.
ಯುವತಿಯ ಮನೆಯ ಪಕ್ಕದ ಏರಿಯಾದಲ್ಲಿ ವಾಸ ಮಾಡುತ್ತಿದ್ದ ಮುಯೀನ್, ಆಕೆಯನ್ನು ಪ್ರೀತಿಸಿ ಮಾದುವೆಯಾಗಬೇಕಾದರೆ ಮತಾಂತರವಾಗಬೇಕೆಂದು ಒತ್ತಡ ಹೇರಿದ್ದ. ಮುಯೀನ್ ಮಾತು ನಂಬಿ ಯುವತಿ ಆತನ ಜೊತೆ ಹೋಗಿದ್ದಳು. ಕಾನೂನುಬಾಹಿರವಾಗಿ ಮಸೀದಿಯೊಂದರಲ್ಲಿ ಯುವತಿಯ ಮತಾಂತರ ನಡೆದಿದೆ ಎಂದು ದೂರಲಾಗಿದೆ.
ಮತಾಂತರ ಕಾಯಿದೆ ಎಂದರೇನು?
ವ್ಯಕ್ತಿ ಸ್ವಇಚ್ಛೆಯಿಂದ ಮತಾಂತರವಾಗುವುದಕ್ಕೆ ನಿರ್ಬಂಧವಿಲ್ಲ. ಆದರೆ ಮತಾಂತರ ಪ್ರಕ್ರಿಯೆ ಕಾನೂನು ಬದ್ಧವಾಗಿದ್ದು, ಮತಾಂತರವಾಗುವ ವ್ಯಕ್ತಿ ಪ್ರಾದೇಶಿಕ ಡಿಸಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಡಿ.ಸಿ ಆ ವ್ಯಕ್ತಿಯ ಪೋಷಕರು/ ಆಪ್ತರ ಹೇಳಿಕೆ ಪಡೆದು, ಬಳಿಕ 30 ದಿನಗಳ ಗಡುವು ನೀಡುತ್ತಾರೆ. ಯಾವುದೇ ಒತ್ತಡವಿಲ್ಲದೆ ತಮ್ಮ ಇಷ್ಟದಂತೆ ಮತಾಂತರವಾಗುತ್ತಿದ್ದರೆ ಡಿಸಿ ಅನುಮತಿ ನೀಡುತ್ತಾರೆ. ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಬಲಿಯಾಗಿ ಮತಾಂತರವಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮತಾಂತರಕ್ಕೆ ಸಹಾಯ ಮಾಡುವ ಎಲ್ಲಾ ವ್ಯಕ್ತಿಗಳ ಮೇಲೆ ಕೂಡ ಎಫ್ಐಆರ್ ದಾಖಲಾಗುತ್ತದೆ. ಮದುವೆ- ಉದ್ಯೋಗ- ಹಣಕಾಸು ಆಮಿಷ ತೋರಿಸಿ, ಬಲವಂತದಿಂದ ಮತಾಂತರಿಸುವುದು ಕಾನೂನುಬಾಹಿರ.