ಬೆಂಗಳೂರು: ಆನ್‌ಲೈನ್‌ನಲ್ಲಿ ಕೆಲಸ, ಕೈ ತುಂಬ ಸಂಬಳ ಅಂದರೆ ಯಾರು ತಾನೇ ಬೇಡ ಅಂತಾರೆ. ಕುಳಿತಲ್ಲೆ ಹಣ ಜೇಬಿಗೆ ಇಳಿಸಬಹುದು ಎಂದರೆ ಆನ್‌ಲೈನ್ ಕೆಲಸಕ್ಕಾಗಿ ಜನ ಕ್ಯೂನಲ್ಲಿ ನಿಲ್ಲುತ್ತಾರೆ. ಹೀಗೆ ಆನ್‌ಲೈನ್ ಕೆಲಸ ಮತ್ತು ಹೂಡಿಕೆ ಮಾಡುವ ಜನರನ್ನೆ ಟಾರ್ಗೆಟ್ ಮಾಡಿದ ಗ್ಯಾಂಗ್‌ವೊಂದು (Fraud Case) ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಕೆಲಸ ಕೊಡಿಸುತ್ತೇವೆ ಎಂದು ವಾಟ್ಸ್‌ಆ್ಯಪ್ ಮೂಲಕ ಜನರನ್ನು ಸಂಪರ್ಕ ಮಾಡುತ್ತಿದ್ದ ಈ ಸೈಬರ್ ವಂಚಕರು, ನಂತರ ಟೆಲಿಗ್ರಾಂನಲ್ಲಿ ಒಂದಷ್ಟು ಲಿಂಕ್ ಕಳಿಸಿ ಜಾಬ್ ಟಾಸ್ಕ್ ಕೊಡುತ್ತಿದ್ದರು. ಒಂದರ ಹಿಂದೆ ಒಂದು ಟಾಸ್ಕ್ ಕೊಟ್ಟು ತಾವೇ ಒಂದಷ್ಟು ಹಣ ಕೂಡ ಕೊಡುತ್ತಿದ್ದರು. ಹಣದ ಆಮಿಷಕ್ಕೆ ಒಳಗಾದ ಜನ, ಹೆಚ್ಚಿನ ಹಣ ಬರುತ್ತದೆ ಎಂದು ಹೂಡಿಕೆ ಮಾಡಿದಾಗ ಲಕ್ಷ ಲಕ್ಷ ಹಣ ಹಾಕಿಸಿಕೊಂಡು ಗುಳುಂ ಮಾಡಿಬಿಡುತ್ತಿದ್ದರು. ಹೀಗೆ ಬೆಂಗಳೂರಿನ ಟಿ. ದಾಸರಹಳ್ಳಿ ನಿವಾಸಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಗ್ಯಾಂಗ್ ಬಳಿಕ ಬಂದ ಹಣವನ್ನು ಚೈನಾ ಮೂಲದ ಆ್ಯಪ್‌ಗಳ ವ್ಯಾಲೆಟ್‌ಗಳಿಗೆ ಆ್ಯಡ್ ಮಾಡಿ ವಿದೇಶಕ್ಕೆ ರವಾನಿಸುತ್ತಿದ್ದರು.
ಈ ಸೈಬರ್ ವಂಚಕ ಜಾಲದ ಬಗ್ಗೆ ಉತ್ತರ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಿಳಿದ ಪೊಲೀಸರು ಆರ್‌ಟಿ ನಗರ ಮೂಲದ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಸೈಯದ್ ಹ್ಯೆಯ್ಯ, ಉಮರ್, ತೇಜಸ್, ಮುಜಾಮಿಲ್, ಚೇತನ್, ವಸೀಂ, ಜಯದ್, ಅಬ್ದುಲ್ ಅನಾನ್, ಓಂ ಪ್ರಕಾಶ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ಸ್ ಭಾಗಿ
ಬಂಧಿತ ಆರೋಪಿಗಳಲ್ಲಿ ಮೂವರು ಸಾಫ್ಟ್ ವೇರ್ ಎಂಜಿನಿಯರ್ಸ್ ಕೂಡ ಇದ್ದಾರೆ ಎನ್ನಲಾಗಿದೆ. ಆರೋಪಿಗಳು ಸಾರ್ವಜನಿಕರಿಂದ ಬಂದ ಹಣವನ್ನು ಯುಎಸ್‌ಡಿಟಿ ಕನ್ವರ್ಟ್ ಮಾಡಿ ಚೈನಾ ವ್ಯಾಲೆಟ್‌ಗಳಿಗೆ ಹಣ ಕಳಿಸಿಕೊಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಆರು ಕೋಟಿ ರೂ. ಅಧಿಕ ಹಣ ವಂಚಿಸಿದ್ದು ಕಂಡು ಬಂದಿದೆ. ಬಂಧಿತರಿಂದ 72 ಮೊಬೈಲ್, 182 ಡೆಬಿಟ್ ಕಾರ್ಡ್, 2 ಲ್ಯಾಪ್ ಟಾಪ್, 133 ಸಿಮ್ ಕಾರ್ಡ್, 127 ಬ್ಯಾಂಕ್ ಪಾಸ್ ಬುಕ್ ಹಾಗೂ 1.74 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಆನ್ ಲೈನ್ ಜಾಬ್ ಮತ್ತು ಹೂಡಿಕೆ ವಂಚನೆ ಬಗ್ಗೆ ದೇಶದ 21 ರಾಜ್ಯಗಳಲ್ಲಿ 122 ಪ್ರಕರಣ ದಾಖಲಾಗಿದ್ದು, ಸೆನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ