ಬೆಂಗಳೂರು: 54 ವರ್ಷದ ಮಹಿಳೆಯೊಬ್ಬರಿಗೆ ಕೆಪಿಎಸ್‌ಸಿ ಸದಸ್ಯತ್ವ (KPSC Membership) ಕೊಡಿಸುವುದಾಗಿ ಹೇಳಿ 4 ಕೋಟಿ ರೂ. ಪಡೆದು ವಂಚನೆ ಮಾಡಿರುವ (Fraud Case) ಘಟನೆ ನಡೆದಿದೆ. ಸಿಸಿಬಿ ಪೊಲೀಸರು (CCB Police) ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಿಯಾಜ್ ಅಹ್ಮದ್, ಯೂಸುಫ್, ಚಂದ್ರಪ್ಪ ಸೇರಿ ನಾಲ್ವರ ಬಂಧನವಾಗಿದೆ.
ಪ್ರಮುಖ ಆರೋಪಿ ರಿಯಾಜ್ ತನ್ನ ಸ್ನೇಹಿತನ ಮುಖಾಂತರ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಣ್ಣನ ಪರಿಚಯವಿದೆ ಎಂದು ಬುರುಡೆ ಬಿಟ್ಟು ಮಹಿಳೆಯ ನಂಬಿಕೆಯನ್ನು ಗಿಟ್ಟಿಸಿಕೊಂಡಿದ್ದ. ನಂತರ ಕೆಲವು ದಿನಗಳ ಬಳಿಕ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವಂತೆ ಹೇಳಿದ್ದ.
ಮಹಿಳೆಯ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು, ಕೆಪಿಎಸ್‌ಸಿ ಸದಸ್ಯತ್ವ ಕೊಡಿಸುವುದಾಗಿ ಹೇಳಿದ್ದ. ಇನ್ನೂ ಈ ಸದಸ್ಯತ್ವಕ್ಕೆ 5 ಕೋಟಿ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದ. ಅದರಂತೆ ಮಹಿಳೆಯಿಂದ ಮುಂಗಡವಾಗಿ 4 ಕೋಟಿ 10 ಲಕ್ಷ ರೂ. ಹಣವನ್ನು ಪಡೆದಿದ್ದರು.
ನಂತರ ಈ ವಂಚಕರು ರಾಜ್ಯ ಸರ್ಕಾರದ ನಡಾವಳಿಗಳು, ಟಿಪ್ಪಣಿಯನ್ನು ನಕಲು ಮಾಡಿದ್ದರು. ನೇಮಕಾತಿ ಬಗ್ಗೆ ನಕಲಿ ಟಿಪ್ಪಣಿ ತಯಾರಿಸಿ, ಸಿಎಂ ಹಾಗೂ ರಾಜ್ಯಪಾಲರ ನಕಲಿ ಸಹಿ ಬಳಕೆ ಮಾಡಿದ್ದರು. ವಂಚಕರ ಮೋಸದಾಟ ತಿಳಿದು ಮಹಿಳೆ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಆದರೆ ಹಣ ಕೊಡದೇ ಸತಾಯಿಸಿದ್ದಾರೆ. ಹೀಗಾಗಿ ಮಹಿಳೆ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Murder Case : ನಡುರಸ್ತೆಯಲ್ಲಿ ಅಕ್ಕನನ್ನು ಅಟ್ಟಾಡಿಸಿ ಸುತ್ತಿಗೆಯಿಂದ ಹೊಡೆದು ಕೊಂದ
ಪೊಲೀಸ್ ಅಧಿಕಾರಿ ಸೋಗಿನಲ್ಲಿ ಹಲವರಿಗೆ ವಂಚಿಸಿದ್ದ ಯುವತಿ ಸೆರೆ
ಹಾಸನ: ಪೊಲೀಸ್ ಅಧಿಕಾರಿ ಎಂದು ಹೇಳಿ ಚಿನ್ನಾಭರಣ, ಹಣ ಪಡೆದು ಹಲವರಿಗೆ ವಂಚಿಸಿರುವ (Fraud Case) ಪ್ರಕರಣ ವರದಿಯಾಗಿದೆ. ಇಲ್ಲಿನ ವಿಜಯನಗರ ಬಡಾವಣೆ (Hasan Vijayanagara Layout) ಎರಡನೇ ಹಂತದಲ್ಲಿ ಘಟನೆ ನಡೆದಿದೆ. ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಲಕ್ಕನಹಳ್ಳಿ ಗ್ರಾಮದ ನಿವೇದಿತಾ. ಎಂ ವಂಚಕಿಯಾಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಆರೋಪಿ ನಿವೇದಿತಾ ಪೊಲೀಸ್ ಅಧಿಕಾರಿಯೆಂದು ಬೆದರಿಸಿ ಕವನ ಎಂಬುವರಿಂದ ಚಿನ್ನ ಹಾಗೂ ಹಣವನ್ನು ವಸೂಲಿ ಮಾಡಿದ್ದಳು. ಅನುಮಾನ ಬಂದ ಅವರು ಪೊಲೀಸರಿಗೆ ದೂರು ನೀಡಿದ ಬಳಿಕ ಆಕೆಯ ವಂಚನೆ ಬಯಲಾಗಿದೆ. ನಿವೇದಿತಾ ಇದೇ ರೀತಿ ಇನ್ನೂ ಹಲವಾರು ಮಂದಿಗೆ ಮೋಸ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಹೇಗೆ ಮೋಸ?
ಮೋಸಕ್ಕೆ ಒಳಗಾದ ಕವನ ಅವರು ನಾಲ್ಕು ತಿಂಗಳ ಹಿಂದೆ ಅಗಲಹಳ್ಳಿ ಗ್ರಾಮದ ಸುನೀಲ್ ಎಂಬುವವರೊಂದಿಗೆ ಮದುವೆಯಾಗಿದ್ದರು. ಆದರೆ, ಸಂಸಾರದಲ್ಲಿ ಬಿರುಕು ಮೂಡಿದ್ದ ಕಾರಣ ತವರು ಮನೆಗೆ ಬಂದು ವಾಸವಿದ್ದರು. ಈ ವೇಳೆ ತಮ್ಮ ಸಮಸ್ಯೆ ಪರಿಹಾರ ಮಾಡುವಂತೆ ವಂಚಕಿ ನಿವೇದಿತಾ ಬಳಿಕ ಸುನೀಲ್ ಹೋಗಿದ್ದರು. ಆಕೆ ಪೊಲೀಸ್ ಎಂದು ನಂಬಿ ನೆರವು ಕೋರಿದ್ದರು.
ಸುನೀಲ್ ಸಂಸಾರದ ಸಮಸ್ಯೆ ತಿಳಿದುಕೊಂಡ ನಿವೇದಿತಾ ಪೊಲೀಸ್ ಯೂನಿಫಾರ್ಮ್ನಲ್ಲಿ ಕವನ ಅವರ ಮನೆಗೆ ದಾಳಿ ಮಾಡಿದ್ದಳು. ತಾನು ಎಸ್‌ಪಿ ಹುದ್ದೆಯಲ್ಲಿದ್ದು ವಿಚಾರಣೆಗಾಗಿ ಬಂದಿದ್ದೇನೆ ಎಂದು ಕವನ ಅವರ ಮನೆಯವರಿಗೆ ಬೆದರಿಕೆ ಹಾಕಿದ್ದಳು.
ಇದನ್ನೂ ಓದಿ: Dead Body Found: ದೇವನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ನೇತಾಡುತ್ತಿತ್ತು ಅಪರಿಚಿತನ ಶವ
ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೇಸು ಹಾಕುತ್ತೇನೆ ಎಂದು ಕವನ ಅವರನ್ನು ಹೆದರಿಸಿ ಮೊಬೈಲ್ ಪೋನ್ ಕಿತ್ತುಕೊಂಡಿದ್ದಳು. ಅದೇ ರೀತಿ ಸುನೀಲ್‌ನನ್ನು ಕವನ ಅವರ ಮನೆಗೆ ಕರೆದುಕೊಂಡು ಬಂದು ಅವರ ಕುಟುಂಬಕ್ಕೂ ಬೆದರಿಕೆ ಹಾಕಿದ್ದಳು. ತಕ್ಷಣವೇ ಡಿವೋರ್ಸ್ ಕೊಡುವಂತೆ ಬೆದರಿಕೆ ಒಡ್ಡಿದ್ದಳು. ಹೆದರಿದ್ದ ಕವನ 20 ಗ್ರಾಂ ಚಿನ್ನದ ನಕ್ಲೆಸ್, 10 ಗ್ರಾಂ ಚಿನ್ನದ ಉಂಗುರ, 2000 ಸಾವಿರ ನಗದು ನೀಡಿದ್ದರು. ಮೋಸಗಾರ್ತಿ ಹೋದ ಮೇಲೆ ಅನುಮಾನಗೊಂಡ ಕವನ ಅವರ ಕುಟುಂಬಸ್ಥರು ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಬಂಧಿಸಿದಾಗ ಆಕೆಯ ವಂಚನೆಯ ಹವ್ಯಾಸ ಬೆಳಕಿಗೆ ಬಂದಿದೆ.
ಶಾಲೆಗಳಿಗೂ ಹೋಗಿದ್ದ ನಿವೇದಿತಾ
ನಿವೇದಿತಾ ಬಂಧಿಸಿ ತನಿಖೆ ನಡೆಸಿದಾಗ ಆಕೆಯ ವಂಚನೆಯ ಹಲವಾರು ಮುಖಗಳು ಬಹಿರಂಗಗೊಂಡಿವೆ. ತಾನು ಪೊಲೀಸ್ ಅಧಿಕಾರಿ ಎಂದು ಹಲವರಿಗೆ ನಿವೇದಿತಾ ವಂಚಿಸಿದ್ದಳು. ನಿವೇದಿತಾ ಪೊಲೀಸ್ ಅಧಿಕಾರಿ ಎಂದು ನಂಬಿದ್ದ ಹಲವಾರು ಶಾಲೆಗಳ ಆಡಳಿತ ಮಂಡಳಿಗಳು ಅವರನ್ನು ತಮ್ಮಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಅಂಥ ಶಾಲೆಗಳಿಗೆ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲೆ ತೆರಳಿ ಭಾಷಣ ಮಾಡಿದ್ದಳು ವಂಚಕಿ ನಿವೇದಿತಾ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ