ಬೆಂಗಳೂರು: ತಾನು ಸಿಸಿಬಿ ಎಸಿಪಿ ರೀನಾ ಸುವರ್ಣ ಅವರ ಆಪ್ತ ಸಹಾಯಕ, ತಿಂಗಳಿಗೊಮ್ಮೆ ಹಣ ಕೊಡಬೇಕು ಎಂದು ಹೇಳಿ ವ್ಯಕ್ತಿಯೊಬ್ಬ ಅಂಗಡಿ ಮಾಲಿಕರಿಂದ ಹಣ ವಸೂಲಿ ಮಾಡಿದ್ದು, ಈ ಕುರಿತು ದೂರು ದಾಖಲಿಸಲಾಗಿದೆ.
ಸೆಂಟ್ರಲ್ ಕ್ರೈಮ್ ಬ್ರಾಂಚ್ ಎಸಿಪಿ ರೀನಾ ಸುವರ್ಣ ಕಡೆಯವನು ಎಂದು ಹೇಳಿಕೊಂಡು ಬಂದ ಈ ವ್ಯಕ್ತಿ 20 ಸಾವಿರ ವಸೂಲಿ ಮಾಡಿ ತೆರಳಿದ್ದಾನೆ. ʼʼನಾವು ಸಿಸಿಬಿಯವರು. ಎಸಿಪಿ ಮೇಡಂ ಕಳಿಸಿದ್ದಾರೆ. ಇನ್ನು ಮುಂದೆ ಮಂತ್ಲಿ ಕೊಡಲೇಬೇಕು. ಇಲ್ಲವಾದರೆ ರೈಡ್ ಮಾಡುತ್ತೇವೆ.ʼʼ ಎಂದ ವ್ಯಕ್ತಿ 20 ಸಾವಿರ ರೂ. ಪಡೆದು ಮುಂದಿನ ತಿಂಗಳೂ ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಸಹಕಾರನಗರದ ಸಾರಾ ಸ್ಪಾ ಆ್ಯಂಡ್ ಸೆಲೂನ್‌ನ ಮ್ಯಾನೇಜರ್ ಕುಂದನ್ ಎಂಬವರೇ ಸುಲಿಗೆಗೆ ಒಳಗಾದವರು.
ಈ ವಿಚಾರವನ್ನು ಎಸಿಪಿ ರೀನಾ ಸುವರ್ಣ ಅವರಿಗೆ ಸ್ಪಾ ಮಾಲಕಿ ಸ್ಮಿತಾ ತಡವಾಗಿ ಮುಟ್ಟಿಸಿದ್ದರು. ತಮ್ಮ ಹೆಸರಿನಲ್ಲಿ ಸುಲಿಗೆ ನಡೆದಿರುವ ಬಗ್ಗೆ ಶಾಕ್ ಆಗಿರುವ ಎಸಿಪಿ ರೀನಾ ಸುವರ್ಣ, ಈ ಸಂಬಂಧ ದೂರು ನೀಡಲು ಸೂಚನೆ ನೀಡಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.