ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ದಾಳಿಗೊಳಗಾಗಿದ್ದ ಬಿಡಿಎ ಗಾರ್ಡನರ್ ಶಿವಲಿಂಗಯ್ಯನನ್ನು ಅಮಾನತು ಮಾಡಲಾಗಿದೆ. ವಿಶೇಷವೆಂದರೆ, ಶಿವಲಿಂಗಯ್ಯ ನಿವೃತ್ತಿಯಾಗಲು ಕೇವಲ ಒಂದು ದಿನ ಬಾಕಿ ಇರುವಂತೆ ಬಿಡಿಎ ಈ ಶಾಕ್ ನೀಡಿದೆ.
ಇದನ್ನೂ ಓದಿ | ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ
ಮೂಲತಃ ಚನ್ನಪಟ್ಟಣದ ಶಿವಲಿಂಗಯ್ಯ, ಬನಂಶಂಕರಿಯ ಬಿಡಿಎ ಕಚೇರಿಯಲ್ಲಿ ಗಾರ್ಡನರ್ ಆಗಿ ಕೆಲಸ ಮಾಡಿಕೊಂಡಿದ್ದರು. ಮಾಸಿಕ 48,000 ರೂ. ಸಂಬಳ ಪಡೆಯುತ್ತಿದ್ದರು.
ಬೆಂಗಳೂರು ನಗರ ವಿಭಾಗದ ಐಪಿಎಸ್ ಯತೀಶ್‌ಚಂದ್ರ ನೇತೃತ್ವದಲ್ಲಿ ಜೂನ್ 17ರಂದು ಬಿಡಿಎ ಅಧಿಕಾರಿಗಳ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ಶಿವಲಿಂಗಯ್ಯಗೆ ಸಂಬಂಧಿಸಿದ, ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 4 ವಾಸದ ಮನೆಗಳು, ದೊಡ್ಡಕಲ್ಲಸಂದ್ರದಲ್ಲಿ 1 ಖಾಲಿ ನಿವೇಶನ, 510 ಗ್ರಾಂ ಚಿನ್ನಾಭರಣ, 700 ಗ್ರಾಂ ಬೆಳ್ಳಿ ಸಾಮಾನುಗಳು ಸಿಕ್ಕಿದ್ದವು.
ಜತೆಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ 1 ಎಕರೆ 9 ಗುಂಟೆ ಕೃಷಿ ಜಮೀನು, ವಿವಿಧ 2 ದ್ವಿಚಕ್ರ ವಾಹನಗಳು, ವಿವಿಧ ಕಂಪನಿಯ 3 ಕಾರುಗಳು, ನಗದು ಹಣ 86 ಸಾವಿರ ರೂ. ನಗದು, 80 ಸಾವಿರ ರೂ. ಬ್ಯಾಂಕ್ ಠೇವಣಿ, ಸುಮಾರು 10 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದವು.
ಇದುವರೆಗಿನ ಎಸಿಬಿ ತನಿಖೆಯಿಂದ, ಆರೋಪಿ ಶಿವಲಿಂಗಯ್ಯ ತನ್ನ ಮೂಲಗಳಿಗಿಂತ ಶೇ.294 ಹೆಚ್ಚಿನ ಆಸ್ತಿ ಹೊಂದಿರುವುದು ಕಂಡು ಬಂದಿರುವ ಮಾಹಿತಿ ತಿಳಿದುಬಂದಿದೆ. ಈ ಕುರಿತ ವರದಿಯನ್ನು ಎಸಿಬಿ ನೀಡಿದೆ. ಇಲ್ಲಿವೆಗಿನ ತನಿಖೆಯ ಆಧಾರದಲ್ಲಿ ಶಿವಲಿಂಗಯ್ಯ ಮೇಲಿನ ಆರೋಪದಲ್ಲಿ ಸತ್ಯಾಂಶವಿರುವುದು ಕಂಡುಬಂದಿದೆ.
ಶಿವಲಿಂಗಯ್ಯ ಶುಕ್ರವಾರ(ಜೂನ್ 30) ನಿವೃತ್ತಿಯಾಗಬೇಕಿತ್ತು. ನಿವೃತ್ತಿಗೆ ಒಂದು ದಿನ ಮುನ್ನ ಅಮಾನತು ಮಾಡಿ ಬಿಡಿಎ ಆಯುಕ್ತ ರಾಜೇಶ್ ಗೌಡ ಆದೇಶ ಹೊರಡಿಸಿದ್ದಾರೆ.