ಬೆಂಗಳೂರು: ನಗರದ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ತರಗತಿ ನಡೆಯುವಾಗ ಬಾಲಕಿಯೊಬ್ಬಳು ಪ್ರಜ್ಞೆ ತಪ್ಪಿ ಕುಸಿದು ಮೃತಪಟ್ಟಿದ್ದಾಳೆ. ಶಿಕ್ಷಕರ ಏಟಿನ ಆಘಾತಕ್ಕೆ ಮಗಳು ಮೃತಪಟ್ಟಿದ್ದಾಳೆ ಎಂಬುದಾಗಿ ಬಾಲಕಿಯ ಪೋಷಕರು ಅರೋಪಿಸಿದ್ದಾರೆ.
4 ತರಗತಿ ನಿಶಿತಾ ಮೃತ ಬಾಲಕಿ. ನಗರದ ಆರ್.ಡಿ.ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ತರಗತಿ ನಡೆಯುತ್ತಿದ್ದಾಗ ಶಿಕ್ಷಕರೊಬ್ಬರು ಬಾಲಕಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಟೀಚರ್ ಮೊದಲ ಏಟು ಹೊಡೆದ ನಂತರ ಎರಡನೇ ಬಾರಿ ಹೊಡೆಯಲು ಮುಂದಾದಾಗ ಭಯದಿಂದ ಬಾಲಕಿ ಜ್ಞಾನ ತಪ್ಪಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಬಾಲಕಿಯನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ನಿಶಿತಾ ಕೊನೆಯುಸಿರೆಳೆದಿದ್ದಾಳೆ.
ಗಂಗಮ್ಮನಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೀಚರ್ ಹೊಡೆದಿದ್ದರಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | Leopard Attack | ಕೆ.ಆರ್.ನಗರದಲ್ಲಿ ಚಿರತೆ ದಾಳಿಯಿಂದ ಮೂವರಿಗೆ ಗಾಯ; ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ