Site icon Vistara News

Gold Smuggling : ವಿಮಾನದಲ್ಲಿ ಬಂಗಾರದ ಮನುಷ್ಯರು!; ಪ್ಯಾಂಟಲ್ಲೂ ಚಿನ್ನ, ಪ್ಯಾಂಟಿನೊಳಗೂ ಚಿನ್ನ, ಗಂಟಲ್ಲೂ ಚಿನ್ನ!

Gold smuggling

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಚಿನ್ನ ಕಂಡರೆ ಹೆಣವೂ ಬಾಯಿಬಿಡುತ್ತದೆ ಎಂದು ಒಂದು ಹೊಸ ಗಾದೆಯೇ ಮಾಡಬೇಕಾದೀತೇನೋ! ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Kempegowda International Airport) ಚಿನ್ನವನ್ನು ಕಣ್ತಪ್ಪಿಸಿ ತರಲು ಜನರು ಮಾಡುವ ಹೊಸ ಹೊಸ ಉಪಾಯಗಳಿಗೆ ಇನ್ನೋವೇಟಿವ್‌ ಐಡಿಯಾ ಪ್ರಶಸ್ತಿ ಕೊಡಬೇಕಾದೀತೇನೋ!

ಆ ಮಟಕ್ಕೆ ಜನರು ಹುಚ್ಚುಗಟ್ಟಿಕೊಂಡು ಚಿನ್ನದ ಗಟ್ಟಿಯನ್ನು ವಿದೇಶಗಳಿಂದ ತರಲು (Gold Smuggling) ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ವಿಮಾನ ನಿಲ್ದಾಣದಲ್ಲಿ (Bangalore Airport) ಸಿಕ್ಕಿಬೀಳುತ್ತಾರೆ, ಇನ್ನು ಕೆಲವರು ಸಿಕ್ಕಿ ಹಾಕಿಕೊಳ್ಳದೆ ಬಚಾವಾಗುತ್ತಾರೆ!

ಗುದದ್ವಾರ, ಕಾಲಿನ ಮಂಡಿಯಲ್ಲಿ ಚಿನ್ನ!

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಳು ಎರಡು ದಿನದ ಹಿಂದೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಸೀಜ್ ಮಾಡಿದ್ದಾರೆ. ದುಬೈ ಹಾಗೂ ಕೊಲೊಂಬೊದಿಂದ ಬಂದ ನಾಲ್ವರು ಪ್ರಯಾಣಿಕರ ತೀವ್ರ ತಪಾಸಣೆ ವೇಳೆ ಅವರಲ್ಲಿ ಮೂರು ಕೆಜಿ ಚಿನ್ನ ಪತ್ತೆಯಾಗಿದೆ. ಅವರು ಅದನ್ನು ಎಲ್ಲಿಟ್ಟುಕೊಂಡಿದ್ದರು ಎಂದು ತಿಳಿದರೆ ನೀವು ಮೂಗಿಗೆ ಬೆರಳಿಡುತ್ತೀರಿ! ಯಾಕೆಂದರೆ ಅವರಲ್ಲಿ ಕೆಲವರ ಬಳಿ ಚಿನ್ನ ಪತ್ತೆಯಾಗಿದ್ದು ಗುದದ್ವಾರದಲ್ಲಿ (Gold Found in anus). ಇನ್ನೊಬ್ಬ ಕಾಲಿನ ಮಂಡಿಯಲ್ಲಿ ಆಪರೇಟ್‌ ಮಾಡಿ ಚಿನ್ನ ಇಟ್ಟುಕೊಂಡು ಬಂದಿದ್ದ.

Bangalore airport terminal 2

ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಲ್ಲಿ ನಾಲ್ವರು ಪ್ರಯಾಣಿಕರ ಕರಾಮತ್ತು ಬಯಲಾಗಿದ್ದು, ಒಟ್ಟು 1 ಕೋಟಿ 77 ಲಕ್ಷ ಮೌಲ್ಯದ ಮೂರು ಕೆಜಿ ಚಿನ್ನದ ಬಿಸ್ಕೆಟ್‌ಗಳು ಸಿಕ್ಕಿವೆ. ನಾಲ್ವರೂ ಪ್ರಯಾಣಿಕರು ಈಗ ಪೊಲೀಸರ ವಶದಲ್ಲಿದ್ದು, ಈ ಸಾಗಾಟದ ಹಿಂದಿರುವ ಜಾಲವನ್ನು ಭೇದಿಸಲು ಪ್ರಯತ್ನಿಸಲಾಗುತ್ತಿದೆ.

ಪೇಸ್ಟ್‌ ಮಾಡಿ ಪ್ಯಾಂಟ್‌ನೊಳಗೆ ಹಚ್ಚಿದ್ದ!

ಇನ್ನೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬ ಅದೆಷ್ಟು ಪ್ಲ್ಯಾನ್‌ ಮಾಡಿದ್ದ ಎಂದರೆ ಪ್ಯಾಂಟ್ ಹಾಗೂ ಒಳ‌ ಉಡುಪಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಅವನ ಖತರ್ನಾಕ್‌ ಬುದ್ಧಿ ಹೇಗೆ ವರ್ಕ್‌ ಮಾಡಿತ್ತು ಎಂದರೆ ಕೊಲಂಬೊದಿಂದ ಶ್ರೀಲಂಕಾ ಏರ್ಲೈನ್ಸ್ ನಲ್ಲಿ ಬಂದಿದ್ದ ಈ ಪ್ರಯಾಣಿಕ ಪೌಡರ್ ರೂಪದಲ್ಲಿ ಚಿನ್ನವನ್ನು ಪೇಸ್ಟ್ ಮಾಡಿ ಪ್ಯಾಂಟ್ ಒಳಗಡೆ ಮರೆ ಮಾಚಿದ್ದ.

ಪ್ಯಾಂಟ್‌ನ ಸೊಂಟದ ಪಟ್ಟಿಯ ಒಳಗಡೆ ಒಂದು ಕಡೆ ಜೇಬಿನ ತರ ಮಾಡುತ್ತೇವಲ್ಲ. ಇವರು ಇಡೀ ಪಟ್ಟಿಯನ್ನೇ ಹಾಗೆ ಮಾಡಿದ್ದ. ಅದರಲ್ಲಿ ಚಿನ್ನವನ್ನು ಪೇಸ್ಟ್‌ ಮಾಡಿ ಅಂಟಿಸಿದ್ದ. ವಿಮಾನ ನಿಲ್ದಾಣದಿಂದ ತಪ್ಪಿಸಿಕೊಂಡರೆ ಅದನ್ನು ಚಿನ್ನವಾಗಿ ಮರು ರೂಪ ನೀಡುವುದು ಕಷ್ಟವೇನಲ್ಲ ಅನ್ನುವುದು ಅವನ ಲೆಕ್ಕಾಚಾರವಾಗಿತ್ತು. ಆದರೆ, ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡ ಆತನನ್ನು ಈಗ ಚಿನ್ನದ ಸಹಿತ ಬಂಧಿಸಲಾಗಿದೆ. ಆತನ ಪ್ಯಾಂಟ್‌ನಲ್ಲಿ ಸುಮಾರು 74 ಗ್ರಾಂ ಚಿನ್ನ ಪತ್ತೆಯಾಗಿದೆ. ಇದೀಗ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

Exit mobile version