ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು “ನಮ್ಮ ಮೆಟ್ರೋʼʼ ಸೇವೆ ಆರಂಭಿಸಲಾಗಿದ್ದರೂ ರಸ್ತೆಯಲ್ಲಿ ವಾಹನಗಳ ಉದ್ದುದ್ದ ಸಾಲು ಕಡಿಮೆ ಆಗಿಲ್ಲ. ರಸ್ತೆಗಳ ಟ್ರಾಫಿಕ್ ಕಿರಿಕಿರಿ ಕಡಿಮೆ ಮಾಡಲು ಮತ್ತೆ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಒಟ್ಟು ನಾಲ್ಕು ಮೇಲ್ಸೇತುವೆಗಳ ನಿರ್ಮಾಣಕ್ಕೆ ಈಗ ಡಿಪಿಆರ್ ಸಿದ್ಧವಾಗಿದ್ದು, ಇದಕ್ಕೆ ಸರ್ಕಾರವೂ ಸಮ್ಮತಿ ನೀಡಿದೆ. ಸದ್ಯವೇ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ಇದನ್ನೂ ಓದಿ | ಪೀಣ್ಯ ಮೇಲ್ಸೇತುವೆ ಮೇಲೆ ಬಸ್, ಲಾರಿ ಓಡಾಟಕ್ಕೆ 20 ದಿನದಲ್ಲಿ ಅವಕಾಶ?
ಸದ್ಯ ಬೆಂಗಳೂರು ನಗರದಲ್ಲಿ ಒಟ್ಟು 45 ಫ್ಲೈ ಓವರ್‌ಗಳಿವೆ. ಇನ್ನು 4 ಹೊಸದಾಗಿ ಸೇರ್ಪಡೆಯಾದರೆ ಈ ಸಂಖ್ಯೆ ೪೯ಕ್ಕೆ ಏರಲಿದೆ. ಹೊಸ ನಾಲ್ಕು ಫ್ಲೈ ಓವರ್ ನಿರ್ಮಾಣಕ್ಕೆ ಸರ್ಕಾರದಿಂದ 404 ಕೋಟಿ ಅನುದಾನ ದೊರೆತಿದೆ.
ಅಮೃತ್ ನಗರೋತ್ಥಾನ ಯೋಜನೆ ಅಡಿಯಲ್ಲಿ ಏಕಕಾಲಕ್ಕೆ ಈ ನಾಲ್ಕು ಮೇಲ್ಸೇತುವೆಗಳ ಕೆಲಸ ಆರಂಭವಾಗಲಿದೆ. 18 ತಿಂಗಳ ಟೈಮ್ ಲೈನ್ ಇರಲಿದ್ದು, ಬರುವ ಸೋಮವಾರ ಟೆಂಡರ್ ಪ್ರಕ್ರಿಯೆ ಬಗ್ಗೆ ಬಿಬಿಎಂಪಿ ಯೋಜನಾ ವಿಭಾಗ ಸಭೆ ನಡೆಸಲಿದೆ. ಇದರ ಜತೆಗೆ ನಗರದ 7 ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ.
ಎಲ್ಲೆಲ್ಲಿ ಹೊಸ ಫ್ಲೈವರ್?
1. ಇಟ್ಟಮಡು ಮೇಲ್ಸೇತುವೆ
2. ಜೆಸಿ ರಸ್ತೆ ಮೇಲ್ಸೇತುವೆ
3. ಸಾರಕ್ಕಿ ಮೇಲ್ಸೇತುವೆ
4. ವೆಸ್ಟ್ ಆಫ್ ಕಾರ್ಡ್ ರೋಡ್
ಸರ್ಕಾರದ 404 ಕೋಟಿ ಅನುದಾನದಲ್ಲಿ 230 ಕೋಟಿ ವೆಚ್ಚದಲ್ಲಿ ಒಟ್ಟು 4 ಮೇಲ್ಸೇತುವೆಗಳ ನಿರ್ಮಾಣ ಹಾಗೂ 135 ಕೋಟಿಯಲ್ಲಿ ಆರು ರಸ್ತೆಗಳ ಅಗಲೀಕರಣಕ್ಕೆ ಹಣವನ್ನು ಮೀಸಲಿಡಲಾಗಿದೆ. ಉಳಿದಂತೆ 40 ಕೋಟಿ ರೂ.ಗೂ ಅಧಿಕ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಟ್ಟಿದ್ದು, ಇನ್ನೂ ರಸ್ತೆ ಗುರುತು ಮಾಡಿಲ್ಲ. ಕೆ.ಆರ್.ಮಾರ್ಕೆಟ್ ಫ್ಲೈ ಓವರ್ ಮಾದರಿಯಲ್ಲಿ ಜೆಸಿ ರಸ್ತೆ ಫ್ಲೈ ಓವರ್ ನಿರ್ಮಾಣದ ಕುರಿತೂ ಚರ್ಚೆ ನಡೆಯುತ್ತಿದೆ. ಈ ನಾಲ್ಕು ಮೇಲ್ಸೇತುವೆಗಳಲ್ಲಿ ಸಾರಕ್ಕಿ ಜಂಕ್ಷನ್‌ನ ಮೇಲ್ಸೇತುವೆಯ ಉದ್ದ ಕಡಿಮೆಯಾಗಿದೆ. ಆದರೆ ಇದಕ್ಕೆ ಹೆಚ್ಚು ಹಣ ಖರ್ಚಾಗುತ್ತಿರುವುದು ವಿಶೇಷವಾಗಿದೆ.
ಯಾವ ಮೇಲ್ಸೇತುವೆಗೆ ಎಷ್ಟು ಖರ್ಚು?
1. ಇಟ್ಟಮಡು ಜಂಕ್ಷನ್ ನಿಂದ ಕಾಮಾಕ್ಯ ಜಂಕ್ಷನ್ – 40.50 ಕೋಟಿಯಲ್ಲಿ ನಿರ್ಮಾಣ
2. ಬಸವೇಶ್ವರನಗರ ದಿಂದ ವೆಸ್ಟ್ ಆಫ್ ಕಾರ್ಡ್ ರೋಡ್ – 30.64 ಕೋಟಿ ವೆಚ್ಚ
3. ಹಡ್ಸನ್ ಸರ್ಕಲ್ – ಮಿನರ್ವ ಸರ್ಕಲ್ ಮಾರ್ಗವಾಗಿ ಜೆಸಿ ರಸ್ತೆ (ಕಾರ್ಪೋರೇಷನ್ ಸರ್ಕಲ್) – 20.64 ಕೋಟಿ ವೆಚ್ಚ
4. ಕನಕಪುರ ರಸ್ತೆಯಿಂದ ಸಾರಕ್ಕಿ ಜಂಕ್ಷನ್ – 130 ಕೋಟಿ ವೆಚ್ಚ
ಇದನ್ನೂ ಓದಿ | Floating bridge: ಉದ್ಘಾಟನೆಗೊಂಡ ಮೂರನೇ ದಿನಕ್ಕೇ ಮುರಿದು ಬಿತ್ತು ಮಲ್ಪೆ ತೇಲು ಸೇತುವೆ