ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಭ್ರಷ್ಟಾಚಾರ (BBMP Scam) ನಡೆದಿದೆ ಎಂದು ಅನುಮಾನಿಸಿದ್ದ ಕಾಂಗ್ರೆಸ್ ಸರ್ಕಾರ (Congress Government) ಈ ಸಂಬಂಧ ತನಿಖೆ ನಡೆಸಲು ನಾಲ್ಕು ಎಸ್ಐಟಿಗಳನ್ನು (SIT Team) ರಚಿಸಿತ್ತು. ಆದರೆ, ಈಗ ಆ ಎಸ್‌ಐಟಿ ತಂಡಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ನ್ಯಾ. ನಾಗಮೋಹನ ದಾಸ್ ಆಯೋಗದಿಂದ (Justice Nagamohan Das Commission) ಮಾತ್ರ ತನಿಖೆ ನಡೆಸಲು ಸೂಚನೆ ನೀಡಿದೆ. ಹೈಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಂಡಿದೆ.
ಚುನಾವಣೆಗೆ ಮೊದಲು ಬಿಜೆಪಿ ವಿರುದ್ಧ ಕಾಂಗ್ರೆಸ್ ಭಾರಿ ಭ್ರಷ್ಟಾಚಾರದ ಆರೋಪವನ್ನು ಮಾಡಿತ್ತು. 40 ಪರ್ಸೆಂಟ್ ಕಮಿಷನ್, ಪೇಸಿಎಂ ಅಭಿಯಾನವನ್ನೂ ನಡೆಸಿತ್ತು. ಇದಾಗಿ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಅವಧಿಯಲ್ಲಾದ ಬಿಬಿಎಂಪಿ ಕಾಮಗಾರಿಗಳ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅನುಮಾನ ವ್ಯಕ್ತಪಡಿಸಿ ಎಸ್‌ಐಟಿ ತಂಡಗಳನ್ನು ರಚಿಸಿ ಆದೇಶಿಸಿದ್ದರು. ಆಗಸ್ಟ್ ತಿಂಗಳಿನಲ್ಲಿ ಎಸ್ಐಟಿಯನ್ನು ರಚನೆ ಮಾಡಿ 2019ರಿಂದ 2023ರವರೆಗಿನ ಬಿಬಿಎಂಪಿ ವ್ಯಾಪ್ತಿಯ ಯೋಜನೆ, ಕಾಮಗಾರಿಗಳ ಅಕ್ರಮದ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿತ್ತು.
ಎಸ್‌ಐಟಿ ನಡೆಸುತ್ತಿದ್ದ ತನಿಖೆಗಳಿವು
ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳು, ರಸ್ತೆ ಅಭಿವೃದ್ಧಿ, ಓಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿಗಳು, ಕೇಂದ್ರ / ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ / ಸ್ವಾಧೀನಾನುಭವ ಪತ್ರ ನೀಡುವಿಕೆ, ಕೆರೆಗಳ ಅಭಿವೃದ್ಧಿ ಕಾಮಗಾರಿಗಳು, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿನ ಕಾಮಗಾರಿಗಳು ಮತ್ತು ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾದ ದೂರು ಪ್ರಕರಣಗಳಲ್ಲಿ (ಈಗಾಗಲೇ ತನಿಖೆಗೆ ಒಳಪಡಿಸಿರುವ ಕಾಮಗಾರಿಗಳನ್ನು ಹೊರತುಪಡಿಸಿ) ಸ್ಥಳ ಮತ್ತು ದಾಖಲಾತಿಗಳ ಪರಾಮರ್ಶೆಯೊಂದಿಗೆ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಸಹಿತ ಪರಿಪೂರ್ಣ ತನಿಖಾ ವರದಿಯನ್ನು ಸೂಕ್ತ ಅಭಿಪ್ರಾಯ / ಶಿಫಾರಸಿನೊಂದಿಗೆ 30 ದಿನಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವ ಸೂಚನೆಯೊಂದಿಗೆ ನಾಲ್ಕು ತಜ್ಞರ / ಪರಿಣಿತರ ತನಿಖಾ ಸಮಿತಿಗಳನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.
ಟೆಂಡರ್ ಪ್ರಕ್ರಿಯೆ ನಿಯಮಗಳ ಉಲ್ಲಂಘನೆ, ನಿರ್ದಿಷ್ಟ ಗುತ್ತಿಗೆದಾರರನ್ನು ಬಿಟ್ಟು ನಕಲಿ ಗುತ್ತಿಗೆದಾರರಿಗೆ ಹಣ ಪಾವತಿ ಆರೋಪ, ನಕಲಿ ಬಿಲ್ ಸೃಷ್ಟಿ, ಕಾಮಗಾರಿ ನಡೆಸದೆಯೇ ಬಿಲ್ ಪಾವತಿ, ಗುಣಮಟ್ಟ ಕಾಪಾಡದಿರುವುದರ ತನಿಖೆಗೂ ಎಸ್‌ಐಟಿ ತಂಡ ಮುಂದಾಗಿತ್ತು.
ಇದನ್ನೂ ಓದಿ: COVID Subvariant JN1: ಆಕ್ಸಿಜನ್ ಸಿಲಿಂಡರ್, ಪ್ಲಾಂಟ್ ಎಷ್ಟಿದೆ? ವಾರದಲ್ಲಿ ವರದಿ ಕೊಡಲು ಸೂಚನೆ
ನ್ಯಾ. ನಾಗಮೋಹನ್ ದಾಸ್ ಆಯೋಗದಿಂದ ತನಿಖೆ
ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಚ್.ಎನ್. ನಾಗಮೋಹನ್‌ದಾಸ್ ಅವರ ನೇತೃತ್ವದ ವಿಚಾರಣಾ ಆಯೋಗವು ಈಗ ಎಸ್‌ಐಟಿ ನಡೆಸುತ್ತಿದ್ದ ತನಿಖೆಯನ್ನು ಮುಂದುವರಿಸುತ್ತದೆ. ಹೀಗಾಗಿ ಈಗಾಗಲೇ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಸಮಿತಿಗಳು ಕೂಡಲೇ ತಮ್ಮ ಸುಪರ್ದಿಯಲ್ಲಿರುವ ಎಲ್ಲ ಕಡತ, ದಾಖಲೆ, ಮಾಹಿತಿಗಳನ್ನು ನ್ಯಾ. ಎಚ್.ಎನ್. ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ರಚಿಸಲಾದ ವಿಚಾರಣಾ ಆಯೋಗಕ್ಕೆ ಸಲ್ಲಿಸಿ, ಸ್ವೀಕೃತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಗೆ ಸಲ್ಲಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.