ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿ 16 ದಿನ ಕರ್ನಾಟಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಇದೀಗ ಜೈಲು ಪಾಲಾಗಿದ್ದಾನೆ ಆ್ಯಸಿಡ್ ನಾಗೇಶ್ . ಈ ಪ್ರಕರಣದ ಬೆನ್ನಿಗೇ, ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. H2SO4 ಆ್ಯಸಿಡ್ ಎಲ್ಲಿ ಬೇಕಾದರೂ ಸಿಗುತ್ತಿದೆ! ಇದರ ಮಾರಾಟಕ್ಕೆ ಯಾವುದೇ ನಿರ್ಬಂಧ ಇಲ್ಲ! ಈ ಘೋರ ಸತ್ಯ ಆತಂಕ ಮೂಡಿಸಿದೆ.
ಈ ಹಿಂದೆ ಕೂಡ ಹಲವಾರು ಆ್ಯಸಿಡ್ ಪ್ರಕರಣಗಳು ಬೆಳಕಿಗೆ ಬಂದಿದ್ದವು. ರಾಸಾಯಿನಿಕ ವಸ್ತುಗಳು ಈಗ ಎಲ್ಲೆಂದರಲ್ಲಿ ಅತ್ಯಂತ ಸುಲಭವಾಗಿ ಸಿಗುತ್ತಿದ್ದು, ಪೊಲೀಸರು ಈ ಬಗ್ಗೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಪ್ರಬಲ ಸಲ್ಫರಿಕ್ ಆ್ಯಸಿಡ್ ಅನ್ನು ಯಾರು ಬೇಕಾದರೂ ಖರೀದಿಸಬಹುದಾಗಿದೆ. ಲ್ಯಾಬ್ ನಲ್ಲಿ ಒಂದು ಲೀಟರ್ ಸಲ್ಫರಿಕ್ ಆ್ಯಸಿಡ್ ಬೆಲೆ ಕೇವಲ ₹ 46. ಹಾಗಾಗಿ ಪಾತಕಿಗಳು ಆ್ಯಸಿಡ್ ಅನ್ನು ಸಲೀಸಾಗಿ ಕೈಗೆ ಪಡೆದು ಹೀನ ಕೃತ್ಯ ಎಸಗುತ್ತಿದ್ದಾರೆ.
ಇದನ್ನೂ ಓದಿ | Acid Attack | ಆ್ಯಸಿಡ್ ನಾಗನಿಗೆ ಅತಿ ಬುದ್ಧಿವಂತಿಕೆಯೇ ಮುಳುವಾಯ್ತಾ?
ಇನ್ನೊಂದು ಸಂಗತಿ ಎಂದರೆ, ಆ್ಯಸಿಡ್ ಮಾರಾಟಕ್ಕೆ ರೆಗ್ಯುಲೇಟರಿ ಆ್ಯಕ್ಟ್ ಕರ್ನಾಟಕದಲಿಲ್ಲ. ಈ ಕಾರಣದಿಂದ ಆ್ಯಸಿಡ್ ಮಾರಾಟ, ಖರೀದಿ ಮತ್ತು ಬಳಕೆಯ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಸುಪ್ರೀಂ ಕೋರ್ಟ್ ಆ್ಯಸಿಡ್ ಮಾರಾಟಕ್ಕೆ ಬ್ರೇಕ್ ಹಾಕಲು ಎಲ್ಲ ರಾಜ್ಯಗಳಿಗೆ ಈಗಾಗಲೇ ಸೂಚನೆ ನೀಡಿದೆ. ಆದರೆ ಕೆಲವು ರಾಜ್ಯದಲ್ಲಿ ಮಾತ್ರ ಈ ಕುರಿತ ಕಠಿಣ ಕಾಯಿದೆಯನ್ನು ಜಾರಿ ಮಾಡಲಾಗಿದೆ.
ಸರ್ಕಾರ ತಕ್ಷಣ ಎಚ್ಚೆತ್ತು ಆ್ಯಸಿಡ್ ಮಾರಾಟದ ಮೇಲೆ ಕಠಿಣ ಕಾಯಿದೆ ಜಾರಿ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಹೀಗೆ ಮಾಡದೆ ಹೋದರೆ ಮಹಿಳೆಯರ ಮೇಲೆ ಮತ್ತಷ್ಟು ಆ್ಯಸಿಡ್ ದಾಳಿ ನಡೆಯುವ ಸಾಧ್ಯತೆ ಇದೆ. ಆ್ಯಸಿಡ್ ಮಾರಾಟದ ಮೇಲೆ ನಿಯಂತ್ರಣ ಸಾಧಿಸುವುದರ ಜತೆಗೆ, ಇಂಥ ಕೃತ್ಯ ಎಸಗುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ನಾಗೇಶನ ಕುರಿತು ಮತ್ತಷ್ಟು ಮಾಹಿತಿ
ಆ್ಯಸಿಡ್ ನಾಗೇಶ ತಿರುವಣ್ಣಾಮಲೈನ ರಮಣ ಆಶ್ರಮದಲ್ಲಿ ಧ್ಯಾನ ಮಾಡುವಂತೆ ನಟಿಸುತ್ತಿದ್ದ ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ವಾಸ್ತವ್ಯ ಹಾಗೂ ಸ್ನಾನಕ್ಕಾಗಿ ಆತ ತಿರುವಣ್ಣಾಮಲೈನ ವಿಶ್ವವಿಖ್ಯಾತ ಅರುಣಾಚಲೇಶ್ವರ ದೇವಸ್ಥಾನ ಮತ್ತು ದೇವಸ್ಥಾನದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಆಶ್ರಮವನ್ನು ಬಳಸುತ್ತಿದ್ದ.
ದೇವಸ್ಥಾನಕ್ಕೆ ಹೋದ ದಿನವೇ ಖಾವಿ ಬಟ್ಟೆಗಳನ್ನು ಖರೀದಿಸಿದ್ದ ಎನ್ನಲಾಗಿದೆ. ನಿತ್ಯ ಎರಡು ಮೂರು ಬಾರಿ ಅಶ್ರಮದಿಂದ ದೇವಸ್ಥಾನಕ್ಕೆ, ದೇವಸ್ಥಾನದಿಂದ ಅಶ್ರಮಕ್ಕೆ ಹೋಗುತ್ತಿದ್ದ. ದೇವಸ್ಥಾನದ ಬಳಿ ಸ್ನಾನ ಮುಗಿಸಿ ಆಶ್ರಮಕ್ಕೆ ಧ್ಯಾನ ಮಾಡಲು ಹೋಗುತ್ತಿದ್ದ. ಅಥವಾ ಹಾಗೆ ನಟಿಸುತ್ತಿದ್ದ. ಪುನಃ ದೇವಸ್ಥಾನಕ್ಕೆ ಹೋಗಿ ಮಲಗುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಇದನ್ನೂ ಓದಿ| Acid Attack | ಬೆಂಗ್ಳೂರ್ To ತಿರುವಣ್ಣಾಮಲೈ: ಆ್ಯಸಿಡ್ ನಾಗನ Travel History