ಬೆಂಗಳೂರು: ತಲೆಮರೆಸಿಕೊಂಡ ಎಂಟು ದಿನಗಳ ಬಳಿಕ ಒಡಿಶಾದ ಕಟಕ್‌ನ ರೈಲು ನಿಲ್ದಾಣವೊಂದರಲ್ಲಿ (Cuttack railway Station) ಟಿ ಶರ್ಟ್ ಮತ್ತು ಬರ್ಮುಡಾದೊಂದಿಗೆ (T- Shirt and Barmuda) ಅನಾಥ ಸ್ಥಿತಿಯಲ್ಲಿ ಬಂಧನಕ್ಕೆ ಒಳಗಾದ ಹಿರೇಹಡಗಲಿಯ ಹಾಲ ಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri Swameeji) ಅವರು ಬೆಂಗಳೂರು ಪುರಪ್ರವೇಶ (Entered Bangalore) ಮಾಡಿದ್ದಾರೆ. ಸೆ. 11ರಂದು ರಾತ್ರಿ ಹನ್ನೊಂದು ಗಂಟೆಗೆ ಹಿರೇಹಡಗಲಿಯಿಂದ ಪರಾರಿಯಾದ ಸ್ವಾಮೀಜಿ ಸೆ. 18ರ ರಾತ್ರಿ 9.25ಕ್ಕೆ ಕಾಶಿಗೆ ಹೋಗುವ ರೈಲಿನಲ್ಲಿ ಸಿಕ್ಕಿಬಿದ್ದಿದ್ದರು. ಅಲ್ಲಿಂದ ಅವರನ್ನು ವಿಮಾನ ಮೂಲಕ ಬೆಂಗಳೂರಿಗೆ ಕರೆ ತರಲಾಗಿದೆ. ಹಾಲಶ್ರೀ ಸ್ವಾಮೀಜಿ ಬಂಧನದ ಸುದ್ದಿ ಕೇಳಿ ಚೈತ್ರಾ ಕುಂದಾಪುರ ಫುಲ್ ಖುಷ್ (Chaitra Kundapura Full kush) ಆಗಿದ್ದಾಳೆ!
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಮೀಜಿಯನ್ನು ಎಲ್ಲರೂ ಹೊರಬರುವ ಎಕ್ಸಿಟ್‌ನಿಂದ ಕರೆದುಕೊಂಡು ಬರದೆ ವಿಐಪಿಗಳಿಗಾಗಿ ಮೀಸಲಿಟ್ಟ ಅತಿ ಸುರಕ್ಷಿತ ಎಕ್ಸಿಟ್ ಮೂಲಕ ಮಾಧ್ಯಮಗಳ ಕಣ್ಣು ತಪ್ಪಿಸಿ ಹೊರಗೆ ತರಲಾಯಿತು. ಅಲ್ಲಿಂದ ಅವರನ್ನು ಮೈಸೂರಿಗೆ ಕರೆದೊಯ್ಯಲಾಗಿದೆ ಎಂಬ ಸುದ್ದಿ ಒಮ್ಮೆ ಹರಡಿತ್ತು. ಆದರೆ, ಅವರನ್ನು ಕರೆದುಕೊಂಡು ಹೋಗಿದ್ದು ಮಡಿವಾಳದಲ್ಲಿರುವ ಟೆಕ್ನಿಕಲ್ ಸೆಲ್‌ಗೆ! ಮಡಿವಾಳ ಟೆಕ್ನಿಕಲ್ ಸೆಲ್‌ಗೆ ಕರೆದೊಯ್ಯುವ ಮೊದಲು ಹಾಲಸ್ವಾಮಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.
ಗೋವಿಂದ ಪೂಜಾರಿ ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ 5 ಕೋಟಿ ರೂ.ವಂಚಿಸಿದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಾಲಶ್ರೀ ಅವರನ್ನು ಮಡಿವಾಳದ ಟೆಕ್ನಿಕಲ್ ಸೆಂಟರ್‌ಗೆ ತಂದು ಪ್ರಾಥಮಿಕ ಹಂತದ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ವಿಚಾರಣೆ ನಡೆಸಿ ಒಂದಿಷ್ಟು ಮಾಹಿತಿ ಪಡೆದು ಬಳಿಕ ವಿಶ್ರಾಂತಿಗೆ ಕಳುಹಿಸುವ ಸಾಧ್ಯತೆಗಳಿವೆ. ಬುಧವಾರ ಬೆಳಗ್ಗೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ಬಳಿಕ ಸಿಸಿಬಿ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಟಕ್‌ನಲ್ಲಿ ಪಡೆದ ಟ್ರಾನ್ಸಿಟ್ ವಾರಂಟ್‌ಗೆ 24 ಗಂಟೆ ಕಾಲಾವಕಾಶ ಇರುವುದರಿಂದ ಬುಧವಾರ ಕೋರ್ಟ್‌ಗೆ ಹಾಜರುಪಡಿಸಲು ಅವಕಾಶವಿದೆ.
ಚೈತ್ರಾ ಕುಂದಾಪುರ ಫುಲ್ ಫುಷ್, ಕಾಲ ಮೇಲೆ ಕಾಲು ಹಾಕಿ…
ಇತ್ತ ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನವಾಗುತ್ತಿದ್ದಂತೆಯೇ ಸಿಕ್ಕಾಪಟ್ಟೆ ಖುಷಿಪಟ್ಟಿದ್ದು ಚೈತ್ರಾ ಕುಂದಾಪುರ. ನಾನು ಎ1 ಆರೋಪಿಯಾಗಿದ್ದರೂ ಹಾಲಶ್ರೀ ಸ್ವಾಮೀಜಿ ಬಂಧನವಾದರೆ ಎಲ್ಲಾ ಫೋಕಸ್ ಅವರ ಮೇಲೆ ಶಿಫ್ಟ್ ಆಗುತ್ತದೆ ಎಂದು ಮೊದಲೇ ತಿಳಿದಿರುವ ಆಕೆ ಬಂಧನದ ಬಳಿದ ಮೊದಲ ಬಾರಿ ಮನಬಿಚ್ಚಿ ನಕ್ಕಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ನಾಟಕವಾಡಿ, ವಿಚಾರಣೆಗೆ ಸಹಕಾರ ನೀಡದೆ ಸತಾಯಿಸಿದ ಚೈತ್ರಾ ಕುಂದಾಪುರಳನ್ನು ಮಂಗಳವಾರವೂ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಯಿತು. ಆದರೆ, ಎಲ್ಲರ ಗಮನ ಸ್ವಾಮೀಜಿ ಮೇಲೆ ಇದ್ದಿದ್ದರಿಂದ ಸಾವಕಾಶವಾಗಿಯೇ ವಿಚಾರಣೆ ನಡೆದಿದೆ.
ಈ ನಡುವೆ ಸಂಜೆ ಸಿಸಿಬಿ ಕಚೇರಿಯಿಂದ ಸಾಂತ್ವನ ಕೇಂದ್ರಕ್ಕೆ ಹೊರಟ ಚೈತ್ರಾ ಕುಂದಾಪುರ ಮುಖದಲ್ಲಿ ನಗುವೋ ನಗು. ಸಿಸಿಬಿ ಪೊಲೀಸ್ರ ಜೀಪ್ ಏರುತ್ತಿದ್ದಂತೆಯೇ ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದಾಳೆ ಚೈತ್ರಾ ಕುಂದಾಪುರ. ಆಕೆ ಸಾಮಾನ್ಯವಾಗಿ ಮಾಸ್ಕ್ ಹಾಕಿಕೊಂಡು ಮುಖ ಮುಚ್ಚಿಕೊಂಡೇ ಇರುತ್ತಿದ್ದಳು. ಆದರೆ, ಇವತ್ತು ಪೂರ್ತಿ ಮುಖ ತೋರಿಸಿ, ಫುಲ್ ಸ್ಮೈಲ್ ಕೊಟ್ಟು ಬಳಿಕ ಮಾಸ್ಕ್ ಹಾಕಿಕೊಂಡಿದ್ದಾಳೆ.
ಸ್ವಾಮೀಜಿ ಸಿಕ್ಕಾಕಿಕೊಳ್ಳಿ ಎಲ್ಲಾ ಹೊರಗೆ ಬರ್ತದೆ ಅಂದಿದ್ದಳು
ಬಂಧನವಾಗಿ ಸಿಸಿಬಿ ಕಸ್ಟಡಿಗೆ ಸಿಕ್ಕಿದ ಮೊದಲ ದಿನ ಅಂದರೆ ಸೆಪ್ಟೆಂಬರ್ 14ರಂದು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಬಂದ ದಿನ ಚೈತ್ರಾ ಕುಂದಾಪುರ ಒಂದು ಬಾಂಬ್ ಹಾಕಿದ್ದಳು. ಸ್ವಾಮೀಜಿ ಸಿಕ್ಕಾಕಿಕೊಳ್ಳಿ ಎಲ್ಲಾ ಸತ್ಯ ಹೊರಗೆ ಬರ್ತದೆ, ದೊಡ್ಡ ದೊಡ್ಡವರ ಹೆಸರೆಲ್ಲ ಹೊರಗೆ ಬರ್ತದೆ ಎಂದು ಹೇಳಿದ್ದಳು. ಈಗ ಸ್ವಾಮೀಜಿ ಸಿಕ್ಕಾಕಿಕೊಂಡಿದ್ದಾರೆ. ಏನೇನು ಹೊರಗೆ ಬರುತ್ತದೆ ಕಾದು ನೋಡಬೇಕು. ಚೈತ್ರಾ ಕುಂದಾಪುರ ನಗುವಂತೂ ಹೊರಗೆ ಬಂದಿದೆ.
ಇದನ್ನೂ ಓದಿ: Chaitra Kundapura : ಬಿಜೆಪಿ ಟಿಕೆಟ್ ವಂಚನೆ ಜಾಲದ ಹಿಂದೆ ದೊಡ್ಡ ದೊಡ್ಡವರಿದ್ದಾರಾ?; ಚೈತ್ರಾ ಕುಂದಾಪುರ ಸ್ಫೋಟಕ ಹೇಳಿಕೆ