Site icon Vistara News

Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್‌ ದೂರು!

MP Tejaswi surya participate at Nagarthapet protest and KPCC Legal Cell complaint against him

ಬೆಂಗಳೂರು: ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಯೊಂದರಲ್ಲಿ ಹನುಮಾನ್‌ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಅಂಗಡಿಯಾತನ ಮೇಲೆ ಹಲ್ಲೆ (Nagarthapet assault case) ಮಾಡಿದ ಕೃತ್ಯವನ್ನು ಖಂಡಿಸಿ ಬಿಜೆಪಿ (BJP Karnataka) ಬೃಹತ್‌ ಪ್ರತಿಭಟನೆಯನ್ನು ನಡೆಸಿದೆ. ಈ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿಗೆ ಕಾಂಗ್ರೆಸ್‌ (Congress Karnataka) ದೂರು ನೀಡಿದೆ. ನಗರ್ತಪೇಟೆಯಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಲಾಗಿದೆ.

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿಗೆ ಕೆಪಿಸಿಸಿ ಕಾನೂನು ಘಟಕದಿಂದ (KPCC Legal Cell) ದೂರು ನೀಡಲಾಗಿದೆ. ಬೆಂಗಳೂರಿನ ನಗರ್ತಪೇಟೆಯಲ್ಲಿ ಅಂಗಡಿ ಮಾಲೀಕರೊಬ್ಬರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಕೋಮು ದ್ವೇಷ ಮೂಡಿಸುವ ಸಲುವಾಗಿ ಬಿಜೆಪಿಯ ನಾಯಕರು ಘಟನೆಯನ್ನು ತಿರುಚಿರುತ್ತಾರೆ. ಅಲ್ಲದೆ, ಘಟನೆ ನಡೆದ ಸ್ಥಳದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಲು ಕರೆ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದೆ.

ಕಾಂಗ್ರೆಸ್‌ ದೂರಿನಲ್ಲೇನಿದೆ?

ಲೋಕಸಭೆಯ ಚುನಾವಣೆಯ (Lok Sabha Election 2024) ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶದಿಂದ ಬೆಂಗಳೂರಿನ ನಗರ್ತಪೇಟೆಯಲ್ಲಿ ಪ್ರತಿಭಟನೆ ನಡೆಸಲು ಪ್ರಚೋದಿಸುವ ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲು ಮಾಡಿಕೊಳ್ಳಬೇಕು.

ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಗರ್ತಪೇಟೆಯಲ್ಲಿ ಅಂಗಡಿ ಮಾಲೀಕರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಕೋಮು ದ್ವೇಷ ಮೂಡಿಸುವ ಸಲುವಾಗಿ ಬಿಜೆಪಿಯ ನಾಯಕರು ತಿರುಚಿರುತ್ತಾರೆ. ದಿನಾಂಕ:18-03-2024 ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿಸುಬ್ರಮಣ್ಯ ಭೇಟಿ ನೀಡಿ ಅಂಗಡಿಯ ಮುಂದೆ ಗುಂಪು ಸೇರಿಸಿ 19 ಮಾರ್ಚ್ 2024 ರ ಮಧ್ಯಾಹ್ನ 12 ಗಂಟೆಗೆ ಹನುಮಾನ್ ಚಾಲೀಸಾ ಪಠಣೆ ಮಾಡಲು ಕರೆ ನೀಡಿ ಧಾರ್ಮಿಕ ಘೋಷಣೆಗಳನ್ನು ಕೂಗಿರುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಚುನಾವಣಾ ಆಯೋಗದ ಪ್ರಕಾರ ಚುನಾವಣೆಯ ಸಂದರ್ಭದಲ್ಲಿ ಕೋಮು, ಮತ, ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೃತ್ಯವೆಸಗುವುದು ಅಪರಾಧ. ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆಗೆ ಕರೆ ನೀಡಿರುವ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಕೆಪಿಸಿಸಿ ವಕ್ತಾರ ಮತ್ತು ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಹಲ್ಲೆ ಪ್ರಕರಣ?

ಭಾನುವಾರ ಸಾಯಂಕಾಲ 6.15ರ ಸುಮಾರಿಗೆ ಐದು ಮಂದಿ ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಗೆ ಬಂದಿದ್ದಾರೆ. ಅಲ್ಲಿ ಹಿಂದು ದೇವರ ಭಜನೆ ಹಾಕಿದ್ದರಿಂದ ಬಂದ್‌ ಮಾಡಲು ಹೇಳಿದ್ದಾರೆ. ಅದಕ್ಕೆ ಅಂಗಡಿಯಾತ ಮುಖೇಶ್‌, ನನ್ನ ಅಂಗಡಿ ನನ್ನ ಇಷ್ಟ ಎಂದು ವಿರೋಧ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮುಖೇಶ್‌ ಮೇಲೆ ದಾಳಿ ಮಾಡಿದ್ದಾರೆ. ಮುಖೇಶ್‌ ಸಹ ಆವೇಶದಿಂದ ಪ್ರತಿದಾಳಿ ಮಾಡಿದ್ದಾರೆ. ಆದರೆ, ಆರೋಪಿಗಳು ನಾಲ್ಕೈದು ಮಂದಿ ಇದ್ದಿದ್ದರಿಂದ ಮುಖೇಶ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಈವರೆಗೆ ಒಟ್ಟು ಐದು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಬ್ಬ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಲಾಗಿದೆ.

ಇದನ್ನೂ ಓದಿ: Hanuman Chalisa: ನಗರ್ತಪೇಟೆಯಲ್ಲಿ ಗುಡುಗಿದ ‘ಕೇಸರಿ’; ಕಠಿಣ ಕ್ರಮದ ಭರವಸೆ, ಪ್ರತಿಭಟನೆಗೆ ವಿರಾಮ

ಪ್ರತಿಭಟನೆ ನಡೆಸಿ ಕೈಬಿಟ್ಟ ಬಿಜೆಪಿ

ಈ ಸಂಬಂಧ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ (BJP Karnataka) ಬೃಹತ್‌ ಪ್ರತಿಭಟನೆ ನಡೆಸಿತ್ತು. ಸಂಸದ ತೇಜಸ್ವಿ ಸೂರ್ಯ (Tejasvi Surya) ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಘಟನಾ ಸ್ಥಳದಲ್ಲಿ ಜೈ ಶ್ರೀರಾಮ್‌ (Jai Shriram) ಘೋಷಣೆ ಕೂಗಲಾಗಿತ್ತು. ಶೋಭಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ತೇಜಸ್ವಿ ಸೂರ್ಯ ಅವರು ಪೊಲೀಸರಿಗೆ ಗುರುತು ಸಿಗದಂತೆ ಕ್ಯಾಪ್‌ ಹಾಗೂ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಸ್ಥಳಕ್ಕೆ ಬಂದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಹಿಂದುಗಳು ಸೇರಿ ಪ್ರತಿಭಟನೆಯನ್ನು ನಡೆಸಿದ್ದರು. ಆಗ ಪೊಲೀಸ್‌ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ವಾಪಸ್‌ ಪಡೆಯಲಾಗಿದೆ.

Exit mobile version