Site icon Vistara News

Hanuman Chalisa: ನಗರ್ತಪೇಟೆಯಲ್ಲಿ ಹಿಂದೂ ಯುವಕನ ಮೇಲಿನ ಹಲ್ಲೆಗೆ ಪ್ರಕಾಶ್ ರೈ ಪ್ರತಿಕ್ರಿಯೆ ಹೀಗಿದೆ!

Hanuman Chalisa Prakash Raj reacted to the attack on a Hindu youth in Nagarthapet

ಬೆಂಗಳೂರು: ಹಿಂದುತ್ವ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಡೆ ಬಗ್ಗೆ ಆಗಾಗ ಕಿಡಿಕಾರುತ್ತಲೇ ಬರುತ್ತಿರುವ ನಟ ಪ್ರಕಾಶ್‌ ರೈ ಈ ಬಾರಿ ಹಿಂದು ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಹೇಳಿದ್ದಾರೆ. ಮೊಬೈಲ್‌ ಅಂಗಡಿಯೊಂದರಲ್ಲಿ ಹನುಮಾನ್‌ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಅಂಗಡಿಯಾತನ ಮೇಲೆ ಹಲ್ಲೆ (assault case) ಮಾಡಿದ ಕೃತ್ಯವನ್ನು ರೈ ಖಂಡಿಸಿದ್ದಾರೆ. ಈ ಘಟನೆಯನ್ನು ಯಾರೇ ಮಾಡಿದ್ದರೂ ಖಂಡನೀಯ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಕಾಶ್‌ ರೈ ಅಕೌಂಟ್‌ ಹ್ಯಾಕ್‌ ಆಗಿರಬೇಕು, ಹೀಗೆ ಹಿಂದುಗಳ ಪರವಾಗಿ ನೀವು ನಿಂತರೆ, ಶಾಂತಿ ಪ್ರಿಯರ ಬೆಂಬಲ ನಿಮಗೆ ಸಿಗದೇ ಹೋಗಬಹುದು ಎಂದು ಕಾಲೆಳೆದಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪ್ರಕಾಶ್‌ ರೈ, ನಗರ್ತಪೇಟೆಯಲ್ಲಿನ ಹಲ್ಲೆ ಪ್ರಕರಣವನ್ನು ಕಟುವಾಗಿ ಖಂಡಿಸಿದ್ದಾರೆ. ಇದೊಂದು ಗೂಂಡಾ ವರ್ತನೆಯಾಗಿದ್ದು, ಸಹಿಸಲು ಅಸಾಧ್ಯ. ಯಾವುದೇ ಧರ್ಮದವರು ಈ ರೀತಿ ಮಾಡಿದರೂ ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ.

ಪ್ರಕಾಶ್‌ ರೈ ಟ್ವೀಟ್‌ನಲ್ಲೇನಿದೆ?

“ಈ ಗೂಂಡಾಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಯಾವುದೇ ಧರ್ಮದ ಯಾವುದೇ ವ್ಯಕ್ತಿಯಿಂದ ಇಂತಹ ಗೂಂಡಾಗಿರಿ ಕೃತ್ಯಗಳು ನಡೆದರೂ ಅದನ್ನು ಯಾವುದೇ ಕಾರಣಕ್ಕೂ ಸಹಿಸಬಾರದು” ಎಂದು #justasking ಹ್ಯಾಷ್‌ಟ್ಯಾಗ್‌ ಮೂಲಕ ಪ್ರಕಾಶ್‌ ರೈ ಪೋಸ್ಟ್‌ ಮಾಡಿದ್ದರು.

ಅಚ್ಚರಿ ಹೊರಹಾಕಿದ ನೆಟ್ಟಿಗರು

ಪ್ರಕಾಶ್‌ ರೈ ಅವರ ಈ ಟ್ವೀಟ್‌ಗೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನಿಜವಾಗಿಯೂ ಪ್ರಕಾಶ್‌ ರೈ ಅವರೇನಾ ಎಂದು ಪ್ರಶ್ನೆ ಮಾಡಿದ್ದಾರೆ. ಮಗದೊಬ್ಬರು ಪ್ರತಿಕ್ರಿಯೆ ನೀಡಿ, “ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಅನ್ನಿಸುತ್ತಿದೆ. ಏಕೆಂದರೆ ಹಲ್ಲೆಗೊಳಗಾದ ಅಂಗಡಿಯ ಮಾಲೀಕ ಒಬ್ಬ ಹಿಂದು ಆಗಿದ್ದಾನೆ’ ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು “ಇದು ಮೋಸ” (ಚೀಟಿಂಗ್‌ ಕರ್ತಾ ಹೈ ತೂ) ಎಂದು ವ್ಯಂಗ್ಯವಾಡಿದ್ದಾರೆ.

“ಸರ್ ದಯವಿಟ್ಟು ಹಾಗೆ ಮಾಡಬೇಡಿ. ಇಲ್ಲದಿದ್ದರೆ ಶಾಂತಿಯುತ ಸಮುದಾಯವು ನಿಮ್ಮನ್ನು ಬೆಂಬಲಿಸುವುದನ್ನು ನಿಲ್ಲಿಸಿಬಿಡುತ್ತದೆ” ಎಂದು ಸ್ಮೈಲಿಂಗ್‌ ಇಮೋಜಿ ಹಾಕಿ ಕುಟುಕಿದ್ದಾರೆ. ಅಲ್ಲದೆ, “ನೀವು ಈಗ ಸಂತ್ರಸ್ತ ಮಾತನಾಡುತ್ತಿರುವ ವಿಡಿಯೊವನ್ನು ಹಾಕುವುದಲ್ಲ, ಆತನ ಮೇಲೆ ದಾಳಿ ಮಾಡುತ್ತಿರುವ ವಿಡಿಯೊವನ್ನು ಪೋಸ್ಟ್‌ ಮಾಡಬೇಕಿತ್ತು, ನಾಚಿಕೆಯಾಗಬೇಕು ನಿಮಗೆ ಎಂದು ಇನ್ನೊಂದು ಕಮೆಂಟ್‌ನಲ್ಲಿ ಹಾಕಲಾಗಿದೆ. ಆದರೆ, ಮತ್ತೆ ಕೆಲವರು ಪ್ರಕಾಶ್‌ ರೈ ಬೆಂಬಲಕ್ಕೆ ನಿಂತಿದ್ದಾರೆ. ನಿಜವಾದ ಭಾರತೀಯರು ಸದಾ ಭಾರತದ ಪ್ರಜಾಪ್ರಭುತ್ವನ್ನು ಗೌರವಿಸುತ್ತಾರೆ” ಎಂದು ಒಬ್ಬರು ಹೇಳಿದ್ದಾರೆ.

ಏನಿದು ಹಲ್ಲೆ ಪ್ರಕರಣ?

ಭಾನುವಾರ ಸಾಯಂಕಾಲ 6.15ರ ಸುಮಾರಿಗೆ ಐದು ಮಂದಿ ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಗೆ ಬಂದಿದ್ದಾರೆ. ಅಲ್ಲಿ ಹಿಂದು ದೇವರ ಭಜನೆ ಹಾಕಿದ್ದರಿಂದ ಬಂದ್‌ ಮಾಡಲು ಹೇಳಿದ್ದಾರೆ. ಅದಕ್ಕೆ ಅಂಗಡಿಯಾತ ಮುಖೇಶ್‌, ನನ್ನ ಅಂಗಡಿ ನನ್ನ ಇಷ್ಟ ಎಂದು ವಿರೋಧ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮುಖೇಶ್‌ ಮೇಲೆ ದಾಳಿ ಮಾಡಿದ್ದಾರೆ. ಮುಖೇಶ್‌ ಸಹ ಆವೇಶದಿಂದ ಪ್ರತಿದಾಳಿ ಮಾಡಿದ್ದಾರೆ. ಆದರೆ, ಆರೋಪಿಗಳು ನಾಲ್ಕೈದು ಮಂದಿ ಇದ್ದಿದ್ದರಿಂದ ಮುಖೇಶ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಈವರೆಗೆ ಒಟ್ಟು ಐದು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಪ್ರತಿಭಟನೆ ನಡೆಸಿ ಕೈಬಿಟ್ಟ ಬಿಜೆಪಿ

ಈ ಸಂಬಂಧ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ (BJP Karnataka) ಬೃಹತ್‌ ಪ್ರತಿಭಟನೆ ನಡೆಸಿತ್ತು. ಸಂಸದ ತೇಜಸ್ವಿ ಸೂರ್ಯ (Tejasvi Surya) ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಘಟನಾ ಸ್ಥಳದಲ್ಲಿ ಜೈ ಶ್ರೀರಾಮ್‌ (Jai Shriram) ಘೋಷಣೆ ಕೂಗಲಾಗಿತ್ತು. ಶೋಭಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ತೇಜಸ್ವಿ ಸೂರ್ಯ ಅವರು ಪೊಲೀಸರಿಗೆ ಗುರುತು ಸಿಗದಂತೆ ಕ್ಯಾಪ್‌ ಹಾಗೂ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಸ್ಥಳಕ್ಕೆ ಬಂದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಹಿಂದುಗಳು ಸೇರಿ ಪ್ರತಿಭಟನೆಯನ್ನು ನಡೆಸಿದ್ದರು. ಆಗ ಪೊಲೀಸ್‌ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ವಾಪಸ್‌ ಪಡೆಯಲಾಗಿದೆ.

Exit mobile version