Site icon Vistara News

ಲೂಟಿ ಮಂತ್ರಿಗಳ ಕ್ಷೇತ್ರದಲ್ಲಿ CM ಪ್ರದಕ್ಷಿಣೆ: ಸಿದ್ದರಾಮಯ್ಯ ವಿರುದ್ಧ HDK ಆಕ್ರೋಶ

H.D Kumaraswamy'

ಬೆಂಗಳೂರು: ದಾಸರಹಳ್ಳಿ ಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ ₹780 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಬಿಜೆಪಿ ಸರ್ಕಾರ ಅದನ್ನು ತಡೆ ಹಿಡಿದಿದೆ. ರಾಜಕಾಲುವೆಗೆ ₹130 ಕೋಟಿ ಹಣ ಬಿಡುಗಡೆ ಮಾಡಿದ್ದೆ. ಅದನ್ನು ಬಿಡುಗಡೆ ಮಾಡಿಲ್ಲ ಎಂದು ದಾಸರಹಳ್ಳಿ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರ ಜತೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಚಿಕ್ಕಬಾಣವಾರ ಕೆರೆ 102 ಎಕರೆ ಇದೆ. ಈ ಕೆರೆಗೆ ಸ್ಯಾನಿಟರಿ ನೀರು ಬರುತ್ತಿದೆ. ಕೆರೆ ಪಕ್ಕದಲ್ಲಿ ಮಾಜಿ ಶಾಸಕರು ಹಣ ಪಡೆದು ಅಪರ್ಟ್‌ಮೆಂಟ್ ಕಟ್ಟಿಸಲು ಅನುಮತಿ ಕೊಟ್ಟಿದ್ದಾರೆ. ಈ ಅಪಾರ್ಟ್‌ಮೆಂಟ್‌ನಿಂದ ಸ್ಯಾನಿಟರಿ ನೀರು ಬರುತ್ತಿದೆ. ನಾನು ಕೆರೆ ಅಭಿವೃದ್ಧಿ ಗೆ ಕೊಟ್ಟ ಹಣವೂ ಬಿಡುಗಡೆ ಮಾಡಿಲ್ಲ ಎಂದು ಆರೋಪ ಮಾಡಿದರು.

ಇತ್ತ ಕೆರೆಗಳನ್ನು ಮುಚ್ಚಿಕೊಂಡು ಬರುತ್ತೀರಿ, ಅತ್ತ ಕಾಂಗ್ರೆಸ್‌ನವರು ಮೇಕೆದಾಟು ಅಂತ ಬಾಯಿ ಬಡಿದುಕೊಳ್ಳುತ್ತಾರೆ. ಹೀಗೆ ಕೆರೆ ಮುಚ್ಚಿಕೊಂಡು ಬಂದು ಪಾದಯಾತ್ರೆ ಅಂದರೆ ಏನು ಪ್ರಯೋಜನ ಎಂದು ಹೆಚ್‌ಡಿಕೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | ಕೆರೆ ನುಂಗಿ ಹಾಕಿ ಮೇಕೆದಾಟು ಎಂದರೆ ಏನು ಪ್ರಯೋಜನ?: ಕುಮಾರಸ್ವಾಮಿ ಆಕ್ರೋಶ

ಉದ್ಯಮಿ ಮೋಹನ್ ದಾಸ್ ಪೈ, ಸೇವ್ ಬೆಂಗಳೂರು ಎಂದು ಪ್ರಧಾನಿಗೆ ಟ್ವೀಟ್‌ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ, ಭ್ರಷ್ಟ ಬಿಬಿಎಂಪಿ ಅಂತ ಟ್ವೀಟ್ ಮಾಡಿ ಸೇವ್ ಬೆಂಗಳೂರು (ಬೆಂಗಳೂರು ರಕ್ಷಿಸಿ) ಎಂದು ಹೇಳಿದ್ದಾರೆ. ಕರೆಪ್ಟ್ ಬಿಬಿಎಂಪಿ ಅಂತ ಹೇಳಬೇಡಿ. ಕರೆಪ್ಟ್ ಬಿಜೆಪಿ ಅಂತ ಹೇಳಿ ಎಂದರು.

ಸಿದ್ದರಾಮಯ್ಯನವರ ಕಾಲದಲ್ಲಿ ಹೆಚ್ಚು ಅನುದಾನ ಕೊಟ್ಟಿದ್ದೇನೆ. ಆ ಅನುದಾನದಲ್ಲಿ ಎಷ್ಟು ಜನರ ಸಮಸ್ಯೆ ಸರಿ ಆಗಿದೆ? ಎಷ್ಟು ಲೂಟಿ ಆಯ್ತು? ಅವರ ಐದು ವರ್ಷದ ಅವಧಿಯಲ್ಲಿ ಏನು ಆಗಿದೆಯೆಂದು ಸಿದ್ದರಾಮಯ್ಯ ಅವರು ಹೇಳಲಿ. ಲೂಟಿ ಮಾಡಿದ ಮಂತ್ರಿಗಳ ಕ್ಷೇತ್ರದಲ್ಲಿ ಪ್ರದಕ್ಷಿಣೆ ಮಾಡ್ತೀರ. ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದರೆ ಇವತ್ತು ಯಾಕೆ ಈ ಸಮಸ್ಯೆ ಆಗುತಿತ್ತು ಎಂದು ವಾಗ್ದಾಳಿ ನಡೆಸಿದರು.

ನಾನು ಕೆಲಸ ಮಾಡಿಲ್ಲ, ನಿಮ್ಮ ತರಹ ಲೂಟಿಯೂ ಮಾಡಿಲ್ಲ. ನನ್ನನ್ನು ಹೆಸರಿಗೆ ಸಿಎಂ ಮಾಡಿದ್ರಿ. ನನಗೆ ಒಂದೇ ಒಂದು ವರ್ಗಾವಣೆ ಮಾಡಲು ಬಿಡಲಿಲ್ಲ. ಬೆಂಗಳೂರಿನ ಸಂಬಂಧ ಒಂದೇ ಒಂದು ಸಭೆ ಮಾಡಲು ಬಿಡಲಿಲ್ಲ. ಡಿಸಿಎಂ ಆಗಿದ್ದ ಪರಮೇಶ್ವರ್ ಅವರನ್ನು ಕೇಳಿ.‌ ಇದಕ್ಕೆ ಕಾರಣ ಸಿದ್ದರಾಮಯ್ಯ. ನನ್ನ ಬಗ್ಗೆ ಸಿದ್ದರಾಮಯ್ಯ ಮಾತಾಡೋದು ಬೇಡ. ನಾನು ಸಿದ್ದರಾಮಯ್ಯಗೆ ಒಪನ್ ಚಾಲೆಂಜ್ ಮಾಡುತ್ತೇನೆ. ಬನ್ನಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ದಾಸರಹಳ್ಳಿ ಶಾಸಕ ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ. ಎ. ಶರವಣ ಮುಂತಾದವರು ಜತೆಯಲ್ಲಿದ್ದರು.

ಇದನ್ನೂ ಓದಿ | ಜನತಾ ಜಲಧಾರೆ ಯಶಸ್ಸಿಗೆ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ ಎಚ್‌.ಡಿ. ಕುಮಾರಸ್ವಾಮಿ

Exit mobile version