Site icon Vistara News

Hidden Camera : ಲೇಡಿಸ್‌ ವಾಶ್‌ರೂಮ್‌ನ ಕಸದ ಬುಟ್ಟಿಯಲ್ಲಿತ್ತು ಮೊಬೈಲ್‌; ರೆಕಾರ್ಡ್‌ ಆಯ್ತು 2 ಗಂಟೆಗಳ ವಿಡಿಯೊ!

Hidden camera

ಬೆಂಗಳೂರು: ಕೆಲವು ಕಿಡಿಗೇಡಿಗಳ ಕೃತ್ಯಕ್ಕೆ ಹೆಣ್ಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಹೋಟೆಲ್‌, ಕಾಫಿ ಶಾಪ್‌, ಶಾಪಿಂಗ್‌ ಮಾಲ್‌ನ ಟ್ರಯಲ್‌ ರೂಮ್‌ನಿಂದ ಹಿಡಿದು ವಾಶ್‌ ರೂಮ್‌ನಲ್ಲಿ ಹಿಡನ್‌ ಕ್ಯಾಮೆರಾಗಳನ್ನು (Hidden Camera) ಇಟ್ಟು, ಹೆಣ್ಮಕ್ಕಳ ವಿಡಿಯೊ ಮಾಡಿಕೊ‌ಳ್ಳುವ ಗ್ಯಾಂಗ್‌ ಇದೆ. ಸದ್ಯ ಬೆಂಗಳೂರು ನಗರದ ಬಿಇಎಲ್ ರಸ್ತೆಯಲ್ಲಿರುವ ಪ್ರಸಿದ್ಧ ಥರ್ಡ್ ವೇವ್ ಕಾಫಿ ಕೆಫೆಯ (Third Wave Coffee cafe) ಲೇಡಿಸ್‌ ವಾಶ್‌ ರೂಮ್‌ನ ಕಸದ ಬುಟ್ಟಿಯಲ್ಲಿ ಮೊಬೈಲ್‌ ಪತ್ತೆಯಾಗಿದೆ. ಸುಮಾರು 2 ಗಂಟೆಗಳ ಕಾಲ ಮೊಬೈಲ್‌ ಕ್ಯಾಮೆರಾದಲ್ಲಿ ವಿಡಿಯೊ ರೆಕಾರ್ಡ್‌ ಆಗಿದೆ.

ಥರ್ಡ್‌ ವೇವ್‌ ಕಾಫಿ ಕೆಫೆ ಸಿಬ್ಬಂದಿಯೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಕೆಫೆ ಸಿಬ್ಬಂದಿಯೇ ಮೊಬೈಲ್ ಫೋನ್ ಅನ್ನು ಮಹಿಳಾ ಶೌಚಾಲಯದಲ್ಲಿ ಬಚ್ಚಿಟ್ಟಿದ್ದು, ಸುಮಾರು ಎರಡು ಗಂಟೆಗಳ ಕಾಲ ವಿಡಿಯೊ ರೆಕಾರ್ಡಿಂಗ್ ಆಗಿದೆ ಎಂದು ‘ಗ್ಯಾಂಗ್ಸ್ ಆಫ್ ಸಿನಿಪುರ್’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

“ನಾನು ಬೆಂಗಳೂರಿನ ಥರ್ಡ್ ವೇವ್ ಕಾಫಿ ಕೆಫೆಗೆ ಹೋಗಿದ್ದೆ. ಶೌಚಾಲಯದ ಸೀಟಿಗೆ ಎದುರಾಗಿ ಇರುವ ಕಸದ ಬುಟ್ಟಿಯಲ್ಲಿ ಮೊಬೈಲ್‌ ಫೋನ್‌ ಅಡಗಿಸಿಟ್ಟಿರುವುದು ಕಂಡು ಬಂತು. ಫೋನ್‌ ಫ್ಲೈಟ್‌ ಮೋಡ್‌ನಲ್ಲಿ ಇದ್ದ ಕಾರಣಕ್ಕೆ ಯಾರಿಗೂ ಗೊತ್ತಾಗಿಲ್ಲ. ಡಸ್ಟ್‌ಬೀನ್‌ನಲ್ಲಿ ಸಣ್ಣದೊಂದು ರಂಧ್ರ ಮಾಡಿ, ಫೋನ್‌ ಇಟ್ಟು ಕ್ಯಾಮೆರಾ ಆನ್‌ ಮಾಡಲಾಗಿತ್ತು. ಇದನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಫೋನ್‌ ಇರುವುದು ಗೊತ್ತಾಗಿದೆ. ಆ ಫೋನ್‌ ಅಲ್ಲಿನ ಸಿಬ್ಬಂದಿಯದ್ದು ಎಂದು ಗೊತ್ತಾಯಿತು ಎಂದು ತಿಳಿಸಿದ್ದಾರೆ.

Hidden camera

ಇಂತಹ ಕೆಫೆಗಳು ಅಥವಾ ರೆಸ್ಟೋರೆಂಟ್‌ಗಳು ಎಷ್ಟೇ ಪ್ರಸಿದ್ಧವಾಗಿದ್ದರೂ, ಇವತ್ತಿನಿಂದ ನಾನು ಯಾವುದೇ ವಾಶ್ ರೂಮ್‌ ಬಳಸಬೇಕಾದರೂ ನೂರು ಸಲ ಯೋಚನೆ ಮಾಡುತ್ತೇನೆ. ನೀವೂ ಕೂಡ ಹುಷಾರಾಗಿ ಎಂದು ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿಬ್ಬಂದಿಯನ್ನು ವಜಾ ಮಾಡಿದ ಥರ್ಡ್‌ ವೇವ್‌ ಕಾಫಿ ಕೆಫೆ

ಸೋಶಿಯಲ್‌ ಮೀಡಿಯಾದಲ್ಲಿ ಈ ಘಟನೆ ಕುರಿತು ಥರ್ಡ್‌ ವೇವ್‌ ಕಾಫಿ ಕೆಫೆ ಎಕ್ಸ್‌ನಲ್ಲಿ ಕ್ಷಮೆ ಕೇಳಿ ಪೋಸ್ಟ್‌ ಮಾಡಿದೆ. ಬಿಇಎಲ್‌ ರಸ್ತೆಯಲ್ಲಿರುವ ಕಫೆಯಲ್ಲಿ ನಡೆದಿರುವ ಈ ಘಟನೆಗೆ ವಿಷಾದಿಸುತ್ತೇವೆ. ನಮ್ಮ ಸಿಬ್ಬಂದಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ. ಜತೆಗೆ ಗ್ರಾಹಕರ ಸುರಕ್ಷತೆಗಾಗಿ ಮತ್ತಷ್ಟು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

Hidden camera

ಕ್ಯಾಮೆರಾ ಇಟ್ಟ ಕಾಮುಕ ಅರೆಸ್ಟ್‌

ಕ್ಯಾಮೆರಾ ಕಂಡೊಡನೆ ಗಾಬರಿಯಾದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೃತ್ಯದ ಸ್ಥಳಕ್ಕಾಗಮಿಸಿದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜತೆಗೆ ಭದ್ರಾವತಿ ಮೂಲದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡಿದ್ದು ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ. ಕಾಫಿ ಶಾಪ್‌ನಲ್ಲಿ ಕಾಫಿ ಮೇಕರ್ ಆಗಿದ್ದ ಮನೋಜ್ (23) ಎಂಬಾತನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಫೋನ್ ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version