Site icon Vistara News

Hindu activist murder : ಹ್ಯಾರಿಸ್‌ ಕೊಲೆಯಲ್ಲಿ ಭಾಗಿಯಲ್ಲ ಎಂದು ಹೇಗೆ ಹೇಳಿದಿರಿ; ಎಸ್‌ಪಿಗೆ ಸಿ.ಟಿ ರವಿ ತರಾಟೆ

Yuva Brigade activist murder

ಮೈಸೂರು: ತಿ. ನರಸೀಪುರದಲ್ಲಿ ನಡೆದ ಹಿಂದೂ ಕಾರ್ಯಕರ್ತ (yuva Brigade activist) ವೇಣುಗೋಪಾಲ್‌ ನಾಯಕ್‌ (Venugopal Nayak) ಕೊಲೆ ಪ್ರಕರಣದಲ್ಲಿ (Hindu activist murder) ಆರೋಪಿಯಾಗಿರುವ ಹ್ಯಾರಿಸ್‌ ಕೊಲೆಯಲ್ಲಿ ಭಾಗಿಯಾಗಿಲ್ಲ ಎಂಬ ಅಲ್ಲಿನ ಎಸ್ಪಿ ಹೇಳಿಕೆಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (BJP National General Secretary) ಸಿ.ಟಿ. ರವಿ (CT Ravi) ಕೆಂಡ ಕಾರಿದ್ದಾರೆ. ತನಿಖೆಯನ್ನೇ ನಡೆಸದೆ ಹ್ಯಾರಿಸ್‌ ಕೊಲೆಯಲ್ಲಿ ಭಾಗಿಯಾಗಿಲ್ಲ ಎಂದು ಯಾಕೆ ಹೇಳಿದ್ದು, ಯಾರನ್ನು ಮೆಚ್ಚಿಸಲು, ಏನನ್ನು ಮುಚ್ಚಿ ಹಾಕಲು ಈ ಪ್ರಯತ್ನ ಎಂದು ಸಿ.ಟಿ. ರವಿ ಹೇಳಿದ್ದಾರೆ.

ಹ್ಯಾರಿಸ್‌ ಈ ಘಟನೆಯಲ್ಲಿ ಭಾಗಿಯಾಗಿಲ್ಲ. ಅವನು ಒಂದು ಮೊಬೈಲ್‌ ಶಾಪ್‌ ಮಾಲೀಕನಾಗಿದ್ದು ಗಲಾಟೆ ನಡೆಯುತ್ತಿದ್ದ ಜಾಗಕ್ಕೆ ಬಂದಿದ್ದ ಎಂದು ಎಸ್ಪಿ ಹೇಳಿದ್ದರು. ಮಂಗಳವಾರ ತಿ. ನರಸೀಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ. ರವಿ ಅವರು ಎಸ್‌ಪಿ ಈ ರೀತಿ ಹೇಳುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕರಾದ ಅಶ್ವತ್ಥ ನಾರಾಯಣ, ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕರಾದ ಎನ್.ಮಹೇಶ್, ಪ್ರೊ.ಕೆ.ಆರ್.ಮಲ್ಲಿಕಾರ್ಜುನ್, ಮೇಯರ್ ಶಿವಕುಮಾರ್, ಮುಖಂಡ ಅಪ್ಪಣ್ಣ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಅವರನ್ನು ಒಳಗೊಂಡ ನಿಯೋಗದ ನೇತೃತ್ವ ವಹಿಸಿ ವೇಣುಗೋಪಾಲ ನಾಯಕ್‌ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ನಡುವೆ ಮಾತನಾಡಿದ ಅವರು ಪ್ರಕರಣದ ದಿಕ್ಕಿ ತಪ್ಪಿಸಲು ಯತ್ನಿಸಬಾರದು ಎಂದು ಎಚ್ಚರಿಸಿದರು.

ʻʻಇನ್ನೂ ತನಿಖೆ ಆಗಿಲ್ಲ. ಆದರೂ ಎಸ್ಪಿ ಯಾವ ಆಧಾರದ ಮೇಲೆ ಪ್ರಕರಣದಲ್ಲಿ ಹ್ಯಾರಿಸ್ ಭಾಗಿಯಾಗಿಲ್ಲ ಅಂತ ಹೇಳಿಕೆ ನೀಡಿದರು?ʼʼ ಎಂದು ಕೇಳಿದ ಸಿ.ಟಿ. ರವಿ ಅವರು, ಹ್ಯಾರಿಸ್ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದಾನೆ ಅಂತ ನಮಗೆ ಮಾಹಿತಿ ಇದೆ. ಕೊಲೆಯನ್ನು ನೋಡಿದವರು ಇದ್ದಾರೆʼʼ ಎಂದು ಹೇಳಿದರು.

ಹಂತಕರು ಕಾಂಗ್ರೆಸ್ ಜತೆ ನಂಟು ಹೊಂದಿರುವುದು ಜಗಜ್ಜಾಹೀರಾಗಿದೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಓಡಾಡಿದ್ದಾರೆ. ಅವರ ಪುತ್ರ ಸುನೀಲ್ ಬೋಸ್ ಗಳಸ್ಯ ಕಂಠಸ್ಯ ದೋಸ್ತಿಗಳು. ಯಾರೊಂದಿಗೆ ಗುಂಡು- ತುಂಡು ಪಾರ್ಟಿ ಮಾಡುತ್ತಿದ್ದರು ಅನ್ನೋದು ನಮಗೂ ಗೊತ್ತಿದೆ ಎಂದು ಸಿ.ಟಿ. ರವಿ ಹೇಳಿದರು.

ʻʻಸಿಎಂ ಸಿದ್ದರಾಮಯ್ಯ ದೂರದ ವಿಚಾರಗಳಿಗೆಲ್ಲ ಸ್ಪಂದಿಸುತ್ತಾರೆ‌. ತಮ್ಮ ಆಪ್ತ ಡಾ.ಮಹದೇವಪ್ಪ ಪ್ರತಿನಿಧಿಸುವ ತಮ್ಮದೇ ವರುಣ ಕ್ಷೇತ್ರದ ಪಕ್ಕದಲ್ಲಿ ನಡೆದಿರುವ ಘಟನೆ ಬಗ್ಗೆ ತುಟಿ ಬಿಚ್ಚಿಲ್ಲ. ಅಷ್ಟರ ಮಟ್ಟಿಗಾದರೂ ಮಾನವೀಯತೆ ತೋರಿಲ್ಲ ಯಾಕೆʼ ಎಂದು ಪ್ರಶ್ನಿಸಿದ ಅವರು, ಪ್ರಕರಣದ ಸಮಗ್ರ ತನಿಖೆ ಆಗಬೇಕು ಎಂದರು.

ʻʻಈಗ ಅದ್ಯಾರೋ ಬಿಜೆಪಿ ಕಾರ್ಪೋರೇಟರ್ ಜತೆ ಆರೋಪಿಯನ್ನು ತಳುಕು ಹಾಕಿದ್ದಾರೆ. ನಾವು ಯಾರನ್ನೂ ರಕ್ಷಣೆ ಮಾಡಲು ಬಂದಿಲ್ಲ. ಆರೋಪಿಗಳಿಗೆ ಶಿಕ್ಷೆ ಆಗಬೇಕುʼʼ ಎಂದರು.

ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

ಕೊಲೆಯಾದ ವೇಣುಗೋಪಾಲ ನಾಯಕ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಶಾಸಕ ಡಾ. ಸಿ.ಎನ್.‌ ಅಶ್ವತ್ಥ ನಾರಾಯಣ್ ಆಗ್ರಹಿಸಿದರು.

ʻʻಸರ್ಕಾರದಲ್ಲಿ ಪರಿಹಾರ ನೀಡಲು ಬೇಕಾದಷ್ಟು ದಾರಿ ಇವೆ. ಸರ್ಕಾರದ ವತಿಯಿಂದ 25 ಲಕ್ಷ ರೂ. ಪರಿಹಾರ ಕೊಡಬೇಕು. ವೇಣುಗೋಪಾಲ್ ಪತ್ನಿಗೆ ಉದ್ಯೋಗ ಕೊಡಬೇಕು. ಸಾವಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ.
ಸಾವಿಗೆ ನ್ಯಾಯ ಸಿಗಬೇಕುʼʼ ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ : CT Ravi : ಕೈ ಸರ್ಕಾರ ಬಂದ ಬಳಿಕ ಕೆಲವು ಮುಸ್ಲಿಮರಿಗೆ ಮದ; 14 ಘಟನೆ ಪಟ್ಟಿ ಮಾಡಿದ ಸಿ.ಟಿ ರವಿ

Exit mobile version