Site icon Vistara News

CII ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಿ: ಗೃಹಸಚಿವ ಅಮಿತ್‌ ಶಾ

Amit shah Meeting

ಬೆಂಗಳೂರು: ಸಿಐಐ ಕೇವಲ ಪ್ರಾತನಿಧಿಕ ಸಂಸ್ಥೆ ಮಾತ್ರವಾಗಿರದೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವ ವೇದಿಕೆಯೂ ಆಗಬೇಕು ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಕರೆ ನೀಡಿದರು.

ಕೇಂದ್ರ ಸಂಸ್ಕೃತಿ ಸಚಿವಾಲಯ, ಸಿಐಐ ಹಾಗೂ ಇಂಡಿಯಾ@75 ಫೌಂಡೇಷನ್‌ ವತಿಯಿಂದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ 3ನೇ ಆವೃತ್ತಿಯ ʻಸಂಕಲ್ಪ್‌ ಸೆ ಸಿದ್ಧಿʼ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಯುವ ಪೀಳಿಗೆಯು ಸ್ವಾತಂತ್ರ್ಯದ ಇತಿಹಾಸದಿಂದ ದೂರವಾಗಿದೆ. ಸ್ವಾತಂತ್ರ್ಯ ಪ್ರಾಪ್ತಿಯ ಇತಿಹಾಸವನ್ನು ಅರಿಯದಿದ್ದರೆ ಭವಿಷ್ಯದ ಮಾರ್ಗದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಹೀಗಾಗಿ ಯುವ ಪೀಳಿಗೆಗೆ ಈ ವಿಚಾರವನ್ನು ತಿಳಿಸಲು ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಯೋಜನೆ ಮಾಡಲಾಗುತ್ತಿದೆ.

ಸಿಐಐ ಕೇವಲ ಪ್ರಾತನಿಧಿಕ ಸಂಸ್ಥೆ ಮಾತ್ರವಾಗಿರದೆ, ಉತ್ತಮ ವೇದಿಕೆಯೂ ಆಗಬೇಕು ಎಂದು ಅಮಿತ್‌ ಷಾ ಕರೆ ನೀಡಿದರು. ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು ಸಿಐಐನಲ್ಲಿ ಒಂದು ವೇದಿಕೆ ನಿರ್ಮಾಣ ಮಾಡಬೇಕಿದೆ. ಕೈಗಾರಿಕೆ ಕ್ಷೇತ್ರ ತನ್ನ ವೇಗ ವರ್ಧನೆ ಬದಲಿಗೆ, ಪ್ರಮಾಣವನ್ನು ಬದಲಾಯಿಸಲು ಯೋಚಿಸಬೇಕು. ಇದಕ್ಕಾಗಿ ಬಂಡವಾಳದ ಕೊರತೆ ಇರಬಹುದು. ಕೈಗಾರಿಕಾ ಸಂಸ್ಥೆಗಳು ಒಟ್ಟುಗೂಡಬೇಕು. ಸರ್ಕಾರವೂ ತನ್ನ ಕೊಡುಗೆ ನೀಡಬಹುದು. ಸಂಶೋಧನೆಯ ಪ್ರಯೋಜನವನ್ನು ನಮ್ಮ ಮುಂದಿನ ಪೀಳಿಗೆ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಸಿಐಐ ಆಲೋಚಿಸಬೇಕಿದೆ ಎಂದರು.

ದೇಶದ ಸ್ವಾತಂತ್ರ್ಯದ ನೂರನೇ ವರ್ಷದ ಸಂದರ್ಭದಲ್ಲಿ ನಮ್ಮ ದೇಶ ಯಾವ ಹಂತದಲ್ಲಿರಬೇಕು ಎಂಬ ಕುರಿತು ಈಗ ಸಂಕಲ್ಪ ಮಾಡಬೇಕು. ಮುಂದಿನ 25 ವರ್ಷಗಳು ನಾವೆಲ್ಲರೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪ್ರಧಾನಿ ಮೋದಿಯವರ ಮಾತಿನಲ್ಲಿ ಇದನ್ನು ಹೇಳುವುದಾದರೆ ಇದನ್ನು ಅಮೃತ ಕಾಲ ಎನ್ನಬಹುದು. ನಮ್ಮ ನಿರಂತರ ಪ್ರಯತ್ನದ ಫಲವಾಗಿಯೇ ನಾವು ಇಂದಿನ ಹಂತಕ್ಕೆ ತಲುಪಿದ್ದೇವೆ.

ಪ್ರಧಾನಿ ಮೋದಿಯವರ ಕಾರಣದಿಂದಾಗಿಯೇ ಇಡೀ ವಿಶ್ವ ಬೆರಗುಗಣ್ಣಿನಿಂದ ಭಾರತವನ್ನು ನೋಡುತ್ತಿದೆ. ದೇಶ ಸುಧಾರಣೆ ಆಗದ, ಬೆಳವಣಿಗೆ ಕಾಣದ ಯಾವುದೇ ಕ್ಷೇತ್ರ ಇಂದು ಇಲ್ಲ. ಇಷ್ಟು ಸಮಗ್ರ ಸ್ವರೂಪದ ಏಳಿಗೆ ಬಹುಶಃ ಎಂದಿಗೂ ಆಗಿಲ್ಲ. ಸರ್ಕಾರದ ಪ್ರಯತ್ನದ ಜತೆಗೆ ಜನರ ಪಾಲ್ಗೊಳ್ಳುವಿಕೆಯೂ ಇದಕ್ಕೆ ಕಾರಣ ಎಂದರು.

ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್‌ ಶಾ, 2014ಕ್ಕೂ ಮೊದಲು ಒಂದಲ್ಲ ಒಂದು ಹಗರಣಗಳದ್ದೇ ಸುದ್ದಿಯಾಗಿರುತ್ತಿತ್ತು. ಪ್ರತಿನಿತ್ಯ ಸುದ್ದಿಪತ್ರಿಗಳಲ್ಲಿ ಇದೇ ಶೀರ್ಷಿಕೆ ಇರುತ್ತಿತ್ತು. ಬಂಡವಾಳವಾದ ಮಿತಿಮೀರಿತ್ತು, ಉದ್ಯಮಸ್ನೇಹಿ ವಾತಾವರಣ ಕುಸಿಯುತ್ತಿತ್ತು, ದೇಶದ ಗೌರವವೂ ಕುಸಿಯುತ್ತಿತ್ತು. ಈ ಸಮಯದಲ್ಲಿ ಸ್ವತಃ ಪ್ರಧಾನಿ ತಮ್ಮನ್ನು ಪ್ರಧಾನಿ ಎಂದು ಭಾವಿಸುತ್ತಿರಲಿಲ್ಲ. ಆದರೆ ಸರ್ಕಾರದ ಎಲ್ಲ ಮಂತ್ರಿಗಳೂ ತಮ್ಮನ್ನು ಪ್ರಧಾನ ಮಂತ್ರಿ ಎಂದು ಭಾವಿಸಿದ್ದರು ಎಂದು ವ್ಯಂಗ್ಯ ಮಾಡಿದರು.

ಇದೆಲ್ಲವನ್ನೂ ಗಮನಿಸುತ್ತಿದ್ದ ದೇಶದ ಜನರು, ಮೂವತ್ತು ವರ್ಷದಲ್ಲೆ ಬಹುಮತದ ಸರ್ಕಾರ ನೀಡಿದರು. ಕೊರೊನಾ ಸಂಕಷ್ಟದ ಸಮಯದಲ್ಲೂ ದೇಶ ಅತಿ ಹೆಚ್ಚು ಉತ್ಪನ್ನವನ್ನು ರಫ್ತು ಮಾಡಿದೆ, ಅತಿ ಹೆಚ್ಚು ಸೇವಾ ರಫ್ತು ಮಾಡಿದೆ, ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸಿದೆ. ಈಗಾಗಲೆ ಭಾರತದ ಕುರಿತು ಮಾತನಾಡುವಾಗ ಅನೇಕರು ಯೋಚನೆ ಮಾಡುವಂತಹ ಸ್ಥಿತಿ ಇದೆ. ಮುಂದಿನ 25 ವರ್ಷದ ನಂತರ ಭಾರತದ ಆರ್ಥಿಕ ಶಕ್ತಿಯನ್ನು ಮೀರಿಸುವವರು ಯಾರೂ ಇರುವುದಿಲ್ಲ ಎಂದರು.

ಇದನ್ನೂ ಓದಿ | ಸಿದ್ದರಾಮೋತ್ಸವ ಎಫೆಕ್ಟ್‌ ಕಡೆಗಣಿಸುವಂತಿಲ್ಲ; ಅಮಿತ್‌ ಶಾಗೆ ಯಡಿಯೂರಪ್ಪ ರಿಪೋರ್ಟ್

ತಜ್ಞರು ಪುಸ್ತಕ ಓದುತ್ತ ಕುಳಿತಿರಲಿ

ಕೋವಿಡ್‌ ಸಂದರ್ಭದಲ್ಲಿ ದಾರಿ ಕಾಣದಂತಹ ವಾತಾವರಣ ನಿರ್ಮಾಣವಾಗಿತ್ತು, ಸಮಾಜವನ್ನು ಕೋವಿಡ್‌ನಿಂದ ರಕ್ಷಣೆ ಮಾಡದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಲಸಿಕೆ ರೂಪಿಸಲು ಪ್ರಾಮುಖ್ಯತೆ ನೀಡಲಾಯಿತು ಎಂದ ಅಮಿತ್‌ ಶಾ, ತಥಾಕಥಿತ ತಜ್ಞರ ವಿರುದ್ಧ ವಾಗ್ದಾಳಿ ನಡೆಸಿದರು. ಆರೋಗ್ಯದ ಸುಧಾರಣೆಯೊಂದಿಗೆ, ಆರ್ಥಿಕತೆ ಕುಸಿಯದಂತೆ ನೋಡಿಕೊಳ್ಳುವ ಪ್ರಯತ್ನವೂ ನಡೆಯಿತು. ಇದೇ ಕಾರಣಕ್ಕೆ, ವಿಶ್ವದಲ್ಲೇ ಕೋವಿಡ್‌ನಿಂದ ಅತ್ಯಂತ ಕಡಿಮೆ ಬಾಧೆಗೊಳಗಾದ ದೇಶ ಭಾರತ ಎಂದು ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ. ವಿಶ್ವದ ದೊಡ್ಡ ಆರ್ಥಿಕ ಶಕ್ತಿಯೂ ನಿರ್ವಹಿಸಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಸಮಾಜ ಕೋವಿಡ್‌ ಭಯದಿಂದ ಮುಕ್ತವಾದ ಕೂಡಲೆ ಆರ್ಥಿಕತೆಯಲ್ಲಿ ಚೈತನ್ಯ ಮೂಡಿತು. ಇಷ್ಟು ದೊಡ್ಡ ಸಂಖ್ಯೆಯ ನಾಗರಿಕರಿಗೆ ಎರಡು ವರ್ಷ ಉಚಿತವಾಗಿ ಮನೆಗೆ ಆಹಾರ ಧಾನ್ಯ ನೀಡಿದ ಉದಾಹರಣೆ ಯಾವುದೇ ದೇಶದಲ್ಲಿಲ್ಲ.

ಈ ಹಿಂದೆ ಜನರು ಮನೆಯನ್ನು ನಡೆಸುವುದು, ಹೊಟ್ಟೆ ತುಂಬಿಸಿಕೊಳ್ಳುವುದರಲ್ಲೇ ನಿರತರಾಗಿದ್ದರು. ಇಂತಹ ಮೂಲಸೌಕರ್ಯಗಳನ್ನು ನರೇಂದ್ರ ಮೋದಿ ಸರ್ಕಾರ ಪೂರೈಸಿತು. ಇಂದು ಇಂತಹ ಪರಿವಾರಗಳು ತಮ್ಮ ಮನೆಗೊಂದು ಸ್ಕೂಟಿ ಕೊಳ್ಳಬೇಕು, ಒಂದು ಕೂಲರ್‌ ಖರೀದಿಸಬೇಕು ಎಂಬ ಆಲೋಚನೆಯೊಂದಿಗೆ ಜೀವನಮಟ್ಟವನ್ನು ಉತ್ತಮಗೊಳಿಸಿಕೊಳ್ಳುತ್ತಿದೆ. ದೇಶದ ಅರ್ಥ ವ್ಯವಸ್ಥೆಗೆ ಕೊಡುಗೆಯನ್ನೇ ನೀಡದಿದ್ದ ಅನೇಕರು ಇಂದು ಕೊಡುಗೆ ನೀಡುತ್ತಿದ್ದಾರೆ.

ಆರ್ಥಿಕ ತಜ್ಞರು ತಮ್ಮ ಪುಸ್ತಕಗಳಲ್ಲಿ ಇಲ್ಲ ಎಂಬ ಕಾರಣಕ್ಕೆ ಸರ್ಕಾರದ ಯೋಜನೆಗಳನ್ನು ಟೀಕಿಸಿದರು. ಪ್ರಧಾನ ಮಂತ್ರಿಯವರು ಪ್ರತಿ ಮನೆಗೆ ನೀರು ನೀಡುವುದರಿಂದ, ಪ್ರತಿಯೊಬ್ಬರಿಗೂ ಮನೆ ಕಟ್ಟಿಕೊಡುವುದರಿಂದ, ಪ್ರತಿ ಮನೆಗೆ ವಿದ್ಯುತ್‌ ನೀಡುವುದರಿಂದ ಜಿಡಿಪಿ ಹೆಚ್ಚುತ್ತದೆ ಎಂದು ಹೇಳಿದರು. ಆದರೆ ಆರ್ಥಿಕ ತಜ್ಞರು ಎನ್ನಿಸಿಕೊಂಡವರಿಗೆ ಇದು ಹೊಳೆಯಲಿಲ್ಲ. ನಾವು ಆರ್ಥಿಕತೆಗೆ ಮಾನವೀಯ ಮುಖ ನೀಡಿದ್ದೇವೆ. ಆರ್ಥಿಕ ತಜ್ಞರು ಎಲ್ಲಿದ್ದಾರೊ ಅಲ್ಲೇ ಇರಲಿ ಎಂದು ಟೀಕಿಸಿದರು.

ಇದನ್ನೂ ಓದಿ | ಕರ್ನಾಟಕದ ಆರ್ಥಿಕತೆಯನ್ನು1 ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ: ಸಿಎಂ ಬೊಮ್ಮಾಯಿ

Exit mobile version