ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹನಿ ಟ್ರ್ಯಾಪ್ ಗ್ಯಾಂಗ್‌ವೊಂದು (Honey trap) ಸಿಕ್ಕಿಬಿದ್ದಿದೆ. ಮದುವೆಯಾಗಿ ಮಕ್ಕಳಿದ್ದರೂ ಐಷಾರಾಮಿ ಜೀವನಕ್ಕಾಗಿ ಮಹಿಳೆ ಹನಿಟ್ರ್ಯಾಪ್ ಮಾಡುತ್ತಿದ್ದಳು. ಮಿಸ್ ಕಾಲ್ ಕೊಡುವ ಈ ಖತರ್ನಾಕ್ ಲೇಡಿ, ಹುಡುಗರನ್ನು ಲವ್‌ನಲ್ಲಿ ಬೀಳುವಂತೆ ಮಾಡಿ ಪಟಾಯಿಸುತ್ತಿದ್ದಳು.
ಸದ್ಯ ಲೇಡಿ ಸೇರಿ ಸಂಪಿಗಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಜ್ಮಾಕೌಸರ್, ಮಹಮ್ಮದ್ ಆಶೀಕ್, ಖಲೀಲ್ ಬಂಧಿತ ಆರೋಪಿಗಳು. ಐನಾತಿ ಹೆಂಗಸು ಸಂಪಿಗೆಹಳ್ಳಿಯ ತನ್ನ ಮನೆಯನ್ನೇ ಹನಿಟ್ರ್ಯಾಪ್ ಅಡ್ಡೆಯಾಗಿ ಮಾಡಿಕೊಂಡಿದ್ದಳು.
ಮೊದಲಿಗೆ ಅಪರಿಚಿತ ಸಂಖ್ಯೆಗೆ ಕರೆ ಮಾಡುವ ಐನಾತಿ ಗ್ಯಾಂಗ್, ಬೆಂಗಳೂರಿನವರು ಎಂದು ಗೊತ್ತಾದರೆ ಸಾಕು ಸಲುಗೆಯಿಂದ ಮಾತಾಡುತ್ತಿದ್ದಳು. ಎಷ್ಟರ ಮಟ್ಟಿಗೆ ಎಂದರೆ ಕಷ್ಟ ಸುಖ ವಿಚಾರಿಸುವ ರೀತಿ ಹತ್ತಿರವಾಗುತ್ತಿದ್ದ ಚಾಲಾಕಿ ನಜ್ಮಾ, ನಂತರ ಪರಿಚಯ ಆದವರಿಂದಲೇ ಸಣ್ಣ ಮೊತ್ತದ ಹಣ ಪಡೆದು ಹಿಂದಿರುಗಿಸುತ್ತಿದ್ದಳು.
ಬಳಿಕ ನಿಧಾನವಾಗಿ ಯುವಕರನ್ನು ಲೈಂಗಿಕವಾಗಿ ಪ್ರಚೋದಿಸಿ ಮಾತನಲ್ಲೇ ಮೋಡಿ ಮಾಡುತ್ತಿದ್ದಳು. ಮನೆಯಲ್ಲಿ ಯಾರು ಇಲ್ಲ ಬಾ.. ಏಕಾಂತದಲ್ಲಿ ಕಾಲ ಕಳೆಯೋಣ ಎಂದು ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಇವಳನ್ನು ನಂಬಿ ಬಂದ ಯುವಕರನ್ನು ಸೀದಾ ಮನೆಯ ಬೆಡ್ ರೂಮ್‌ಗೆ ಕರೆದುಕೊಂಡು ಹೋಗುತ್ತಿದ್ದಳು.
ಇನ್ನೇನು ಯುವಕ ಖುಷಿಯಲ್ಲಿ ತೇಲಾಡುತ್ತಿದ್ದಾಗಲೇ ನಜ್ಮಾಕೌಸರ್ ಗ್ಯಾಂಗ್ ಎಂಟ್ರಿ ಕೊಡುತ್ತಿತ್ತು. ಯಾರೋ ನೀನು ಏಕೆ ಬಂದಿದ್ದೀಯಾ ಎಂದು ಬೆದರಿಸುತ್ತಿತ್ತು. ಹಣ ಕೊಡು, ಇಲ್ಲವಾದಲ್ಲಿ ರೇಪ್ ಕೇಸ್ ಹಾಕಿಸುತ್ತೇವೆ ಎಂದು ಧಮ್ಕಿ ಹಾಕಿ ವಸೂಲಿ ಮಾಡುತ್ತಿದ್ದರು. ಇದೇ ರೀತಿ ಕಳೆದ ವಾರ ಕೊರಿಯರ್ ಬಾಯ್‌ಗೆ ಟ್ರ್ಯಾಪ್ ಮಾಡಿದ್ದರು. ಸಂತ್ರಸ್ತ ಯುವಕ ಕೊಟ್ಟ ದೂರಿನನ್ವಯ ನಜ್ಮಾ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್ ಆಗಿದೆ.
ಇದನ್ನೂ ಓದಿ: Accident Case : ಮಹಿಳೆ ಮೇಲೆ ಮಣ್ಣಿನ ರಾಶಿ ಹಾಕಿದ ಜೆಸಿಬಿ ಚಾಲಕ; ಬಯಲು ಶೌಚಕ್ಕೆ ಹೋದಾಕೆ ಉಸಿರುಗಟ್ಟಿ ಸಾವು!
ಜಿಂಕೆ ಚರ್ಮ ಮಾರಾಟಕ್ಕೆ ಯತ್ನ
ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯ ಬಂಧನವಾಗಿದೆ. ಮೈಸೂರಿನ ಬೈಲುಕುಪ್ಪೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಗ್ರಾಮದ ಪುನೀತ್(25) ಬಂಧಿತ ಆರೋಪಿ. ಬೈಲಕುಪ್ಪೆ ಪೆಟ್ರೋಲ್ ಬಂಕ್ ಬಳಿ ಜಿಂಕೆ ಚರ್ಮವನ್ನು ಗೋಣಿಚೀಲದಲ್ಲಿ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ. ಖಚಿತ ಮಾಹಿತಿ ಆಧರಿಸಿದ ದಾಳಿ ನಡೆಸಿದ ಪೊಲೀಸರು ಆರೋಪಿ ಪುನೀತ್‌ನನ್ನು ವಶಕ್ಕೆ ಪಡೆದು, ಆತನ ವಿರುದ್ಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ ಐ ಅಜಯ್ ಕುಮಾರ್, ಸಿಬ್ಬಂದಿಯಾದ ಮುದ್ದುರಾಜು, ಮಹದೇವಪ್ಪ, ಸುರೇಶ್, ಚೇತನ್, ಮಹೇಶ್‌ರಿಂದ ಕಾರ್ಯಾಚರಣೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ