Site icon Vistara News

Huli karthik : ಬೋವಿ ಜನಾಂಗಕ್ಕೆ ಅವಮಾನ, ಹಾಸ್ಯ ನಟ ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಕೇಸ್; ಅಂದು ‘ಬಿಗ್ ಬಾಸ್’ ಇಂದು ‘ಅನುಬಂಧ’!

Casteist slur case filed against comedian Huli Karthik for insulting Bovi community

ಬೆಂಗಳೂರು: ಅಂದು ಬಿಗ್ ಬಾಸ್ ಆಯಿತು ಇಂದು ‘ಅನುಬಂಧ’ ಕಾರ್ಯಕ್ರಮದಲ್ಲಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಹಾಸ್ಯ ನಟ ಹುಲಿ ಕಾರ್ತಿಕ್‌ (Huli karthik) ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಸಾರ್ವಜನಿಕ ವಲಯದಲ್ಲಿದ್ದಾಗ ಪದ ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ನಿಷೇಧಿತ ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿ ನಟ ಹುಲಿ ಕಾರ್ತಿಕ್‌ ವಿರುದ್ಧ ದೂರು ದಾಖಲಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಆದರೂ ಆತನ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಒಂದು ಸಮುದಾಯಕ್ಕೆ ಅವಮಾನವಾಗುತ್ತದೆ ಎಂಬ ಕಾರಣಕ್ಕೆ ಈ ಹಿಂದೆ ಬಳಕೆಯಾಗುತ್ತಿದ್ದ ಕೆಲ ಶಬ್ಧಗಳನ್ನು ಕಾನೂನು ನಿಷೇಧ ಮಾಡಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಆ ಪದ ಬಳಕೆ ಮಾಡುವುದು ನಿಷೇಧವಾಗಿದೆ. ಸದ್ಯ ಸ್ಯಾಂಡಲ್‌ವುಡ್‌ನ ನಟ ಹಾಗು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಕಾರ್ತಿಕ್ ಅಲಿಯಾಸ್‌ ಹುಲಿ ಕಾರ್ತಿಕ್‌ ನಿಷೇಧಿತ ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾಗಿದೆ.

ಹಿಂದೊಮ್ಮೆ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ಕೂಡ ನಿಷೇಧಿತ ಪದ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ನಂತರ ಅದಕ್ಕೆ ಆಕೆ ಸ್ಪಷ್ಟನೆ ಕೂಡ ನೀಡಿದ್ದರು. ಆಕೆ ಮಾತನಾಡಿದ್ದ ಕ್ಲಿಪ್ಪಿಂಗ್‌ಗಳನ್ನು ಎಫ್ ಎಸ್ ಎಲ್ ಗೂ ಕಳಿಸಲಾಗಿತ್ತು. ಸದ್ಯ ಹುಲಿ ಕಾರ್ತಿಕ್ ಸರದಿ.

ಇದನ್ನೂ ಓದಿ: Actor Darshan : ಕೊನೆಗೂ ಪೊಲೀಸರ ಕೈಸೇರಿದ ದರ್ಶನ್, ಪವಿತ್ರಾಗೌಡರ ಮೊಬೈಲ್ ರಿಪೋರ್ಟ್! ಸಿಕ್ಕಿ ಬಿಡ್ತು ಮಹತ್ವದ ಸಾಕ್ಷ್ಯ?

ಕಳೆದ ತಿಂಗಳು ಖಾಸಗಿ ಚಾನಲ್‌ನಲ್ಲಿ ಪ್ರಸಾರವಾಗಿದ್ದ ಅನುಬಂಧ ಅವಾರ್ಡ್ ಎಂಬ ಕಾರ್ಯಕ್ರಮದಲ್ಲಿ ನಡೆದ ಘಟನೆ ಇದು. ಇಲ್ಲಿ ಬೋವಿ ಜನಾಂಗಕ್ಕೆ ಅವಮಾನ ಮಾಡುವ ರೀತಿಯಲ್ಲಿ ಪದ ಬಳಕೆ ಮಾಡಲಾಗಿದೆ. ಜತೆಗೆ ಜನಾಂಗವನ್ನು ತುಚ್ಛವಾಗಿ ಕಾಣಲಾಗಿದೆ ಎಂದು, ಲೋಕೇಶ್ ಎಂಬುವವರು ದೂರು ನೀಡಿದ್ದರು. ಹೀಗೆ ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ನಿಷೇಧಿತ ಪದ ಬಳಕೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ ಎಂದು ಲೊಕೇಶ್ ಅವರ ಆರೋಪವಾಗಿದೆ.

ಇಲ್ಲಿ ಕಾರ್ತಿಕ್ ಮಾತ್ರವಲ್ಲದೆ ಸ್ಕ್ರಿಪ್ಟ್ ರೈಟರ್ , ಕಾರ್ಯಕ್ರಮ ಆಯೋಜಕ‌, ನಿರ್ಮಾಪಕ , ನಿರ್ದೇಶಕ ವಿರುದ್ಧ ಕೂಡ ದೂರು ದಾಖಲಾಗಿದೆ. ಇನ್ನು ಇದಕ್ಕೆ ಸ್ಪಷ್ಟನೆ ನೀಡಿರುವ ನಟ ಕಾರ್ತಿಕ್ , ನಾನು ಹೊಂಡ ಅಂದಿದ್ದೇ ಹೊರತು ಜನಾಂಗಕ್ಕೆ ನೋವಾಗುವ ಶಬ್ಧವನ್ನ ಬಳಕೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಸದ್ಯ ಈ ವಿಡಿಯೋ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಸ್ಥಳ ಮಹಜರನ್ನು ಮುಗಿಸಿದ್ದಾರೆ. ಇನ್ನು ಕಾರ್ತಿಕ್ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version