ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಂಗ್ಲಾದೇಶ ವಲಸಿಗರು ಅಕ್ರಮ ದಂಧೆ ನಡೆಸುತ್ತಿದ್ದ ಪ್ರಕರಣ ಬಯಲಾಗಿದೆ. ಈವರೆಗೆ ಒಟ್ಟು 5 ಕೋಟಿಗೂ ಅಧಿಕ ಹಣವನ್ನು ಬಾಂಗ್ಲಾದೇಶಕ್ಕೆ ವರ್ಗಾವಣೆ ಮಾಡಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪ್ರಕರಣದ ವಿಚಾರಣೆಯ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿ ಬಯಲಾಗಿದೆ.
ಬಂಧಿತ ಆರೋಪಿಯನ್ನು ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಆತನ ಬಳಿ ದೆಹಲಿ ವಿಳಾಸದ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಮತ್ತೊಬ್ಬ ಆರೋಪಿ ಬಗ್ಗೆ ತಿಳಿದು ಬಂದಿದೆ. ಬಾಂಗ್ಲಾದೇಶ ಮೂಲದ ಸೈದುಲ್ ಅಕುನ್ ಎಂಬ ವ್ಯಕ್ತಿ ಸಾಹಿಲ್ ಅಹಮದ್ ಎಂಬ ನಕಲಿ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಾಸವಾಗಿದ್ದ. ಸೈದುಲ್ ಬಳಿ ಭಾರತದ ಪಾಸ್‌ಪೋರ್ಟ್ ಹಾಗೂ 24 ಆಧಾರ್ ಕಾರ್ಡ್ ಪತ್ತೆಯಾಗಿವೆ. ಬೆಂಗಳೂರು ಪೊಲೀಸರು ಇವುಗಳ ಮೂಲ ಹುಡುಕಿ ತನಿಖೆಗೆ ಮುಂದಾದಾಗ ಇನ್ನಷ್ಟು ಮಂದಿ ಇದೇ ರೀತಿ ಅಕ್ರಮವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದು ತಿಳಿದುಬಂದಿದೆ.
ಇವರ ನಕಲಿ ದಾಖಲಾತಿಯನ್ನು ಸೃಷ್ಟಿಸುತ್ತಿದ್ದ ಮಾಸ್ಟರ್‌ಮೈಂಡ್ ಬಗ್ಗೆ ಪೊಲೀಸರಿಗೆ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾ ವಲಸಿಗರ ನೆರವಿಗೆ ನಿಂತಿದ್ದು ಬೇರೆ ಯಾರೂ ಅಲ್ಲ, ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್. ಈತ ಈ ಹಿಂದೆ IBM ಎಂಬ ಪ್ರಸಿದ್ಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಂತರ ಡಿಜೆ ಹಳ್ಳಿಯಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದ. ಈ ಸೈಬರ್ ಸೆಂಟರ್ ಮೂಲಕವೇ ನಕಲಿ ಗುರುತಿನ ಚೀಟಿ ತಯಾರಾಗುತ್ತಿತ್ತು. ಆಧಾರ್ ಕಾರ್ಡ್ ಆದಿಯಾಗಿ ಭಾರತದ ಎಲ್ಲಾ ಗುರುತಿನ ಚೀಟಿಗಳು ಇಲ್ಲಿ ಸಿದ್ಧವಾಗುತ್ತಿತ್ತು.
ಇದಕ್ಕೆ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ಸೃಷ್ಟಿಸಲಾಗಿತ್ತು. 26 ಬಿಬಿಎಂಪಿ ವೈದ್ಯರ ಹೆಸರಿನಲ್ಲಿ ನಕಲಿ ಸೀಲ್ ಮತ್ತು ಸೈನ್ ಸಿದ್ಧಪಡಿಸಲಾಗಿತ್ತು. ಗೆಜೆಟೆಡ್ ಆಫೀಸರ್ ಸೀಲ್ ಮತ್ತು ಸೈನ್ ಮೂಲಕ ಆಧಾರ್ ಕಾರ್ಡ್ ಪಡೆಯಬಹುದಾಗಿತ್ತು. ಹಾಗಾಗಿ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಅಂಗಡಿಯಲ್ಲಿ ಈತನೇ ಸೀಲ್ ಮಾಡಿ ಕೊಡುತ್ತಿದ್ದ. ಇವುಗಳನ್ನು ಬಳಕೆ ಮಾಡಿಕೊಂಡು ಆರೋಪಿಗಳು ನಕಲಿ ಆಧಾರ್ ಕಾರ್ಡ್ ಮಾಡಿಕೊಂಡಿದ್ದರು. ಡಿ ಜೆ ಹಳ್ಳಿಯಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದ ಆರೋಪಿಗಳ ಕೈವಾಡವನ್ನು ಈಗ ಬೆಂಗಳೂರು ಪೊಲೀಸರು ಬಯಲು ಮಾಡಿದ್ದಾರೆ.
ಇದನ್ನೂ ಓದಿ: ಮೊಸಳೆಗಳಿಗೂ ಅಂಜದೆ ಈಜಿಕೊಂಡೇ ಭಾರತಕ್ಕೆ ಬಂದು ಪ್ರಿಯತಮನ ತೆಕ್ಕೆ ಸೇರಿದ ಬಾಂಗ್ಲಾ ಯುವತಿ