Site icon Vistara News

Hindu Temples : ದೇವಸ್ಥಾನ ಸಮಿತಿಗೆ ಅನ್ಯಧರ್ಮೀಯರ ನೇಮಕ; ದೇವಸ್ಥಾನಗಳ ಮಹಾಸಂಘ ವಿರೋಧ

Hindu Temples order

ಬೆಂಗಳೂರು: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು (Hindu Temples) ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ (Karnataka Hindu religous and Charitable Endoment act 2024)ದಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ (Temple Management Committee) ಅನ್ಯ ಸಮುದಾಯದವರನ್ನು (Members from other community) ನೇಮಕ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ. ಹೀಗಾಗಿ ವಿಧೇಯಕವನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ (Temple committee) ಆಗ್ರಹಿಸಿದೆ.

ಈ ಬಗ್ಗೆ ಮಹಾಸಂಘದ ರಾಜ್ಯ ಸಂಯೋಜಕರಾಗಿರುವ ಮೋಹನ ಗೌಡ (Mohan Gowda) ಅವರು ಹೇಳಿಕೆಯನ್ನು ನೀಡಿದ್ದಾರೆ. ಕರ್ನಾಟಕ ಸರಕಾರವು 16ನೇ ವಿಧಾನಸಭೆಯ 3ನೇ‌ ಅಧಿವೇಶನದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2024 ಕರ್ನಾಟಕ ರಾಜ್ಯ ಪತ್ರಿಕೆಯನ್ನು ಹೊರಡಿಸಿದ್ದು, ಇದರ 25ನೇ ಕಲಂನಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಅನ್ಯ ಸಮುದಾಯದವರನ್ನು ನೇಮಕ ಮಾಡುವ ತಿದ್ದುಪಡಿಯನ್ನು ಮಾಡಲಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಈ ಹಿಂದಿನ ತಿದ್ದುಪಡಿಯಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದೂಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಮುದಾಯದವರು ಇರುವಂತಿಲ್ಲ ಎಂಬ ನಿರ್ಣಯವಿತ್ತು, ಇದೀಗ ರಾಜ್ಯ ಸರಕಾರ ಇದನ್ನು ಬದಲಾವಣೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಮೋಹನ ಗೌಡ ಹೇಳಿದ್ದಾರೆ.

ಇದು ದೇವಸ್ಥಾನಗಳಲ್ಲಿ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರನ್ನು ಸೇರಿಸಿ ದೇವಸ್ಥಾನಗಳ ಪರಂಪರೆಯನ್ನು ಭಗ್ನ ಮಾಡುವ ಷಡ್ಯಂತ್ರವಾಗಿದೆ. ಹಿಂದೂ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಅನ್ಯ ಸಮುದಾಯದವರನ್ನು ನೇಮಕ ಮಾಡುವ ರಾಜ್ಯ ಸರಕಾರವು ಹಿಂದೂಗಳನ್ನು ವಕ್ಫ್ ಬೋರ್ಡಗೆ ನೇಮಕ ಮಾಡುತ್ತದೆಯೇ ಎಂದು ಮೋಹನ ಗೌಡ ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ :Karnataka Budget Session 2024: ದೇವಸ್ಥಾನಗಳ ಆದಾಯ 1 ಕೋಟಿ ಇದ್ದರೆ ಸರ್ಕಾರಕ್ಕೆ 10 ಲಕ್ಷ ರೂ. ಸಿಗುವಂತೆ ವಿಧೇಯಕ!

ಸರಕಾರದ ಈ ನಡೆಯು ಹಿಂದೂ ವಿರೋಧಿ ಧೋರಣೆಯನ್ನು ಬಿಂಬಿಸುತ್ತದೆ. ಆದ್ದರಿಂದ ಕೂಡಲೇ ರಾಜ್ಯ ಸರಕಾರವು ಈ ತಿದ್ದುಪಡಿಯನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಯೋಜಕರಾದ ಮೋಹನ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೋಹನ ಗೌಡ

ವ್ಯವಸ್ಥಾಪನಾ ಸಮಿತಿ ರಚನೆಗೆ ಸಂಬಂಧಿಸಿ ವಿಧೇಯಕದಲ್ಲಿರುವ ಸೂಚನೆಗಳೇನು?

ಒಂದು ಅಥವಾ ಹೆಚ್ಚು ಅಧಿಸೂಚಿತ ಸಂಸ್ಥೆಗಳಿಗೆ ಸಂಬಂಧಿಸಿದಂತೆ, ಅಧಿಸೂಚಿತ ಸಂಸ್ಥೆಗಳ ಒಟ್ಟು ವಾರ್ಷಿಕ ಆದಾಯವು ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮೀರಿದ್ದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತು, ಮತ್ತು ವಾರ್ಷಿಕ ಆದಾಯವು ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮೀರದಿದ್ದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ತು, ಭಕ್ತರ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳ ಅನುಯಾಯಿಗಳ ಹಾಗೂ ಧರ್ಮಾದಾಯ ಸಂಸ್ಥೆಗಳ ಫಲಾನುಭವಿಗಳ ಪೈಕಿಯಿಂದ ಒಂಬತ್ತು ಜನ ಸದಸ್ಯರನ್ನು ಮೀರದ ಒಂದು ವ್ಯವಸ್ಥಾಪನಾ ಸಮಿತಿಯನ್ನು ರಚಿಸತಕ್ಕದ್ದು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಹಾಗಿದ್ದರೆ ಸಮಿತಿಯಲ್ಲಿ ಯಾರ್ಯಾರು ಇರಬೇಕು?

1. ಒಂದು ದೇವಾಲಯದ ಸಂಬಂಧದಲ್ಲಿ ಪ್ರಧಾನ ಅರ್ಚಕ ಅಥವಾ ಅರ್ಚಕ;
2. ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟಿಗೆ ಸೇರಿದವರ ಪೈಕಿಯಿಂದ ಕೊನೇ ಪಕ್ಷ ಒಬ್ಬರು;
3. ಇಬ್ಬರು ಮಹಿಳೆಯರು;
4. ಸಂಸ್ಥೆಯು ಇರುವ ಸ್ಥಳದಲ್ಲಿ ವಾಸಿಸುತ್ತಿರುವ ವ್ಯಕ್ತಿಗಳ ಪೈಕಿಯಿಂದ ಕೊನೇ ಪಕ್ಷ ಒಬ್ಬರು ಇರಬೇಕು.
5. ಸಂಯೋಜಿತ ಸಂಸ್ಥೆಯ ಸಂದರ್ಭದಲ್ಲಿ ಹಿಂದೂ ಮತ್ತು ಇತರ ಧರ್ಮಗಳೆರಡರಿಂದಲೂ
ಸದಸ್ಯರನ್ನು ನೇಮಕ ಮಾಡಿಕೊಳ್ಳಬಹುದು
.
6.ಅಧಿಸೂಚಿತ ಸಂಸ್ಥೆಯ ಸಂಬಂಧದಲ್ಲಿ ವ್ಯವಸ್ಥಾಪನಾ ಸಮಿತಿಯನ್ನು ಅಲ್ಲಿ ಅನುಸರಿಸುತ್ತಿರುವ ರೂಢಿ ಹಾಗೂ ಆಚರಣೆಗಳಿಗನುಸಾರವಾಗಿ ರಚಿಸತಕ್ಕದ್ದು.

ಸಮಿತಿ ರಚನೆ ಮತ್ತು ಸಂಪ್ರದಾಯ ಪಾಲನೆಗೆ ಸೂಚನೆಗಳು

1. ರಾಜ್ಯ ಧಾರ್ಮಿಕ ಪರಿಷತ್ತು ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ತು, (1)ನೇ ಉಪಪ್ರಕರಣದ ಅಡಿಯಲ್ಲಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವಾಗ ಸಂಸ್ಥೆ ಅಥವಾ ಅದರ ಯಾವುದೇ ಶಾಖೆಯು ಯಾವ ಧಾರ್ಮಿಕ ಸಂಪ್ರದಾಯಕ್ಕೆ ಸೇರುತ್ತದೆಯೋ ಆ ಧಾರ್ಮಿಕ ಸಂಪ್ರದಾಯಕ್ಕೆ ಸೂಕ್ತ ಮನ್ನಣೆ ನೀಡತಕ್ಕದ್ದು.
2. ವ್ಯವಸ್ಥಾಪನಾ ಸಮಿತಿಯ ರಚನೆಯ ವಿಧಾನ, ಸದಸ್ಯರ ಪೂರ್ವವೃತ್ತಾಂತ ಹಾಗೂ ಇತರ ವಿಷಯ
ಯಾವುದಾದರೂ ಇದ್ದಲ್ಲಿ, ಅವುಗಳ ಸತ್ಯಾಪನೆಯನ್ನು, ನಿಯಮಿಸಬಹುದಾದ ಅಂಥ ರೀತಿಯಲ್ಲಿ
ಮಾಡತಕ್ಕದ್ದು.
3. ಯಾವೊಬ್ಬ ವ್ಯಕ್ತಿಯು ಒಂದೇ ಸಮಯದಲ್ಲಿ ಒಂದಕ್ಕಿತ ಹೆಚ್ಚು ವ್ಯವಸ್ಥಾಪನಾ ಸಮಿತಿಗಳಿಗೆ ಸದಸ್ಯನಾಗುವುದಕ್ಕೆ ಅವಕಾಶವಿಲ್ಲ.
4. ಯಾವುದೇ ಹಂತದಲ್ಲಿ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರುವ ಯಾವೊಬ್ಬ ವ್ಯಕ್ತಿಯು ವ್ಯವಸ್ಥಾಪನಾ ಸಮಿತಿಯ ಸದಸ್ಯನಾಗಿರತಕ್ಕದ್ದಲ್ಲ.

ಯಾರಿಗೆ ಸದಸ್ಯರಾಗಲು ಅರ್ಹತೆ ಇಲ್ಲ?

  1. 1. ಯಾರಿಗೆ ದೇವರಲ್ಲಿ ನಂಬಿಕೆ ಇರುವುದಿಲ್ಲವೋ ಅವರಿಗೆ ಅವಕಾಶವಿಲ್ಲ
    2. ಇಪ್ಪತ್ತೈದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅವಕಾಶವಿಲ್ಲ.
    3. ಒಳ್ಳೆಯ ವರ್ತನೆ ಹಾಗೂ ಹೆಸರು ಹೊಂದಿದ್ದ ಹೊರತು ಹಾಗೂ ಸಂಸ್ಥೆಯು ಇರುವ ಪ್ರದೇಶದಲ್ಲಿ ಗೌರವಕ್ಕೆ ಪಾತ್ರನಾಗಿದ್ದ ಹೊರತು ಅವಕಾಶವಿಲ್ಲ.
    4. ನ್ಯಾಯಾಲಯದಿಂದ ಅವಿಮುಕ್ತ ದಿವಾಳಿಯೆಂದು ಘೋಷಿತನಾಗಿದ್ದರೆ ಸದಸ್ಯನಾಗುವಂತಿಲ್ಲ.
    5. ಅಸ್ವಸ್ಥ ಚಿತ್ತನಾಗಿದ್ದು ಮತ್ತು ಹಾಗೆಂದು ಸಕ್ಷಮ ನ್ಯಾಯಾಲಯದಿಂದ ಘೋಷಿಸಲಾಗಿದ್ದರೆ ಅವಕಾಶವಿಲ್ಲ.
    6. ಕಿವುಡ ಅಥವಾ ಮೂಕನಾಗಿದ್ದರೆ ಅಥವಾ ಕುಷ್ಠ ಅಥವಾ ಇತರ ಯಾವುದೇ ಭಯಂಕರ ಅಥವಾ ಸಾಂಕ್ರಾಮಿಕ ಖಾಯಿಲೆಯಿಂದ ಪೀಡಿತನಾಗಿದ್ದರೆ ಅವಕಾಶ ಇಲ್ಲ.
Exit mobile version