ಬೆಂಗಳೂರು: ಬೆಂಗಳೂರಿನಲ್ಲಿ ನಕಲಿ ಸಿಮ್ ಬಾಕ್ಸ್ ಮೂಲಕ ಪಾಕಿಸ್ತಾನದ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬದಲಾಯಿಸಿ ಭಾರತದ ಶೇನೆಯ ಮಾಹಿತಿ ರವಾನೆ ಮಾಡುತ್ತಿದ್ದು ದೃಢಪಟ್ಟಿದೆ.
ಇದರಿಂದಾಗಿ, ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುತ್ತಿರುವುದು ಕಂಡುಬಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಅನೇಕ ಭಯೋತ್ಪಾದಕರ ಚಲನವಲನಗಳಿಗೆ ಕರ್ನಾಟಕ ರಾಜಧಾನಿ ಸಾಕ್ಷಿಯಾಗಿದೆ. ಇತ್ತೀಚಿಗಷ್ಟೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ತಾಲೀಬ್ ಹುಸೇನ್ ಎಂಬಾತನನ್ನು ಸೆರೆ ಹಿಡಿಯಲಾಗಿತ್ತು. ಈ ಬೆನ್ನಲ್ಲೇ ಈಗ ಮತ್ತೊಂದು ಉಗ್ರ ಚಟುವಟಿಕೆ ನಡೆದಿದ್ದು ಕಂಡುಬಂದಿದೆ.
ನಕಲಿ ಸಿಮ್ ಬಾಕ್ಸ್ ಮೂಲಕ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬದಲಾವಣೆ ಮಾಡುತ್ತಿದ್ದ ಶರಾಫುದ್ದೀನ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಈತ ಪಾಕಿಸ್ತಾನದ ಕರೆಗಳನ್ನೂ ಸ್ಥಳೀಯ ಕರೆಗಳನ್ನಾಗಿ ಬದಲಾಯಿಸಿ ಭಾರತ ಸೇನೆಯ ಬಗ್ಗೆ ಮಾಹಿತಿ ರವಾನೆ ಮಾಡುತ್ತಿದ್ದ ಎಂಬ ಶಂಕೆಯಿತ್ತು. ಈ ಬಗ್ಗೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಿದ್ದರು. ಈ ರೀತಿ ಪಾಕಿಸ್ತಾನಕ್ಕೆ ಭಾರತ ಸೇನೆಯ ಮಾಹಿತಿ ರವಾನೆ ಆಗುತ್ತಿದ್ದದ್ದು ಹೌದು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ನಕಲಿ ಸಿಮ್ ಬಾಕ್ಸ್ ಬಳಸಿ ಪಾಕಿಸ್ತಾನಕ್ಕೆ ಮಾಹಿತಿ: ಜಂಟಿ ಆಯುಕ್ತ ರಮಣ್ ಗುಪ್ತಾ ಹೇಳಿದ್ದೇನು?
ಈ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಮಿಲಿಟರಿ ಇಂಟಲಿಜೆನ್ಸ್ ಹಾಗೂ ಸಿಸಿಬಿ ವಿಶೇಷ ತಂಡ ಜಂಟಿಯಾಗಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದೆ. ಸದ್ಯ ಪಾಕಿಸ್ತಾನ ಅಷ್ಟೆ ಅಲ್ಲದೆ ಬೇರೆ ರಾಷ್ಟ್ರಗಳಿಂದಲೂ ಇಂತಹದೆ ಕರೆಗಳ ಮೂಲಕ ಸಂಭಾಷಣೆ ನಡೆಸಿರುವ ಬಗ್ಗೆ ಶಂಕೆ ಉಂಟಾಗಿದೆ. ಈ ಬಗ್ಗೆ ಎನ್.ಐ.ಎ ಕೂಡ ಹೆಚ್ಚಿನ ತನಿಖೆ ನೆಡಸಲು ಮುಂದಾಗಿದೆ. ಈಗಾಗಲೇ 52 ಸಿಮ್ ಬಾಕ್ಸ್‌ಗಳಲ್ಲಿ 2,144 ಸಿಮ್ ಬಳಸಿ ಕೃತ್ಯ ನಡೆಸುತ್ತಿದ್ದದ್ದು ತಿಳಿದುಬಂದಿದ್ದು, ಎಲ್ಲ ಸಿಮ್ ಕಾರ್ಡ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸ್ ಇಲಾಖೆ ಕಲೆಹಾಕುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಮ್ ಬಾಕ್ಸ್ ಮೂಲಕ ಪಾಕಿಸ್ತಾನಕ್ಕೆ ಮಾಹಿತಿ ರವಾನೆ, ಆರೋಪಿ ಸೆರೆ