Site icon Vistara News

IT Raid : ಬಿಜೆಪಿಯಿಂದ ದೂರ ಸರಿದ ರೌಡಿ ಶೀಟರ್‌ ಫೈಟರ್‌ ರವಿ ಮೇಲೆ ಐಟಿ ದಾಳಿ

Fighter Ravi IT Raid

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ (Karnataka Assembly Elections 2023) ಪೂರ್ವದಲ್ಲಿ ಬಿಜೆಪಿ ಜತೆ ಗುರುತಿಸಿಕೊಂಡದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನೂ ಸಾರ್ವಜನಿಕ ವೇದಿಕೆಯಲ್ಲಿ ಭೇಟಿಯಾಗಿದ್ದ ರೌಡಿ ಶೀಟರ್‌ ಬಿ.ಎಂ. ಮಲ್ಲಿಕಾರ್ಜುನ್‌ ಅಲಿಯಾಸ್‌ ಫೈಟರ್ ರವಿ (Fighter Ravi)‌ ಅವರ ವೈಯಾಲಿಕಾವಲ್‌ ನಿವಾಸದ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ (Income Tax Department) ಅಧಿಕಾರಿಗಳು ದಾಳಿ (IT Raid) ನಡೆಸಿದ್ದಾರೆ.

ಫೈಟರ್‌ ರವಿ ಅವರು ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸೇರಿದ್ದರು. ಅವರು ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಮುಂದಾಗಿದ್ದರು. ಬಿಜೆಪಿ ಕೂಡಾ ಆರಂಭಿಕ ಹಂತದಲ್ಲಿ ಅವರನ್ನು ಪ್ರೊಜೆಕ್ಟ್‌ ಮಾಡಿತ್ತು. ಆದರೆ, ಗೂಂಡಾ ರಾಜಕಾರಣದ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆದ ಬಳಿಕ ಟಿಕೆಟ್‌ ಕೊಡುವ ನಿರ್ಧಾರದಿಂದ ಹಿಂದೆ ಸರಿಯಿತು. ಇಲ್ಲಿ ಬಿಜೆಪಿ ಸುಧಾ ಶಿವರಾಮ್‌ ಅವರಿಗೆ ಟಿಕೆಟ್‌ ನೀಡಿತ್ತು. ಇದರಿಂದ ಸಿಟ್ಟಿಗೆದ್ದ ಫೈಟರ್‌ ರವಿ ಪಕ್ಷೇತರನಾಗಿ ಕಣಕ್ಕೆ ಇಳಿದಿದ್ದರು. ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚೆಲುವರಾಯ ಸ್ವಾಮಿ (90,634 ಮತಗಳು) ಗೆದ್ದರೆ, ಜೆಡಿಎಸ್‌ನ ಸುರೇಶ್‌ ಗೌಡ (86,220 ಮತಗಳು) ದ್ವಿತೀಯ ಸ್ಥಾನಿಯಾದರು. ಬಿಜೆಪಿಯ ಸುಧಾ ಶಿವರಾಮ್‌ ಅವರಿಗೆ 7769 ಮತಗಳು ಸಿಕ್ಕಿದರೆ, ಫೈಟರ್‌ ರವಿ ನಾಲ್ಕನೇ ಸ್ಥಾನಿಯಾಗಿ 3293 ಮತ ಪಡೆದಿದ್ದರು.

ಹೀಗೆ ಬಿಜೆಪಿಯಿಂದ ದೂರವಾಗಿ ತಮ್ಮದೇ ವ್ಯವಹಾರದಲ್ಲಿ ಮುಳುಗಿದ್ದ ಫೈಟರ್‌ ರವಿ ಅವರ ನಿವಾಸದ ಮೇಲೆ ಗುರುವಾರ ಬೆಳಗ್ಗಿನ ಜಾವ ದಾಳಿ ನಡೆದಿದ್ದು ಈಗಲೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಪ್ರಧಾನಿ ಮೋದಿಯವರು (PM Narendra Modi) ದಶಪಥ ರಸ್ತೆ (Mysuru-Bengaluru Expressway) ಉದ್ಘಾಟನೆಗೆಂದು ಮಂಡ್ಯಕ್ಕೆ ಬಂದಾಗ ಫೈಟರ್ ರವಿ ಶುಭಾಶಯ ಕೋರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ವಿರೋಧ ಪಕ್ಷಗಳು ಇದನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು ದಾಳಿ ಮಾಡಿದ್ದವು. ಪ್ರಧಾನಿಗೆ ಮುಜುಗರ ಉಂಟುಮಾಡಿರುವುದಕ್ಕೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿತ್ತು. ಹೀಗಾಗಿ ಅವರಿಗೆ ಟಿಕೆಟ್‌ ಕೂಡಾ ಕೈತಪ್ಪಿತ್ತು.

ಇದನ್ನೂ ಓದಿ : Karnataka Election 2023: ಪ್ರಧಾನಿ ನರೇಂದ್ರ ಮೋದಿ ಕೈಕುಲುಕಿದ್ದ ಫೈಟರ್‌ ರವಿ ಬಿಜೆಪಿಗೆ ಗುಡ್‌ ಬೈ; ಟಿಕೆಟ್‌ ಕೈತಪ್ಪಿದ್ದಕ್ಕೆ ಆಕ್ರೋಶ

ಫೈಟರ್‌ ರವಿ ಹಿಂದೆ ರೌಡಿಸಂ ನಡೆಸುತ್ತಿದ್ದರು. ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು. ಆದರೆ, ಕಳೆದ ಕೆಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಅವರು ರಿಯಲ್‌ ಎಸ್ಟೇಟ್‌ ಮತ್ತಿತರ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಅವರ ಮೇಲೆ ಐಟಿ ದಾಳಿ ನಡೆದಿದೆ.

Exit mobile version