Site icon Vistara News

ಜನೋತ್ಸವ | ವಿವಿಧೆಡೆ ರ‍್ಯಾಲಿ ಮಾಡಲು ಒಪ್ಪದ ದೊಡ್ಡಬಳ್ಳಾಪುರ ಜನ; ಆಗಸ್ಟ್‌ 28ರಂದು ಕಾರ್ಯಕ್ರಮ

Multi Speciality Hospital

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ಹಾಗೂ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಆಯೋಜನೆಯಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ಆಗಸ್ಟ್‌ 28ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜನೆ ಆಗಿತ್ತು. ಆದರೆ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ, ಅಂತಿಮ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಕಾರ್ಯಕ್ರಮವನ್ನು ಮತ್ತೆ ಆರಂಭಿಸುವುದಕ್ಕೂ ಮುನ್ನ ವಿವಿಧೆಡೆ ರ‍್ಯಾಲಿಗಳನ್ನು ನಡೆಸಲು ಯೋಚನೆ ನಡೆದಿತ್ತಾದರೂ, ದೊಡ್ಡಬಳ್ಳಾಪುರದ ಜನರು ಅದಕ್ಕೆ ಅವಕಾಶ ನೀಡಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕಳೆದ ತಿಂಗಳು ಜನೋತ್ಸವ ಕಾರ್ಯಕ್ರಮ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈಗ ದೊಡ್ಡಬಳ್ಳಾಪುರದಲ್ಲೇ ಆಗಸ್ಟ್‌ 28ಕ್ಕೆ ಜನೋತ್ಸವ ಕಾರ್ಯಕ್ರಮ ಮಾಡುವವರಿದ್ದೇವೆ.

ಬೇರೆ ಬೇರೆ ಕಡೆಗಳಲ್ಲಿ ರ‍್ಯಾಲಿ ಮಾಡಿ ಆಮೇಲೆ ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಇಲ್ಲಿನ ಜನರು ಒಪ್ಪಲಿಲ್ಲ. ದೊಡ್ಡಬಳ್ಳಾಪುರದಲ್ಲೇ ಆರಂಭ ಮಾಡಬೇಕು ಎಂದು ಆ ಭಾಗದ ಜನರ ಒತ್ತಡ ಹೆಚ್ಚಾಯಿತು. ಎಲ್ಲಿಗೆ ಕಾರ್ಯಕ್ರಮ ನಿಂತಿತ್ತೋ ಅಲ್ಲಿಂದಲೇ ಮುಂದುವರಿಯಬೇಕು ಎಂದು ಅಲ್ಲಿನ ಜನರು ಕೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಒಟ್ಟು ಐದು ಕಡೆಗಳಲ್ಲಿ ಜನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದುಕೊಂಡಿದ್ದೇವೆ. ಕಾರ್ಯಕ್ರಮಗಳಿಗೆ ಯಾರನ್ನು ಆಹ್ವಾನಿಸಬೇಕು ಎಂಬುದರ ಕುರಿತು ಸದ್ಯದಲ್ಲೆ ಚರ್ಚೆ ನಡೆಸಿ ತೀರ್ಮಾನ ಮಾಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಫದಿ | Praveen Nettaru | ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲು, ಪಕ್ಷದ ಜನೋತ್ಸವ ಕಾರ್ಯಕ್ರಮ ರದ್ದು

Exit mobile version