ಬೆಂಗಳೂರು: ಹಿಂದಿ ದಿವಸ್ ಆಚರಣೆ ಕುರಿತು ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್, ಇದನ್ನು ಏಕೆ ವಿರೋಧ ಮಾಡಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಪ್ರತಿಯೊಂದು ಭಾಷೆಗೂ ಪ್ರಾಮುಖ್ಯತೆ, ಮೌಲ್ಯ ಇದೆ. ಭಾಷೆ ಎನ್ನುವುದು ಮಾತನಾಡಲು ಮಾತ್ರವಲ್ಲ ಆ ಪ್ರದೇಶದ ಸಂಸ್ಕೃತಿ, ಆಚಾರ, ವಿಚಾರದ ಮಹತ್ವವನ್ನೂ ಹೊಂದಿರುತ್ತದೆ. ಇದನ್ನು ಉಳಿಸುವುದು ನಮ್ಮ ಆದ್ಯತೆ. ಬೇರೆ ಬೇರೆ ಜಾತಿ, ಭಾಷೆ ಇದೆ. ಅದೇ ರೀತಿ ಹಿಂದಿಗೂ ಮೌಲ್ಯ ಇದೆ. ಹಿಂದಿ ನಮ್ಮ ರಾಷ್ಟ್ರೀಯ ಭಾಷೆ, ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ. ಈ ದೇಶದಲ್ಲಿ ಹಿಂದಿ ಹೆಚ್ಚು ಚಿರಪರಿಚಿತ. ಬೇರೆ ಭಾಷೆಗೂ ಮೌಲ್ಯ ನೀಡಿ, ನಮ್ಮ ಭಾಷೆಯನ್ನೂ ನಾವು ಹೆಚ್ಚು ಕಲಿಯಬೇಕು.
ಹಿಂದಿ, ಇಂಗ್ಲಿಷ್ ಭಾಷೆಗಳನ್ನು ನಮ್ಮ ಮಕ್ಕಳು ತಿಳಿದುಕೊಳ್ಳಬೇಕು. ಇದನ್ನು ಏಕೆ ವಿರೋಧ ಮಾಡುತ್ತಾರೆ ಗೊತ್ತಿಲ್ಲ. ನಾನು ನನ್ನ ಸ್ವಂತ ಮಕ್ಕಳಿಗೆ ಯಾವ ಭಾಷೆ ಕಲಿಸುತ್ತೇನೆ ಎನ್ನುವುದು ಮುಖ್ಯ. ಕನ್ನಡ ಭಾಷೆಗೆ ಆದ್ಯತೆ ನೀಡಿ, ಅದನ್ನು ಬೆಳೆಸುವುದು ನಮ್ಮ ಸರ್ಕಾರದ ಕರ್ತವ್ಯ. ಅದೇ ರೀತಿ ಇತರೆ ಭಾಷೆಗಳಿಗೂಗೂ ಗೌರವ ಕೊಡಬೇಕು. ನಾವು ಒಂದು ಭಾಷೆಯನ್ನು ಧ್ವೇಷಿಸಿ, ನಮ್ಮ ಭಾಷೆಯನ್ನು ಗೌರವಿಸುವುದು ಸರಿಯಲ್ಲ. ನಾವು ಭಾರತೀಯರು, ಎಲ್ಲಾ ಭಾಷೆಗೂ ಗೌರವ ನೀಡಬೇಕು. ನಾವು ಉತ್ತರ ಭಾರತದ ಕಡೆ ಹೋದಾಗ ಅಲ್ಲಿನ ಭಾಷೆಯನ್ನು ಕಲಿಯಲೇಬೇಕು. ಹಾಗೆಯೇ ಬೇರೆ ದೇಶಕ್ಕೆ ಹೋದಾಗ ಇಂಗ್ಲಿಷ್ ಕಲಿಯಬೇಕು, ಅಲ್ಲಿ ಕೆಲಸ ಮಾಡಬೇಕು ಎಂದರು.
ಹಿಂದಿ ದಿವಸ್ ಮಾದರಿಯಲ್ಲೇ ಬೇರೆ ಭಾಷೆ ದಿನವನ್ನು ಆಚರಣೆ ಮಾಡದಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಖಾದರ್, ಎಲ್ಲ ಭಾಷೆಯ ದಿನವನ್ನೂ ಆಚರಿಸಬೇಕು. ಆದರೆ ಇನ್ನೊಂದು ಭಾಷೆಯ ಮೇಲೆ ಹೇರಬಾರದು ಅಷ್ಟೇ. ಕನ್ನಡ ಭಾಷೆಯನ್ನು ಅಭಿವೃದ್ಧಿ ಮಾಡಬೇಕು, ಜತೆಯಲ್ಲಿ ಹಿಂದಿ, ಇಂಗ್ಲಿಷ್ ಭಾಷೆ ಕೂಡ ಕಲಿಯಬೇಕು ಎಂದರು.
ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್‌ನಿಂದ ಪ್ರತಿಭಟನೆ
ಹಿಂದಿ ದಿವಸ್ ಆಚರಣೆ ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಹಾಡನ್ನು ಪ್ರತಿಭಟನಾಕಾರರು ಹಾಡಿದರು. ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಭೋಜೇಗೌಡ, ಶಾಸಕರಾದ ಸಾ.ರಾ. ಮಹೇಶ್, ಅನ್ನದಾನಿ ಸೇರಿ ಅನೇಕರು ಭಾಗವಹಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಸಿ.ಎಂ. ಇಬ್ರಾಹಿಂ, ನಮ್ಮ ತಾಯಿ, ನಮ್ಮ,ನಾಡು ನಮ್ಮ ಭಾಷೆ. ದಿಲ್ಲಿ, ಹಿಂದಿ ಭಾಷೆ, ಹೈಕಮಾಂಡ್ ಗುಲಾಮಗಿರಿ ಇಲ್ಲಿ ನಡೆಯುವುದಿಲ್ಲ. ಭಾರತ ಜನನಿಯ ತನುಜಾತೆ ಎಂದು ಕುವೆಂಪು ಹಾಡಿದ ನಾಡು ನಮ್ಮದು. ಬಸವರಾಜ ಬೊಮ್ಮಾಯಿ ಅವರು ದುಡ್ಡು ತೆಗೆದುಕೊಂಡು ಹಿಂದಿ ಅವ್ವನ ಆಚರಣೆ ಮಾಡಲು ಹೊರಟಿದ್ದಾರೆ. ಹಿಂದಿ ಭಾಷೆ ಆಚರಣೆ ಮಾಡುವುದರ ವಿರುದ್ಧ ಎಲ್ಲಾ ಜಿಲ್ಲೆಯಲ್ಲಿ ಸತ್ಯಾಗ್ರಹ ಆರಂಭಿಸಿದ್ದೇವೆ ಎಂದರು.
ಯು.ಟಿ. ಖಾದರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಹಿಂದಿ ಕಲಿಯಲಿ. ಬೇಡ ಎಂದವರು ಯಾರು? ಮೊದಲು ಅವ್ವನ್ನ ನೋಡಲಿ. ಕನ್ನಡ ಮಾತನಾಡಿದರೆ ಫೈನ್ ಹಾಕುತ್ತಿದ್ದಾರೆ ಎನ್ನುವ ಕಾಲ ಬಂದಿದೆ. ಕರ್ನಾಟಕದ ಹಣವನ್ನು ಹಿಂದಿಗೆ ಹಾಕುವ ಕೆಲಸ ಏಕೆ ಮಾಡುತ್ತಿದ್ದಾರೆ? ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ ಗುಲಾಮಗಿರಿ ಪಕ್ಷಗಳು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಗಪ್ ಚುಪ್, ಖಲಾಸ್. ಬಿಜೆಪಿ ಬೈಠಕ್ ಸರ್ಕಾರ. ಅವರದ್ದು ತಾಖತ್ ಸರ್ಕಾರ, ಇವರದ್ದು ಬೈಠಕ್ ಸರ್ಕಾರ. ಹಿಂದಿಯವರೇ ಬಂದು ಇಲ್ಲಿ ಪಾನಿಪುರಿ, ಸ್ವೆಟರ್ ಮಾರುತ್ತಿದ್ದಾರೆ. ಹಿಂದಿಯವರೇ ಇಲ್ಲಿಗೆ ಬಂದಿದ್ದಾರೆ. ನಮ್ಮ ಕನ್ನಡಿಗರು ವಿದ್ಯೆ ಕಲಿತು ಕೆಲಸಕ್ಕೆ ಹೋಗುತ್ತಾರೆ ಎಂದರು.
ಇದನ್ನೂ ಓದಿ | Explainer: ಹಿಂದಿ ರಾಷ್ಟ್ರಭಾಷೆ ಹೌದೋ, ಅಲ್ಲವೋ?