ವಿಧಾನಸಭೆ: ಬಿಎಂಎಸ್ ಟ್ರಸ್ಟ್ ಅನ್ನು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಲಾಗುತ್ತಿದೆ ಎಂದು ಗುರುವಾರ ಆರೋಪಿಸಿದ್ದರ ವಿಚಾರದಲ್ಲಿ ಶುಕ್ರವಾರ ವಿಧಾನಸಭೆ ಆರಂಭವಾಗುತ್ತಿದ್ದಂತೆಯೇ ಗಲಾಟೆ ನಡೆಯಿತು. ನಂತರ ನಡೆದ ಸ್ಪೀಕರ್ ಸಂಧಾನ ಸಭೆಯೂ ವಿಫಲವಾಗಿದ್ದು, ಡಾ. ಸಿ.ಎನ್. ಅಶ್ವತ್ಥನಾರಾಯಣ ರಾಜೀನಾಮೆಗೆ ಆಗ್ರಹಿಸಿ ಹಾಗೂ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಲು ಜೆಡಿಎಸ್ ನಿರ್ಧರಿಸಿದೆ.
ಕಲಾಪ ಆರಂಭವಾಗುತ್ತಿದ್ದಂತೆಯೇ ವಿಧಾನ ಸಭಾಧ್ಯಕ್ಷರ ಪೀಠದ ಮುಂದಕ್ಕೆ ಧಾವಿಸಿದ ಜೆಡಿಎಸ್ ಶಾಸಕರು, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಶುರು ಮಾಡಿದರು.
ಬಿಎಂಎಸ್ ಟ್ರಸ್ಟ್ ಕಾನೂನು ಬಾಹಿರವಾಗಿದ್ದು, ತನಿಖೆಗೆ ನೀಡಬೇಕು. ಇದನ್ನು ಖಾಸಗಿ ಟ್ರಸ್ಟ್ ಆಗಿ ಮಾರ್ಪಾಟು ಮಾಡಲಾಗಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ನಾನು ಎತ್ತಿದಂತಹ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿಲ್ಲ. ಇದನ್ನು ಅತ್ಯಂತ ಲಘುವಾಗಿ ಸ್ವೀಕರಿಸಿದ್ದಾರೆ. ಸಾರ್ವಜನಿಕ ಸ್ವತ್ತನ್ನು ಹೈಕೋರ್ಟ್, ಸುಪ್ರೀಂಕೋರ್ಟ್ ಆದೇಶಗಳನ್ನು ಉಲ್ಲಂಘನೆ ಮಾಡಿ ರಚಿಸಲಾಗಿದೆ ಎಂದರು.
ಜೆಡಿಎಸ್‌ನ ಎಚ್.ಡಿ. ರೇವಣ್ಣ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಅಗಾಧ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲ ದಾಖಲೆಗಳೂ ನನ್ನ ಬಳಿ ಇವೆ. ಬೇಕಿದ್ದರೆ ನಾನು ಅದನ್ನೆಲೆಲ ಇಡುತ್ತೇನೆ, ಸರ್ಕಾರ ತನಿಖೆ ನಡೆಸುತ್ತದೆಯೇ? ಟ್ರಸ್ಟ್‌ಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ, ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದರು.
ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ಇದು ಗಂಭೀರವಾದ ವಿಚಾರ. ಸರ್ಕಾರ ಇದನ್ನು ತನಿಖೆ ಮಾಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಒಳಗೆ ಕರೆಸಿ ಅವರೊಂದಿಗೆ ಚರ್ಚೆ ಮಾಡಿ. ಇಂದು ಅನೇಕ ವಿಚಾರಗಳನ್ನು ಚರ್ಚೆ ಮಾಡಬೇಕಿದ್ದು, ಕೊನೆಯ ದಿನವೂ ಆಗಿರುವುದರಿಂದ ಈ ವಿಚಾರಗಳನ್ನು ಬೇಗ ಮುಗಿಸಿಕೊಳ್ಳುವುದು ಒಳ್ಳೆಯದು ಎಂದರು.
ಈ ಸಮಯದಲ್ಲಿ ಮಧ್ಯೆ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ವಿಪಕ್ಷ ನಾಯಕರ ಮಾತಿಗೆ ನಮ್ಮ ಸಹಮತಿ ಇದೆ. ಪ್ರಶ್ನೋತ್ತರ ಕಲಾಪ ಅದರ ಪಾಡಿಗೆ ಆರಂಭವಾಗಲಿ. ನಾವು, ನೀವು, ಅವರೆಲ್ಲಾ ಕುಳಿತು ಚರ್ಚೆ ಮಾಡೋಣ ಎಂದರು. ಇದಕ್ಕೆ ಸಮ್ಮತಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.
ಸ್ಪೀಕರ್ ಕೊಠಡಿಯಲ್ಲಿ ಸಭೆ ವಿಫಲ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಸಿಎಂ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಮಾಧುಸ್ವಾಮಿ, ಎಚ್. ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯು.ಟಿ. ಖಾದರ್, ವೆಂಕಟರಾವ್ ನಾಡಗೌಡ, ಎಚ್. ಡಿ. ರೇವಣ್ಣ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸುಗಮ ಕಲಾಪ ನಡೆಸುವ ದೃಷ್ಟಿಯಿಂದ ಧರಣಿಯನ್ನು ಕೈಬಿಡಬೇಕು ಎಂದು ಜೆಡಿಎಸ್ ಸದಸ್ಯರಿಗೆ ಮನವಿ ಮಾಡಿದರು.
ಆದರೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ನಡೆದ ಸಭೆ ವಿಫಲವಾಯಿತು. ತಮ್ಮ ಪ್ರತಿಭಟನೆಯನ್ನು ಮುಂದುವರಿಸಬೇಕು ಎಂದು ಜೆಡಿಎಸ್ ನಿರ್ಧಾರ ಮಾಡಿತು.
ಇದನ್ನೂ ಓದಿ | ಬಿಎಂಎಸ್ ಟ್ರಸ್ಟ್ ಅಕ್ರಮವಾಗಿ ಖಾಸಗಿಯವರ ಪಾಲು: ಕುಮಾರಸ್ವಾಮಿ ಆರೋಪ, ಅಶ್ವತ್ಥ ನಾರಾಯಣ ರಾಜೀನಾಮೆಗೆ ಆಗ್ರಹ