ಬೆಂಗಳೂರು: ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಲಿಕಾನ್ ಸಿಟಿಯ ಮೂಲೆ ಮೂಲೆಯಲ್ಲೂ ಬಿಗಿ ಬಂದೋಬಸ್ತ್ (New Year 2023) ಅನ್ನೂ ಏರ್ಪಡಿಸಲಾಗಿದೆ.
ಮುಂಜಾಗರೂಕತಾ ಕ್ರಮವಾಗಿ ನಗರದಲ್ಲಿ ಭಧ್ರತೆಗೆ 8,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ್ಯವಾಗಿ ಎಂ.ಜಿ.ರೋಡ್, ಬಿಗ್ರೇಡ್ ರೋಡ್, ರೆಸಿಡೆನ್ಸಿ ರೋಡ್ ನಲ್ಲಿ 4 ಮಂದಿ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: Nandi Hills | ವರ್ಷದ ಕೊನೆಯ ದಿನ ಹೊಸ ವರ್ಷಾಚರಣೆಗೆ ನಂದಿ ಬೆಟ್ಟಕ್ಕೆ ನೋ ಎಂಟ್ರಿ
10 ಎಸಿಪಿ, 30 ಇನ್ ಸ್ಪೆಕ್ಟರ್ ಒಳಗೊಂಡಂತೆ ಭದ್ರತೆಗೆ 3 ಸಾವಿರ ಪೊಲೀಸರ ನಿಯೋಜಿಸಲಾಗಿದೆ. ಬೆಂಗಳೂರಲ್ಲಿ 160 ಇನ್ ಸ್ಪೆಕ್ಟರ್, 600 ಪಿಎಸ್ಐ, 800 ಎಎಸ್ಐ, 5200 ಕಾನ್ ಸ್ಟೇಬಲ್ 1800 ಹೆಡ್ ಕಾನ್ ಸ್ಟೇಬಲ್ ಗಳನ್ನು ನಿಯೋಜಿಸಲಾಗಿದೆ. ಎಂಜಿ ರೋಡ್ ನ ಪ್ರವೇಶದ್ವಾರದಲ್ಲಿ ಮೆಟೆಲ್ ಡಿಟೆಕ್ಟರ್ ಉಪಕರಣ ಅಳವಡಿಸಲಾಗಿದೆ. ಕೋರಮಂಗಲ, ಇಂದಿರಾನಗರ, ವೈಟ್ ಫೀಲ್ಡ್ ಪ್ರದೇಶಗಳಲ್ಲಿ 2,500 ಪೊಲೀಸರು ಬಂದೋಬಸ್ತ್ ನಿರ್ವಹಿಸುತ್ತಿದ್ದಾರೆ.
ರಾತ್ರಿ 1 ಗಂಟೆಯವರೆಗೆ ಮಾತ್ರ ಆಚರಣೆಗೆ ಅವಕಾಶ
ರಾತ್ರಿ 1ಗಂಟೆವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶ ನೀಡಲಾಗಿದೆ. ಅವಧಿ ಮೀರಿದ್ರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ವಾಚ್ ಟವರ್, ವುಮೆನ್ ಸೇಫ್ ಹೌಸ್, ಕಿಡಿಗೇಡಿಗಳ ಮೇಲೆ ನಿಗಾ ಹಿಡಲು ಆರೆಂಜ್ ಸ್ಕ್ವಾಡ್ ಸೇರಿದಂತೆ ಭದ್ರತೆ ಕಲ್ಪಿಸಲಾಗಿದೆ.
ಮಹಿಳೆಯರ ಭದ್ರತೆಗೆ ಸೇಫ್ ಹೌಸ್ ವ್ಯವಸ್ಥೆ
ಹೊಸ ವರ್ಷಾಚರಣೆ ಪ್ರಯುಕ್ತ ಮಹಿಳೆಯರ ಸುರಕ್ಷತೆಗೆ ಬೆಂಗಳೂರಿನಲ್ಲಿ ಆದ್ಯತೆ ವಹಿಸಲಾಗಿದೆ. ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಒಟ್ಟು 37 ವುಮೆನ್ ಸೇಪ್ ಹೌಸ್ ವ್ಯವಸ್ಥೆ ಮಾಡಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆ ನಡೆಯುವ ಪ್ರತಿ ರಸ್ತೆಗೆ ಎರಡರಿಂದ ಮೂರು ವುಮೆನ್ ಸೇಫ್ ಹೌಸ್ ಕಲ್ಪಿಸಲಾಗಿದೆ. ಮಹಿಳೆಯರು ಮದ್ಯಪಾನ ಮಾಡಿ ಅನಾರೋಗ್ಯಕ್ಕೀಡಾದರೆ, ಬಳಲಿದರೆ, ವಿಶ್ರಾಂತಿ ಪಡೆಯಲು ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಬೆಡ್ ಅಳವಡಿಸಲಾಗಿದೆ.
ಇದನ್ನೂ ಓದಿ: New Year 2023 | ಹೊಸ ವರ್ಷಾಚರಣೆ; ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ, ಪಾರ್ಕಿಂಗ್‌ಗೆ ನಿರ್ಬಂಧ