ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ಈ ಬಾರಿ ಬೆಂಗಳೂರಿನಲ್ಲೇ, ಸಪ್ಟೆಂಬರ್ 12 ರಿಂದ ಆಯೋಜಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸಚಿವ ಜೆ.ಸಿ. ಮಾಧುಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದು, ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ಹತ್ತು ದಿನ ಅಧಿವೇಶನ ನಡೆಯುತ್ತದೆ ಎಂದಿದ್ದಾರೆ.
ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವ ಕುರಿತೂ ಚರ್ಚೆಗಳಾಗಿದ್ದು, ಅಂತಿಮವಾಗಿ ಬೆಂಗಳೂರಿನಲ್ಲೇ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಧಿವೇಶನದಲ್ಲಿ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಹಗ್ಗಜಗ್ಗಾಟಕ್ಕೆ ಮೂರ್ನಾಲ್ಕು ವಿಚಾರಗಳು ಅಂತಿಮವಾಗಿವೆ.
ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಫೋಟೊ ಹರಿದದ್ದರಿಂದ ಆರಂಭವಾದ ವಿವಾದ, ಕೊಡಗಿಗೂ ಪಸರಿಸಿತು. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ ಎನ್ನುವ ಕಾಂಗ್ರೆಸ್ ನಾಯಕರ ಮಾತಿಗೆ ಪ್ರತ್ಯುತ್ತರವಾಗಿ ಬಿಜೆಪಿ ನಾಯಕರು ಹರಿಹಾಯುತ್ತಿದ್ದಾರೆ.
ಇದರ ನಡುವೆಯೇ, ಕೊಡಗಿನಲ್ಲಿ ನೆರೆ ನಂತರದ ಪರಿಸ್ಥಿತಿ ವೀಕ್ಷಿಸಲು ಸಿದ್ದರಾಮಯ್ಯ ತೆರಳಿದ್ದಾಗ ಸಂಪತ್ ಎಂಬಾತ ಕಾರಿನ ಮೇಲೆ ಮೊಟ್ಟೆಯಿಂದ ಹೊಡೆದದ್ದು ಹೊಸ ವಿವಾದಕ್ಕೆ ನಾಂದಿ ಹಾಡಿತ್ತು. ಪ್ರತಿಪಕ್ಷ ನಾಯಕರಿಗೇ ಭದ್ರತೆಯಿಲ್ಲ ಎನ್ನುವ ವಿಚಾರವನ್ನು ಸರ್ಕಾರವೂ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದರು.
ಇದೇ ಕೊಡಗಿನ ಪ್ರವಾಸದ ವೇಳೆ ಸಿದ್ದರಾಮಯ್ಯ ಅವರು ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದಾರೆ ಎನ್ನುವುದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿತ್ತು. ಈ ವಿವಾದ, ಸಸ್ಯಾಹಾರ ಹಾಗೂ ಮಾಂಸಾಹಾರದ ನಡುವಿನ ವಾಗ್ವಾದಕ್ಕೂ ಕಾರಣವಾಗಿತ್ತು.
ಇದೆಲ್ಲ ವಿಚಾರಗಳನ್ನು ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳಲಿವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ಕುರಿತು ಈಗಾಗಲೆ ಸರ್ಕಾರ ಗಂಭಿರವಾಗಿದೆ. ಸದನದಲ್ಲಿ ಯಾವ್ಯಾವ ವಿಚಾರ ಪ್ರಸ್ತಾಪವಾಗಬಹುದು ಎಂದು ಅಂದಾಜಿಸಿ ಅದಕ್ಕೆ ಉತ್ತರ ನೀಡಲು ಸಿದ್ಧವಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ಗುತ್ತಿಗೆ ಟೆಂಡರ್ ಕುರಿತು ಬಾಕಿ ಇದ್ದ ಹಣವೆಷ್ಟು, ಈ ಸರ್ಕಾರದ ಅವಧಿಯಲ್ಲಿ ಬಾಕಿಯಿರುವ ಹಣವೆಷ್ಟು ಎಂಬ ದಾಖಲೆಗಳನ್ನು ತಯಾರಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ | ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ; ರಾಜ್ಯದ ವಿವಿಧೆಡೆ ಶನಿವಾರವೂ ಮುಂದುವರಿದ ಕಾಂಗ್ರೆಸ್ ಪ್ರತಿಭಟನೆ