Site icon Vistara News

Karnataka Bandh : ಪ್ರತಿಭಟನೆಗೆ ಇಳಿದ ವಾಟಾಳ್‌ ನಾಗರಾಜ್‌ ವಶಕ್ಕೆ, ಅ. 5ರಂದು KRSಗೆ ಮುತ್ತಿಗೆ

Vatal Nagaraj detained

ಬೆಂಗಳೂರು: ಕಾವೇರಿ ನೀರು ಬಿಡುಗಡೆ ವಿರುದ್ಧ (Cauvery Water Dispute) ಕರ್ನಾಟಕ ಬಂದ್‌ಗೆ(Karnataka Bandh) ಕರೆ ನೀಡಿ ಕನ್ನಡ ಪರ ಸಂಘಟನೆಗಳ ಮುಖಂಡ ವಾಟಾಳ್‌ ನಾಗರಾಜ್‌ (Vatal Nagaraj) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರು ತಮ್ಮ ಮನೆಯಿಂದ ಬೆಂಗಳೂರಿನ ಟೌನ್‌ ಹಾಲ್‌ (Vatal Nagaraj deatained near Freedom Park) ಬಳಿ ಬಂದಾಗ ಪ್ರತಿಭಟನೆಗೆ ಅವಕಾಶ ನೀಡದೆ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಅವರನ್ನು ಎಲ್ಲ ಪ್ರತಿಭಟನಾಕಾರರನ್ನು ಕರೆದೊಯ್ಯುವಂತೆ ಫ್ರೀಡಂ ಪಾರ್ಕ್‌ಗೆ (Vatal Nagaraj Taken to Town hall) ಕರೆದೊಯ್ಯಲಾಯಿತು. ಈ ನಡುವೆ, ಅಕ್ಟೋಬರ್‌ 5ರಂದು ದೊಡ್ಡ ಮಟ್ಟದಲ್ಲಿ ಕೆಆರ್‌ಎಸ್‌ಗೆ ಮುತ್ತಿಗೆ (KRS Sieze on October 5) ಹಾಕುವುದಾಗಿ ಅವರು ಘೋಷಿಸಿದರು.

ಬೆಂಗಳೂರಿನಲ್ಲಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಯಾರಿಗೂ ಪ್ರತಿಭಟನೆಗೆ ಅವಕಾಶವಿಲ್ಲ, ಪ್ರತಿಭಟನೆ ನಡೆಸುವವರು ನೇರವಾಗಿ ಫ್ರೀಡಂ ಪಾರ್ಕ್‌ಗೆ ಹೋಗಬೇಕು ಎಂದು ಪೊಲೀಸರು ಸೂಚಿಸಿದ್ದರು. ಇದು ಜನರ ಪ್ರತಿಭಟನೆಯ ಹಕ್ಕನ್ನು ಕಸಿಯುವ ಪ್ರಯತ್ನ ಎಂಬ ಆಕ್ರೋಶ ವ್ಯಕ್ತವಾಗಿತ್ತು.

ಶುಕ್ರವಾರ ಬೆಳಗ್ಗೆ ತಮ್ಮ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್‌ ನಾಗರಾಜ್‌ ಅವರು ತಮ್ಮನ್ನು ಬಂಧಿಸುವ ಸಿದ್ಧತೆ ನಡೆದಿದೆ ಎಂದಿದ್ದರು. ಅದಾದ ಬಳಿಕ ಅವರು ಟೌನ್‌ಹಾಲ್‌ ಪ್ರದೇಶಕ್ಕೆ ಬಂದರು. ಅಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ತಮ್ಮದೇ ವಾಹನದಲ್ಲಿ ಫ್ರೀಡಂ ಪಾರ್ಕ್‌ಗೆ ಕರೆದೊಯ್ದರು.

ಕೆಆರ್‌ಎಸ್‌ಗೆ ಮುತ್ತಿಗೆ ಘೋಷಿಸಿದ ವಾಟಾಳ್‌ ನಾಗರಾಜ್‌

ಈ ವೇಳೆ ಮಾತನಾಡಿದ ವಾಟಾಳ್‌ ನಾಗರಾಜ್‌ ಅವರು ಅಕ್ಟೋಬರ್ 5ರಂದು ಮಂಡ್ಯದ ಶ್ರೀರಂಗಪಟ್ಟಣ ಸಮೀಪ ಇರುವ ಕೆಆರ್‌ಎಸ್‌ ಅಣೆಕಟ್ಟಿಗೆ ಮುತ್ತಿಗೆ ಹಾಕುವುದಾಗಿ ಪ್ರಕಟಿಸಿದರು.

ಸಿದ್ದರಾಮಯ್ಯ ಸರ್ಕಾರ ಬಂದ್‌ ಮಾಡುವ ನಮ್ಮ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಕನ್ನಡಿಗರ ಶಕ್ತಿ ಏನು ಎನ್ನುವುದು ದೆಹಲಿಗೆ ಗೊತ್ತಾಗಬೇಕು, ಪ್ರಧಾನಿಗೆ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ನಾವು ಹೋರಾಟ ನಡೆಸುತ್ತಿದ್ದೇವೆ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರು.

ಅದಕ್ಕಿಂತ ಮೊದಲು ವಾಟಾಳ್‌ ನಾಗರಾಜ್‌ ನಿವಾಸದಲ್ಲಿ ಮಾತನಾಡಿದ ಚಿತ್ರ ನಿರ್ಮಾಪಕ ಸಾರಾ ಗೋವಿಂದು ಅವರು ಕೆ.ಆರ್‌. ಮುತ್ತಿಗೆ ವಿಚಾರವನ್ನು ತಿಳಿಸಿದ್ದರು.

ಅಂದು ದೊಡ್ಡ ಪ್ರಮಾಣದಲ್ಲಿ ಕೆ.ಆರ್‌ಎಸ್‌ಗೆ ಮುತ್ತಿಗೆ ಹಾಕಲಾಗುವುದು. ಸಾವಿರಾರು ಸಂಖ್ಯೆಯಲ್ಲಿ ರೈತರು ಮತ್ತು ಹೋರಾಟಗಾರರು ಅಲ್ಲಿಗೆ ಮುತ್ತಿಗೆ ಹಾಕಿ ನೀರು ಬಿಡದಂತೆ ಆಗ್ರಹಿಸಲಿದ್ದಾರೆ. ತಮಗೆ ನ್ಯಾಯ ಬೇಕು ಎಂದು ಕೇಳಲಿದ್ದಾರೆ ಎಂದರು

ʻʻಕರ್ನಾಟಕ ಒಕ್ಕೂಟ ಕೊಟ್ಟ ಬಂದ್‌ಗೆ ಈ ರೀತಿ ಸಹಕಾರ ಕೊಡ್ತಾರೆ ಎಂದುಕೊಂಡಿರಲಿಲ್ಲ. ಕರ್ನಾಟಕ ಬಂದ್ ಆಗಲು ವಾಟಾಳ್ ಅವರಿಗೆ ಮಾತ್ರ ಶಕ್ತಿ ಇದೆʼʼ ಎಂದು ಸಾರಾ ಗೋವಿಂದು ಹೇಳಿದರು.

ಹೋರಾಟಗಾರರನ್ನು ಬಂಧಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ʻʻನ್ಯಾಯಾಧೀಶರ ಮಾತು ಕೇಳಿ ಬಂಧನಕ್ಕೆ ಆದೇಶ ಮಾಡಿದ್ದೀರಿ? ಪೊಲೀಸ್ ಕಮೀಷನರ್‌ಗೆ ಹೇಳಿದ್ದೀರಾ ಬಂಧನ ಮಾಡಿ ಅಂತ. ಪೊಲೀಸರಿಗೆ ಸಂಬಳ ಕೊಡ್ತಿರೋದು ನಾವು, ನೀವಲ್ಲ. ನಾವು ಬಂದ್‌ ಮಾಡುತ್ತಿರುವುದು ನಮಗಾಗಿ ಅಲ್ಲ. ನಾಡಿನ ಹಿತಾಸಕ್ತಿಗಾಗಿ, ರೈತರಿಗಾಗಿ ಮಾಡ್ತಿರೋದು. ನಮ್ಮ ಶಕ್ತಿ ದೆಹಲಿಗೆ ತಲುಪಬೇಕು. ನೀರು ನಿಲ್ಲಿಸೋವರೆಗೂ ನಿರಂತರವಾಗಿ ಹೋರಾಟ ನಡೆಯಲಿದೆʼʼ ಎಂದು ಸಾರಾ ಗೋವಿಂದು ಹೇಳಿದರು.

Exit mobile version