Site icon Vistara News

Karnataka Election 2023 : ಬಸವನಗುಡಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯು ಬಿ ವೆಂಕಟೇಶ್‌ ಆಯ್ಕೆ, ಶಂಕರ್‌ ಗುಹಾ ಸಹಮತ

basavanagudi constituency u b venkatesh congres candidate

Karnataka Election 2023

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಬಸವನಗುಡಿ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸುವಲ್ಲಿ ( Karnataka Election 2023) ರಾಜ್ಯ ಕಾಂಗ್ರೆಸ್‌ ನಾಯಕರು ಯಶಸ್ವಿಯಾಗಿದ್ದು, ಈ ಬಾರಿ ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಕ್ಷೇತ್ರದ ಪ್ರಬಲ ಆಕಾಂಕ್ಷಿ ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕನಾಥ್‌ ವೆಂಕಟೇಶ್‌ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ವಿಸ್ತಾರ ನ್ಯೂಸ್‌ಗೆ ತಿಳಿದು ಬಂದಿದೆ.

ಸದ್ಯ ಬಿಜೆಪಿಯ ಭದ್ರನೆಲೆಯಾಗಿ ಬದಲಾಗಿರುವ ಈ ಕ್ಷೇತ್ರವನ್ನು ಮರಳಿ ವಶಪಡಿಸಿಕೊಳ್ಳಲು ಕಾಂಗ್ರೆಸ್‌ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರವ ಸಮ್ಮುಖದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಯು.ಬಿ. ವೆಂಕಟೇಶ್‌ ಅವರನ್ನು ಕಣಕ್ಕಿಳಿಸುವ ಕುರಿತು ತೀರ್ಮಾನಿಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ನಾಯಕರೊಂದಿಗೆ ಡಾ. ಶಂಕರ್‌ ಗುಹಾ ಮತ್ತು ಯು ಬಿ ವೆಂಕಟೇಶ್‌

ಪಕ್ಷದ ಆಕಾಂಕ್ಷಿಯಾಗಿ ಈಗಾಗಲೇ ಇಡೀ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕನಾಥ್‌ ಅವರೂ ಕೂಡ ವೆಂಕಟೇಶ್‌ಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಡಾ. ಶಂಕರ ಗುಹಾ ಅವರಿಗೆ ಮುಂದೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡುವುದಾಗಿ ಪಕ್ಷದ ನಾಯಕರು ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರು ಹಿಂದೆ ಸರಿದು ಯು ಬಿ ವೆಂಕಟೇಶ್‌ ಅವರ ಆಯ್ಕೆಗೆ ಸಹಮತ ವ್ಯಕ್ತಪಡಿಸಿದರೆಂದು ಪಕ್ಷದ ಮೂಲಗಳು ವಿವರಿಸಿವೆ.

ಈ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತಾವು ತೊಡಗಿರುವುದರಿಂದ ತಮಗೇ ಟಿಕೇಟ್‌ ನೀಡಬೇಕು ಎಂದು ಡಾ. ಶಂಕರ ಗುಹಾ ಪಕ್ಷದ ಮುಂದೆ ಬೇಡಿಕೆ ಮಂಡಿಸಿದ್ದರು. ಪಕ್ಷದ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಕೂಡ ಸಲ್ಲಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ಗೆ ಆತ್ಮೀಯರಾಗಿರುವ ಡಾ. ಶಂಕರ ಗುಹಾ ಅವರನ್ನೇ ಪಕ್ಷ ಕಣಕ್ಕಿಳಿಸಬಹುದು ಎಂದು ಪಕ್ಷದ ಕಾರ್ಯಕರ್ತರು ನಿರೀಕ್ಷಿಸುತ್ತಿದ್ದರು. ಈ ಹೊತ್ತಿನಲ್ಲಿ ಈ ತೀರ್ಮಾನ ಹೊರಬಿದ್ದಿದೆ.

ಕ್ಷೇತ್ರದ ಪ್ರತಿ ವಾರ್ಡ್‌ಗೂ ತೆರಳಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಡಾ. ಶಂಕರ್‌ ಗುಹಾ ಅವರು ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಮತ್ತು ವಸಿಷ್ಠ ಸೌಹಾರ್ದ ಸಹಕಾರಿ ಬ್ಯಾಂಕ್ ಹಗರಣದ ಸಂತ್ರಸ್ತರ ಪರವಾಗಿ ಹೋರಾಟ ನಡೆಸಿದ್ದರು. ಇವರ ಹೋರಾಟದ ಫಲವಾಗಿ ಪ್ರಕರಣದ ಕುರಿತು ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಅಲ್ಲದೆ ಇತ್ತೀಚೆಗೆ ಶ್ರೀನಗರ ವಾರ್ಡ್‌ ವ್ಯಾಪ್ತಿಯ ಮದ್ದೂರಮ್ಮ ಮೈದಾನದಲ್ಲಿ ಶಾಲೆ ನಿರ್ಮಾಣ ಮಾಡುವುದನ್ನು ವಿರೋಧಿಸಿ ನಡೆದ ಹೋರಾಟದ ಮುಂದಾಳತ್ವ ವಹಿಸಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರೊಂದಿಗೆ ಡಾ. ಶಂಕರ್‌ ಗುಹಾ ಮತ್ತು ಯು ಬಿ ವೆಂಕಟೇಶ್‌

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಿ ಗಮನ ಸೆಳೆದಿದ್ದ ಡಾ. ಶಂಕರ್‌ ಗುಹಾ, ಪ್ರತಿ ವಾರ್ಡಿನಲ್ಲಿನ ಯುವ ಮತ್ತು ಮಹಿಳಾ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿ, ಪಕ್ಷವನ್ನು ತಳಮಟ್ಟದಲ್ಲಿ ಕಟ್ಟುವ ಪ್ರಯತ್ನ ನಡೆಸುತ್ತಿದ್ದರು. ಈ ಹೊತ್ತಿನಲ್ಲಿಯೇ ಪಕ್ಷ ಈ ತೀರ್ಮಾನ ತೆಗೆದುಕೊಂಡಿದ್ದು, ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಈ ನಡುವೆ ಪಕ್ಷದ ತೀರ್ಮಾನಕ್ಕೆ ಸಂಪೂರ್ಣ ಬೆಂಬಲ ಸೂಚಿಸಿರುವ ಡಾ. ಶಂಕರ್‌ ಗುಹಾ ಅವರು, ಪಕ್ಷದ ಅಭ್ಯರ್ಥಿಯಾಗಲಿರುವ ವಿಧಾನ ಪರಿಷತ್‌ ಸದಸ್ಯ, ಉದ್ಯಮಿ ಯು ಬಿ ವೆಂಕಟೇಶ್ ಗೆಲುವಿಗೆ ತಮ್ಮೆಲ್ಲಾ ಶಕ್ತಿಯನ್ನು ಧಾರೆಯೆರೆಯುವುದಾಗಿ ಪಕ್ಷದ ನಾಯಕರಿಗೆ ಮಾತು ನೀಡಿದ್ದು, ಈಗಾಗಲೇ ಕೆಲಸ ಆರಂಭಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ : Bank Fraud : ಸತತ ಹೋರಾಟದ ಫಲವಾಗಿ ಸಹಕಾರಿ ಬ್ಯಾಂಕ್‌ ಹಗರಣಗಳ ತನಿಖೆ ಸಿಬಿಐಗೆ: ಡಾ. ಶಂಕರ ಗುಹಾ ದ್ವಾರಕಾನಾಥ್

Exit mobile version