Site icon Vistara News

Karnataka Election: ಮತ ಹಾಕಿದವರಿಗೆ ಹೋಟೆಲ್‌ಗಳಲ್ಲಿ ಉಚಿತವಾಗಿ ತಿಂಡಿ ಕೊಡಲು ಹೈಕೋರ್ಟ್‌ ಅನುಮತಿ

Karnataka Election: High Court allowed free breakfast in hotels for voters

Karnataka Election: High Court allowed free breakfast in hotels for voters

ಬೆಂಗಳೂರು: ಮತದಾನಕ್ಕೆ ಉತ್ತೇಜನ ಹಾಗೂ ಮತದಾನ ಜಾಗೃತಿ (Karnataka Election) ಮೂಡಿಸುವ ದಿಸೆಯಲ್ಲಿ ಮತದಾನ ಮಾಡಿದವರಿಗೆ ಉಚಿತವಾಗಿ ಊಟ, ತಿಂಡಿ ನೀಡಲು ಹೈಕೋರ್ಟ್‌ ಅನುಮತಿ ನೀಡಿದೆ. ಬೆಂಗಳೂರಿನ ಹಲವು ಹೋಟೆಲ್‌ಗಳು ಮತದಾನ ಮಾಡಿದವರಿಗೆ ಉಚಿತವಾಗಿ ಊಟ-ತಿಂಡಿ ನೀಡಲು ಘೋಷಿಸಿದ ಬೆನ್ನಲ್ಲೇ ಬಿಬಿಎಂಪಿ ನಿಷೇಧದ ಆದೇಶ ಹೊರಡಿಸಿತ್ತು. ಚುನಾವಣೆ ಆಯೋಗವು ಕೂಡ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಆದರೆ, ಅನುಮತಿ ನೀಡಬೇಕೆಂದು ಹೋಟೆಲ್‌ ಮಾಲೀಕರ ಸಂಘ ಹಾಗೂ ಬೆಂಗಳೂರಿನ ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ ಮಾಲೀಕರು ಎಂದು ಹೈಕೋರ್ಟ್‌ ಮೊರೆ ಹೋಗಿದ್ದು, ನ್ಯಾಯಾಲಯವು ಅನುಮತಿ ನೀಡಿದೆ.

ಹೋಟೆಲ್‌ ಮಾಲೀಕರ ಸಂಘ ಹಾಗೂ ಗ್ರ್ಯಾಂಡ್‌ ಹೋಟೆಲ್‌ ಪರ ವಾದ ಮಂಡಿಸಿದ ಸತೀಶ್‌ ಭಟ್‌ ಅವರು ಈ ಕುರಿತು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. “ಮತದಾನಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಹೋಟೆಲ್‌ಗಳು ಉಚಿತವಾಗಿ ಊಟ-ತಿಂಡಿ ನೀಡುವುದಾಗಿ ಘೋಷಿಸಿವೆ. ಮತದಾನಕ್ಕೂ ಮೊದಲು ಊಟ-ತಿಂಡಿ ನೀಡಿದ್ದರೆ ಆಮಿಷ ಎನಿಸುತ್ತಿತ್ತು. ಆದರೆ, ಮತದಾನ ಮಾಡಿದ ಬಳಿಕ ಬೆರಳಿಗೆ ಹಚ್ಚಿದ ಶಾಯಿಯನ್ನು ನೋಡಿದ ಬಳಿಕವೇ ಅವರಿಗೆ ತಿಂಡಿ ನೀಡಲಾಗುತ್ತಿದೆ. ಇದರಿಂದ ಮತದಾನ ಜಾಗೃತಿ ಆಗುತ್ತದೆ ಎಂಬ ವಾದವನ್ನು ಪರಿಗಣಿಸಿ ನ್ಯಾಯಾಲಯವು ಎಲ್ಲ ಹೋಟೆಲ್‌ಗಳಿಗೆ ಅನುಮತಿ ನೀಡಿದೆ” ಎಂದು ತಿಳಿಸಿದರು.

ಹೈಕೋರ್ಟ್‌ ಆದೇಶ ಪ್ರತಿ

ಇನ್ನು ನ್ಯಾಯಾಲಯದ ತೀರ್ಪಿಗೆ ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ ಮಾಲೀಕ ಕೃಷ್ಣರಾಜ ಎಸ್‌.ಪಿ. ಅವರು ಸಂತಸ ವ್ಯಕ್ತಪಡಿಸಿದ್ದಾರೆ. “ಕಳೆದ ಮೂರು ವರ್ಷಗಳಿಂದಲೂ ಮತದಾನ ಜಾಗೃತಿಗಾಗಿ ಮತ ಹಾಕಿದವರಿಗೆ ಉಚಿತವಾಗಿ ತಿಂಡಿ, ಪಾನೀಯ ನೀಡಲಾಗುತ್ತಿದೆ. ಅದರಂತೆ, ಈ ಬಾರಿಯೂ ಜಾಗೃತಿ ಮೂಡಿಸಲು ಕಳೆದ ಒಂದು ತಿಂಗಳ ಹಿಂದೆಯೇ ಈ ಕುರಿತು ಸಭೆ ನಡೆಸಿ, ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ. ಬುಧವಾರ ಮತದಾನ ಮಾಡಿದವರಿಗೆ ತಿಂಡಿ, ಪಾನೀಯ ನೀಡಲು ಎಲ್ಲ ಸಿದ್ಧತೆ ಮಾಡಲಾಗಿದೆ. ಈಗ ನ್ಯಾಯಾಲಯವು ಕೂಡ ಅನುಮತಿ ನೀಡಿರುವುದು ಖುಷಿಯಾಗಿದೆ” ಎಂದು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Karnataka Election 2023: ಮೇ 10ಕ್ಕೆ ಹಾಕಿ ಮತ; ಬೆಣ್ಣೆ ದೋಸೆ, ಮೈಸೂರ್ ಪಾಕ್ ಪೂರ್ತಿ ಉಚಿತ, ಸಿನಿಮಾ ಟಿಕೆಟ್ಟೂ ಖಚಿತ

ಮೇ 10ಕ್ಕೆ ವೋಟ್ ಹಾಕುವ ಮತದಾರರಿಗೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಹೋಟೆಲ್‌ ಆಫರ್ ನೀಡಿದೆ. ಚುನಾವಣೆ ದಿನ ಮತ ಹಾಕಿ ಬಂದವರಿಗೆ ಬಾಯಲ್ಲಿ ನೀರೂರಿಸುವ ಬೆಣ್ಣೆ ದೋಸೆ, ಮೈಸೂರ್ ಪಾಕ್ ಹಾಗೂ ಕೂಲ್ ಡ್ರಿಂಕ್ಸ್ ಅನ್ನು ಉಚಿತವಾಗಿ ಕೊಡಲು ತಯಾರಿ ಮಾಡಿಕೊಂಡಿದೆ. ಇದೇ ಮೊದಲ ಬಾರಿ ವೋಟ್ ಮಾಡುವ 100 ಯುವ ಮತದಾರರಿಗೆ ಸಿನಿಮಾ ಟಿಕೆಟ್‌ ಅನ್ನು ಉಚಿತವಾಗಿ ಕೊಡಲಾಗುತ್ತಿದೆ. ಬೇರೆ ಹೋಟೆಲ್‌ಗಳು ಕೂಡ ಇದೇ ಆಫರ್‌ ನೀಡಿವೆ.

Exit mobile version