ಬೆಂಗಳೂರು: ಭಾರಿ ಗೊಂದಲಕ್ಕೆ ಕಾರಣವಾದ ಮತ್ತು ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ ಜಯನಗರ ವಿಧಾನಸಭಾ ಕ್ಷೇತ್ರ (Jayanagar Election Results)ದಲ್ಲಿ ಮರು ಮತ ಎಣಿಕೆ ಬಳಿಕ ಬಿಜೆಪಿ ಗೆಲುವು ಸಾಧಿಸಿದೆ ಎಂದು ಘೋಷಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಬಳಿಕ ಅವರ ಸಮ್ಮುಖದಲ್ಲಿ ನಡೆದ ಮತ ಎಣಿಕೆ ಬಳಿಕ ಬಿಜೆಪಿಯ ಸಿ.ಕೆ. ರಾಮಮೂರ್ತಿ ಅವರು 16 ಮತಗಳಿಂದ ಗೆದ್ದಿದ್ದಾರೆ ಎಂದು ಘೋಷಿಸಲಾಯಿತು.
ಜಯ ನಗರ ಕ್ಷೇತ್ರದ ಹಾಲಿ ಶಾಸಕಿಯೂ ಆಗಿರುವ ಸೌಮ್ಯ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ, ಬಿಜೆಪಿಯ ಸಿ.ಕೆ. ರಾಮ ಮೂರ್ತಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜಯನಗರ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಶನಿವಾರ ಮತ ಎಣಿಕೆಯ ಸಂದರ್ಭದಲ್ಲಿ ಹಾವು ಏಣಿ ಆಟ ನಡೆದು ಯಾರು ಗೆಲ್ಲುತ್ತಾರೆ ಎಂದು ಹೇಳುವುದೇ ಕಷ್ಟವಾಗಿತ್ತು. ಅಂತಿಮವಾಗಿ ಮತ ಎಣಿಕೆ ಮುಗಿದಾಗ ಸೌಮ್ಯ ರೆಡ್ಡಿ ಅವರು ಇಲ್ಲಿ ಕೇವಲ 160 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು.
ಆದರೆ ಮತ ಎಣಿಕೆ ಕಾರ್ಯದ ಮೇಲೆ ಸಂಶಯ ವ್ಯಕ್ತಪಡಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬಿಜೆಪಿ ಅಭ್ಯರ್ಥಿ ಸಿ. ಕೆ ರಾಮೂರ್ತಿ ಕಡೆಯಿಂದ ಮನವಿ ಮಾಡಿ, ಮರು ಎಣಿಕೆ ಕೋರಿದ್ದರು.
ಈ ಮನವಿ ಮೇರೆಗೆ ಮತ್ತೆ ಅಂಚೆ ಮತಗಳನ್ನು ಕೌಂಟ್ ಮಾಡಿದಾಗ ಆಗ ಬಿಜೆಪಿ ಅಭ್ಯರ್ಥಿ ಸಿ. ಕೆ ರಾಮೂರ್ತಿ 17 ಮತಗಳ ಮುನ್ನಡೆ ದೊರೆಯಿತು.
ಆದರೆ, ಫಲಿತಾಂಶವನ್ನು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಒಪ್ಪಲಿಲ್ಲ. ಆ ಹೊತ್ತಿಗೆ ಅವರ ತಂದೆ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಕೂಡಾ ಸ್ಥಳಕ್ಕೆ ಬಂದು ಚುನಾವಣಾ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸೌಮ್ಯ ರೆಡ್ಡಿ ತಮ್ಮದೇ ಗೆಲುವು ಎಂದು ಘೋಷಿಸಬೇಕು ಅಂತ ಪಟ್ಟು ಹಿಡಿದರು.
ಈ ನಡುವೆ, ರಾಮಮೂರ್ತಿ ಪರ ಮರು ಎಣಿಕೆಗೆ ಒತ್ತಾಯಿಸಿದ್ದ ಆರ್. ಅಶೋಕ್ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಮೇಲೆ ಆಕ್ರೋಶ ವ್ಯಕ್ತವಾಯಿತು. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಆಕೋಶ ಭುಗಿಲೆದ್ದಿತ್ತು. ಬಿಜೆಪಿ ನಾಯಕರಾದ ಆರ್.ಅಶೋಕ್, ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ ಅವರೆಲ್ಲ ಅಲ್ಲಿಯೇ ಬೀಡು ಬಿಟ್ಟಿದ್ದನ್ನು ಗಮನಿಸಿದ ಕಾಂಗ್ರೆಸ್ ನಾಯಕರು ಡಿ.ಕೆ. ಸುರೇಶ್ ಮತ್ತು ಇತರರನ್ನು ಕೂಡಾ ಬರಹೇಳಿದರು.
ಡಿ.ಕೆ. ಸುರೇಶ್ ಅವರು ಬರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಆರ್. ಅಶೋಕ್ ಮತ್ತು ತೇಜಸ್ವಿಸೂರ್ಯ ಜಾಗ ಖಾಲಿ ಮಾಡಿದರು. ಇತ್ತ ಡಿ.ಕೆ. ಸುರೇಶ್ ಬಂದಾಗ ಕೈ ಕಾರ್ಯಕರ್ತರ ಅಬ್ಬರ ಜೋರಾಯಿತು. ಕಾಂಗ್ರೆಸ್ ಕಾರ್ಯಕರ್ತರ ದಾಂಧಲೆ ಹೆಚ್ಚಾದ ಹಿನ್ನೆಲೆಯಲ್ಲಿ ಎಣಿಕೆ ಕೇಂದ್ರದ ಬಾಗಿಲನ್ನು ಕ್ಲೋಸ್ ಮಾಡಿದರು. ಕಾಂಗ್ರೆಸ್ ಕಾರ್ಯಕರ್ತರು ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಆ ಕೇಂದ್ರದ ಗೇಟ್ ಮುರಿದು ಒಳನುಗ್ಗುವ ಪ್ರಯತ್ನ ಮಾಡಿದರು.
ಅಂತಿಮವಾಗಿ ಸೌಮ್ಯ ರೆಡ್ಡಿ ಅವರು 16 ಮತಗಳಿಂದ ಸೋಲು ಕಂಡಿದ್ದಾರೆ ಎಂದು ಪ್ರಕಟಿಸಲಾಗಿದೆ.
ಇದನ್ನೂ ಓದಿ: Karnataka Election results 2023: ಎಲ್ಲ 224 ನೂತನ ಶಾಸಕರ ಫುಲ್ ಡಿಟೇಲ್; ಯಾವ ಜಿಲ್ಲೆಯಲ್ಲಿ ಯಾರ ಮೇಲುಗೈ?