ಬೆಂಗಳೂರು: ರಾಜಧಾನಿ ಬೆಂಗಳೂರಿನ ಒಟ್ಟು 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದು ಬಿಜೆಪಿ ನಡೆಸಿದ ಪ್ರಯತ್ನ ವಿಫಲವಾಗಿದೆ. ಕಳೆದ ಚುನಾವಣೆಗಿಂತ (Karnataka Election Results 2023) ಒಂದು ಕ್ಷೇತ್ರದಲ್ಲಿ ಮಾತ್ರ ಹೆಚ್ಚು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿದೆ. ರಾಜಧಾನಿಯ ಒಟ್ಟು 16 ಕ್ಷೇತ್ರಗಳಲ್ಲಿ ಕಮಲ ಅರಳಿದ್ದರೆ, 12 ಕ್ಷೇತ್ರಗಳ ಜನರು ಕೈ ಹಿಡಿದಿದ್ದಾರೆ. ತೆನೆಹೊತ್ತ ಮಹಿಳೆಗೆ ನಗರದಲ್ಲಿ ಗೌರವವೇ ದೊರೆತಿಲ್ಲ.
ಪ್ರಧಾನಿ ಮೋದಿ ಅವರ ಮೂರು ರೋಡ್ ಶೋಗಳು ನಗರದ ಜನರನ್ನು ಆಕರ್ಷಿಸಿತೇ ಹೊರತು, ಮತವಾಗಿ ಪರಿವರ್ತನೆಯಾಗಿದ್ದು ಬಹಳ ಕಡಿಮೆ. ನಗರದಲ್ಲಿ ಮತದಾನ ಪ್ರಮಾಣ ಕೂಡ (ಈ ಬಾರಿಯ ಮತ ಪ್ರಮಾಣ ಶೇ.54.53) ಹೆಚ್ಚಾಗಿರಲಿಲ್ಲ. ಒಂದೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಅದಲು ಬದಲಾಗಿದ್ದರೆ, ಮತ್ತೆಲ್ಲಾ ಕ್ಷೇತ್ರಗಳಲ್ಲಿ ಈ ಹಿಂದೆ ಗೆದ್ದವರೇ ಮರಳಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಹೈಕಮಾಂಡ್‌ನಿಂದಲೂ ಇಲ್ಲಿಯ ʻಅಡ್ಜೆಸ್ಟ್‌ಮೆಂಟ್ ರಾಜಕಾರಣʼದ ಚಕ್ರವ್ಯೂಹವನ್ನು ಭೇದಿಸಲು ಸಾಧ್ಯವಾಗಿಲ್ಲ.
ಬಿಜೆಪಿಯು ಗೆದ್ದ ಕ್ಷೇತ್ರಗಳೆಂದರೆ ಯಲಹಂಕ : ಎಸ್.ಆರ್. ವಿಶ್ವನಾಥ್, ಕೆ.ಆರ್. ಪುರ: ಬೈರತಿ ಬಸವರಾಜ್, ಯಶ್ವಂತಪುರ: ಎಸ್.ಟಿ. ಸೋಮಶೇಖರ್, ರಾಜರಾಜೇಶ್ವರಿ ನಗರ: ಮುನಿರತ್ನ, ದಾಸರಹಳ್ಳಿ: ಎಸ್. ಮುನಿರಾಜು, ಮಹಾಲಕ್ಷ್ಮಿ ಲೇಔಟ್- ಎಚ್. ಗೋಪಾಲಯ್ಯ, ಮಲ್ಲೇಶ್ವರಂ: ಡಾ.ಸಿ.ಎನ್ ಅಶ್ವಥ್ ನಾರಾಯಣ, ಸಿ.ವಿ. ರಾಮನ್ ನಗರ: ಆರ್. ರಘು, ಚಿಕ್ಕಪೇಟೆ: ಉದಯ ಗರುಡಾಚಾರ್, ಬಸವನಗುಡಿ: ರವಿ ಸುಬ್ರಹ್ಮಣ್ಯಂ, ಮಹದೇವಪುರ: ಮಂಜುಳಾ ಅರವಿಂದ ಲಿಂಬಾವಳಿ, ಬೊಮ್ನಳ್ಳಿ: ಸತೀಶ್ ರೆಡ್ಡಿ, ಪದ್ಮನಾಭ ನಗರ: ಆರ್. ಅಶೋಕ್, ಬೆಂಗಳೂರು ದಕ್ಷಿಣ: ಎಂ.ಕೃಷ್ಣಪ್ಪ. ಜಯನಗರ: ಸಿ.ಕೆ. ರಾಮಮೂರ್ತಿ
ಕಾಂಗ್ರೆಸ್ ಗೆದ್ದ ಕ್ಷೇತ್ರಗಳೆಂದರೆ ಬ್ಯಾಟರಾಯನಪುರ: ಕೃಷ್ಣ ಭೈರೇಗೌಡ, ಹೆಬ್ಬಾಳ: ಸುರೇಶ್ ಬಿ.ಎಸ್., ಪುಲಿಕೇಶಿ ನಗರ: ಎ.ಸಿ. ಶ್ರೀನಿವಾಸ್, ಸರ್ವಜ್ಞ ನಗರ: ಕೆ.ಜೆ. ಜಾರ್ಜ್, ಶಿವಾಜಿ ನಗರ: ರಿಜ್ಞಾನ್ ಅರ್ಷದ್, ಶಾಂತಿನಗರ: ಎನ್.ಎ ಹ್ಯಾರಿಸ್, ಗಾಂಧಿ ನಗರ: ದಿನೇಶ್ ಗುಂಡೂರಾವ್, ರಾಜಾಜಿ ನಗರ: ಸುರೇಶ್ ಕುಮಾರ್, ಗೋವಿಂದರಾಜನ ನಗರ: ಪ್ರಿಯಾಕೃಷ್ಣ, ವಿಜಯನಗರ: ಎಂ. ಕೃಷ್ಣಪ್ಪ , ಚಾಮರಾಜಪೇಟೆ: ಜಮೀರ್ ಅಹ್ಮದ್ ಖಾನ್, ಬಿಟಿಎಂ ಲೇಔಟ್: ರಾಮಲಿಂಗಾರೆಡ್ಡಿ, ಕೃಷ್ಣರಾಜನಗರ:
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜಧಾನಿಯಲ್ಲಿ 11 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 15 ಮತ್ತು ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿದ್ದವು. ನಂತರ ʻಆಪರೇಷನ್ ಕಮಲʼ ದಿಂದಾಗಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನ ಕಳೆದುಕೊಂಡಿದ್ದರೆ ಜೆಡಿಎಸ್ 1 ಸ್ಥಾನ ಕಳೆದುಕೊಂಡಿತ್ತು. ಬಿಜೆಪಿಯ ಶಕ್ತಿ 15 ಸ್ಥಾನಗಳಿಗೆ ಏರಿತ್ತು, ಕಾಂಗ್ರೆಸ್ 12 ಮತ್ತು ಜೆಡಿಎಸ್ 1 ಸ್ಥಾನ ಉಳಿಸಿಕೊಂಡಿದ್ದವು. ಈ ಬಾರಿಯ ಚುನಾವಣೆಯಲ್ಲಿ ರಾಜಧಾನಿಯಲ್ಲಿ ಯಾರು ಎಷ್ಟು ಸ್ಥಾನ ಗೆಲ್ಲಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿತ್ತು.
ಬಿಜೆಪಿ ಮೂಲಗಳ ಪ್ರಕಾರ ಈ ಬಾರಿ ಏನಾದರೂ ಮಾಡಿ ಪಕ್ಷ 18 ಸ್ಥಾನಗಳಲ್ಲಿಯಾದರೂ ಗೆಲ್ಲಬೇಕೆಂದು ಪಕ್ಷದ ವರಿಷ್ಠರು ಸೂಚನೆ ನೀಡಿದ್ದರು. ಆದರೆ ಬಿಜೆಪಿಯ ಪ್ರಯತ್ನ ವಿಫಲವಾಗಿದೆ. ಪ್ರಧಾನಿ ಮೋದಿ ಮೂರು ದಿನ ಒಟ್ಟು ಮೂರು ರೋಡ್ ಶೋ ನಡೆಸಿದ್ದು, ಸುಮಾರು 39 ಕಿ.ಮೀ ಕ್ರಮಿಸಿದ್ದರು. ಬಹತೇಕ ನಗರದ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರುವಂತೆ ಈ ರೋಡ್ ಶೋ ಆಯೋಜಿಸಲಾಗಿತ್ತು. ಆದರೆ ಇದರಿಂದ ಬಿಜೆಪಿಗೆ ಹೇಳಿಕೊಳ್ಳುವಂತಹ ಲಾಭವಾಗಿಲ್ಲ. ಬಿಜೆಪಿಯ ಭದ್ರಕೋಟೆಯಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿನ ಬಿಜೆಪಿ ಗೆಲುವು ಪಕ್ಷಕ್ಕೆ ದೊಡ್ಡ ಖುಷಿಯೇನೂ ತಂದಿಲ್ಲ. ಪಕ್ಷದ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಕೇವಲ 16 ಮತಗಳ ಅಂತರದಿಂದ ಗೆದ್ದಿದ್ದಾರೆ.
ಬೆಂಗಳೂರಿನಲ್ಲಿ ಅಬ್ಬರದ ಪ್ರಚಾರ ನಡೆಸದ ಕಾಂಗ್ರೆಸ್ ಸದ್ದಿಲ್ಲದೆ ಗೆಲ್ಲುವ ಪ್ರಯತ್ನ ನಡೆಸಿಕೊಂಡೇ ಬಂದಿತ್ತು. ನಿರೀಕ್ಷೆಯಂತೆಯೇ ತನ್ನ ವಶದಲ್ಲಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ರಾಜ್ಯದ ಇತರೆಡೆ ಕಾಂಗ್ರೆಸ್ ಪರವಾದ ಅಲೆ ಬೆಂಗಳೂರಿನಲ್ಲಿ ಕಂಡು ಬಂದಿಲ್ಲ ಎಂಬುದು ಈ ಚುನಾವಣೆಯ ವಿಶೇಷವಾಗಿದೆ.
ಇದನ್ನೂ ಓದಿ : Karnataka Election Results: ರಾಜ್ಯದ 49 ಕ್ಷೇತ್ರಗಳಲ್ಲಿ ಮೋದಿ ರ‍್ಯಾಲಿ, ರೋಡ್ ಶೋ, ಇವುಗಳಲ್ಲಿ ಬಿಜೆಪಿ ಗೆದ್ದಿದ್ದೆಷ್ಟು?