ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ವಕ್ಫ್ ಬೋರ್ಡ್ ವತಿಯಿಂದ 10 ಕಾಲೇಜುಗಳನ್ನು ಆರಂಭಿಸಬೇಕು ಎಂಬ ವಿಚಾರ ವಿವಾದವಾಗಿರುವ ನಡುವೆಯೇ, ಅಲ್ಪಸಂಖ್ಯಾತರಿಗೆ 10 ಹೈಟೆಕ್ ವಸತಿ ಕಾಲೇಜು ಮಂಜೂರು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ತಡವಾಗಿ ಬೆಳಕಿಗೆ ಬಂದಿದೆ.
ಅಲ್ಪಸಂಖ್ಯಾತ ಇಲಾಖೆಯಿಂದ ವಿವಿಧ ಜಿಲ್ಲೆಗಳಲ್ಲಿ ಬಹು ವಿಧದ ವಸತಿ ಶಾಲೆಗಳನ್ನು ನಡೆಸಲಾಗುತ್ತಿದೆ. ಈ ಶಾಲೆಗಳನ್ನು ಒಂದುಗೂಡಿಸಿ ಪ್ರತಿ ಜಿಲ್ಲೆಗೆ ಕನಿಷ್ಟ ಒಂದು ಶಾಲೆಯಲ್ಲಿ ಪದವಿ ಪೂರ್ವ ತರಗತಿಗಳನ್ನು ಪ್ರಾರಂಭಿಸಬೇಕು ಎಂದು ಕಳೆದ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು.
ಪ್ರಥಮ ಮತ್ತು ದ್ವಿತೀಯ ಪಿಯು ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಿ ಸಿಬಿಎಸ್‌ಇ ಮಾನ್ಯತೆಯನ್ನು ಪಡೆಯಲಾಗುತ್ತದೆ. ಈ ಸಂಸ್ಥೆಗಳಿಗೆ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳೆಂದು ನಾಮಕರಣ ಮಾಡಲಾಗುತ್ತದೆ ಎಂದು ಬೊಮ್ಮಾಯಿ ಘೋಷಣೆ ಮಾಡಿದ್ದರು.
ಇದೀಗ ಸರ್ಕಾರ ಆದೇಶ ಹೊರಡಿಸಿದ್ದು, ಆಂಗ್ಲ ಮಾಧ್ಯಮದಲ್ಲಿ ಸಹ ಶಿಕ್ಷಣದ ಪಿಸಿಎಂಬಿ ಕೋರ್ಸ್‌ಗಳನ್ನು ಆರಂಭಿಸಲು ತಿಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಿಡ್ಡಪ್ಪನಹಳ್ಳಿ, ಚಾಮರಾಜನಗರದ ಗುಂಡ್ಲುಪೇಟೆ, ಚಿಕ್ಕಮಗಳೂರಿನ ತೇಗೂರು, ದಾವಣಗೆರೆಯ ಕೊಂಡಜ್ಜಿ, ಧಾರವಾಡದ ಅಂಚಟಗೇರೆ, ಗದಗದ ಮಲ್ಲಸಮುದ್ರ, ಕೊಡಗು ಜಿಲ್ಲೆಯ ಕೊಡ್ಲಿಪೇಟೆ, ಕೋಲಾರ ಜಿಲ್ಲೆಯ ಕೋಲಾರ, ಉತ್ತರ ಕನ್ನಡದ ದಾಂಡೇಲಿ ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಾಲೇಜುಗಳು ಆರಂಭವಾಗಲಿವೆ.
ಪ್ರತಿ ಕಾಲೇಜಿನಲ್ಲಿ ಪ್ರಥಮ ಪಿಯುಗೆ 60 ಹಾಗೂ ದ್ವಿತೀಯ ಪಿಯುಗೆ 60 ಸೇರಿ ಒಟ್ಟು 120 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬಹುದು. ಈ ಕಾಲೇಜುಗಳಿಗೆ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ಎಂದು ನಾಮಕರಣ ಮಾಡುವಂತೆ 2022ರ ಅಕ್ಟೋಬರ್ 22ರಂದು ಹೊರಡಿಸಲಾಗಿರುವ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | Muslim college | ವಕ್ಫ್ ಬೋರ್ಡ್‌ನಲ್ಲಿ ಚರ್ಚೆ ಆಗಿದೆ, ಕಾಲೇಜು ಮುಸ್ಲಿಂ ಹೆಣ್ಮಕ್ಕಳಿಗೆ ಸೀಮಿತವಲ್ಲ ಎಂದ ವಕ್ಫ್ ಅಧ್ಯಕ್ಷ