Site icon Vistara News

ಬಿಎಂಎಸ್‌ ಟ್ರಸ್ಟ್‌ ವಿವಾದ | ತನಿಖೆಗೆ ಒಪ್ಪದ ಸರ್ಕಾರ, ಪ್ರತಿಭಟನೆ ಬಿಡದ JDS: ವಿಧಾನಸಭೆ ಮುಕ್ತಾಯ

assembly session bommai

ವಿಧಾನಸಭೆ: ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಎಂಎಸ್‌ ಟ್ರಸ್ಟ್‌ ಕುರಿತು ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ ನಡುವೆಯೇ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಠಾವಧಿಗೆ ಮುಂದೂಡಿಕೆಯಾಗಿದೆ.

ಸದನದಲ್ಲಿ ಬೆಳಗ್ಗೆ ಕಲಾ ಆರಂಭವಾದ ನಂತರ ಗಲಾಟೆಯಾಗಿದ್ದರಿಂದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಚೇರಿಯಲ್ಲಿ ಸಂಧಾನಸಭೆ ನಡೆಸಲಾಯಿತು. ಆದರೆ ತನಿಖೆ ನಡೆಸಲೇಬೇಕು, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದ ಜೆಡಿಎಸ್‌, ಸಂಧಾನಕ್ಕೆ ಒಪ್ಪಲು ನಿರಾಕರಿಸಿತು.

ಮತ್ತೆ ಸಭೆ ಸೇರಿದಾಗಲೂ ಸದನದಲ್ಲಿ ಗದ್ದಲ ಉಂಟಾಗಿ, ಅನೇಕ ಹೊತ್ತು ಸರ್ಕಾರ, ಪ್ರತಿಪಕ್ಷಗಳ ಶಾಸಕರ ನಡುವೆ ವಾಗ್ವಾದ ನಡೆಯಿತು. ಕಲಾಪವನ್ನು ಸುಗಮವಾಗಿ ನಡೆಸಲು ಅವಕಾಶ ನೀಡಬೇಕು ಎಂದು ಸ್ಪೀಕರ್‌ ಮನವಿ ಮಾಡಿದರು. ಆದರೆ ಇದಕ್ಕೆ ಜೆಡಿಎಸ್‌ ಸದಸ್ಯರು ಒಪ್ಪದೇ ಪ್ರತಿಭಟನೆ ಮುಂದುವರಿಸಿದರು.

ಸರ್ಕಾರದ ಪರವಾಗಿ ಉತ್ತರ ನೀಡಿದ ಅಶ್ವತ್ಥನಾರಾಯಣ, ಬಿಎಂಎಸ್‌ ಟ್ರಸ್ಟ್‌ ಒಂದು ಶಿಕ್ಷಣ ಟ್ರಸ್ಟ್‌ ಆಗಿದ್ದು, ಅಲ್ಲಿ ಎಲ್ಲವನ್ನೂ ಕಾನೂನು ಪ್ರಕಾರವಾಗಿಯೇ ಮಾಡಲಾಗುತ್ತಿದೆ. ತಿದ್ದುಪಡಿಗೆ ಸರ್ಕಾರದ ಅನುಮತಿಗೆ ಕೋರಿದ್ದರು, ಅದನ್ನು ನೀಡಲಾಗಿದೆ. ಹೈಕೋರ್ಟ್‌, ಸುಪ್ರೀಂಕೋರ್ಟ್‌ ನಿರ್ದೇಶನದಂತೆಯೇ ಎಲ್ಲವನ್ನೂ ಮಾಡಲಾಗಿದೆ. ಇಲ್ಲಿನ ಆಸ್ತಿಯನ್ನು ಯಾರೂ ಪರಭಾರೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.

ಕೇವಲ ರಾಜಕೀಯ ಪ್ರೇರಿತವಾಗಿ, ಮತ್ತೊಬ್ಬರ ಮೇಲೆ ಬೆರಳು ತೋರಿಸಲು ಆರೋಪ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಅಕರಮ ನಡೆದಿಲ್ಲವಾದ್ಧರಿಂದ ತನಿಖೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ನಂತರವೂ ಜೆಡಿಎಸ್‌ ಸದಸ್ಯರು ಪ್ರತಿಭಟನೆ ಮುಂದುವರಿಸಿದರು, ಈ ನಡುವೆಯೇ ಕಾರ್ಯಕಲಾಪಗಳನ್ನು ನಡೆಸಿದ ಸ್ಪೀಕರ್‌ ಕಾಗೇರಿ, ಸದನವನ್ನು ಅನಿರ್ದಿಷ್ಠಾವಧಿಗೆ ಮುಂದೂಡಿದರು.

ಇದನ್ನೂ ಓದಿ | ಬಿಎಂಎಸ್‌ ಕುರಿತ ಸಂಧಾನ ಸಭೆ ವಿಫಲ; ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಆಗ್ರಹಿಸಿದ ಜೆಡಿಎಸ್‌

Exit mobile version