Site icon Vistara News

Karnataka Weather: ಇನ್ನೆರಡು ದಿನ ಸೂರ್ಯ ನರ್ತನ; ಕಾಡಲಿದೆ ಸೆಕೆ!

Karnataka Weather Scorching sun for two days in the state

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಮತ್ತು ಗುರುವಾರ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather Forecast) ಹೇಳಿದೆ.

ರಾಜ್ಯದ ಹಲವು ಕಡೆ ಮುಂಜಾನೆ ಅಲ್ಪಮಟ್ಟದಲ್ಲಿ ಚಳಿಯ ವಾತಾವರಣ ಇರಲಿದ್ದು, ಬಹುತೇಕ ಸೆಕೆ ಎಲ್ಲರನ್ನೂ ಕಾಡಲಿದೆ. ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಲಿದ್ದು, ಮೈಸುಡಲಿದೆ. ಹೀಗಾಗಿ ದಕ್ಷಿಣ ಹಾಗೂ ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಕನಿಷ್ಠ ಹಾಗೂ ಗರಿಷ್ಠ ತಾಪಮಾನವು 2-3 ಡಿ.ಸೆ ಏರಿಕೆ ಆಗಲಿದೆ.

ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಮತ್ತು ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗದಲ್ಲಿ ವಾತಾವರಣ ಶುಷ್ಕತೆಯಿಂದ ಕೂಡಿರಲಿದೆ. ಅಲ್ಲದೆ, ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶಗಳಲ್ಲಿ ಏರಿಕೆಯಾಗಲಿದ್ದು, ಸುಡು ಬಿಸಿಲು ನೆತ್ತಿ ಸುಡುತ್ತಿದೆ.

ಉತ್ತರ ಒಳನಾಡಲ್ಲಿ ಬಿಸಿಲ ಧಗೆ

ಉತ್ತರ ಒಳನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಬಿಸಿಲಿನ ಧಗೆ ಉಂಟಾಗಲಿದೆ. ಈ ಭಾಗದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ ಒಂದೆರಡು ಡಿಗ್ರಿ ಸೆಲ್ಸಿಯಸ್‌ ಹೆಚ್ಚಿರಲಿದೆ. ಹೀಗಾಗಿ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಬಿಸಿಲು ಮೈಸುಡಲಿದೆ.

ಬೆಳಗಾವಿಯಲ್ಲಿ ಮಂಗಳವಾರ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ ಇತ್ತು. ಅದೇ ಬುಧವಾರವೂ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್‌ ಇರಲಿದ್ದರೆ, ಕನಿಷ್ಠ ಉಷ್ಣಾಂಶ 17 ಸೆಲ್ಸಿಯಸ್‌ ಇರಲಿದೆ.

ಕರಾವಳಿಯಲ್ಲಿ ಬಿಸಿಲ ನರ್ತನ

ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಬಿಸಿಲು ಮನೆ ಮಾಡಿಕೊಂಡು ಕುಳಿತಂತೆ ಭಾಸವಾಗುತ್ತಿದೆ. ಮನೆ ಹೊರಗೆ ಕಾಲಿಟ್ಟರೆ ಬಿಸಿಲ ಝಳ, ಅದೇ ಮನೆಯೊಳಗಿದ್ದರೆ ಸೆಕೆಯ ಕಾಟ ಎನ್ನುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಬೆಂಗಳೂರಿನಲ್ಲಿ ಬೆಳಗ್ಗೆ ಸಣ್ಣ ಚಳಿ

ಬೆಂಗಳೂರಿನ ಕೆಲವು ಕಡೆ ಬುಧವಾರ ಮುಂಜಾನೆ ಅಲ್ಲಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ. ಹೀಗಾಗಿ ಅಲ್ಪ ಮಟ್ಟಿನ ಚಳಿ ಉಂಟಾಗಲಿದೆ. ಹಾಗಂತ ವಾಕಿಂಗ್‌ ಮಾಡುವವರಿಗೆ, ನಡೆದು ಸಾಗುವವರಿಗೆ ಮೈನಡುಗಿಸುವ ಚಳಿ ಇದಲ್ಲ. ಬದಲಾಗಿ ಟು ವ್ಹೀಲರ್‌ಗಳಲ್ಲಿ ಕ್ರಮಿಸುವವರಿಗೆ ಮಾತ್ರ ಅಲ್ಪ ಚಳಿಯ ಅನುಭವ ಉಂಟಾಗಲಿದೆ. ಇನ್ನು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ ಇರಲಿದ್ದರೆ, ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: Ayushman Bharat : ಮೋದಿ ಗ್ಯಾರಂಟಿಯ ಆಯುಷ್ಮಾನ್ ಭಾರತ್​ ಕಾರ್ಡ್​ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 32 ಡಿ.ಸೆ -17 ಡಿ.ಸೆ
ಮಂಗಳೂರು: 35 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 33 ಡಿ.ಸೆ – 18 ಡಿ.ಸೆ
ಗದಗ: 34 ಡಿ.ಸೆ – 17 ಡಿ.ಸೆ
ಹೊನ್ನಾವರ: 33 ಡಿ.ಸೆ- 21 ಡಿ.ಸೆ
ಕಲಬುರಗಿ: 36 ಡಿ.ಸೆ – 22 ಡಿ.ಸೆ
ಬೆಳಗಾವಿ: 34 ಡಿ.ಸೆ – 16 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ

Exit mobile version