ಬೆಂಗಳೂರು: ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಮೂರನೇ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಈ ಕುರಿತು ಕಾಂಗ್ರೆಸ್ ಟ್ವಿಟರ್‌ನಲ್ಲಿ ಪ್ರಕಟಿಸಲಾಗಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. ಈ ಮಾತಿಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ತಾವೂ ಸದ್ಧ ಎಂದು ಮಾಜಿ ಸಚಿವ ಉಮೇಶ್ ಕತ್ತಿ ಹೇಳಿದ್ದನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಬೊಮ್ಮಾಯಿಯವರೇ, ಸಿಎಂ ಹುದ್ದೆಗೆ ‘ಕತ್ತಿ ವರಸೆ’ ಶುರುವಾಗಿದೆ. ಅದರೆ ನೀವು ಕುರ್ಚಿಯಿಂದ ಇಳಿಯಲು ದಿನಗಳನ್ನಲ್ಲ, ಗಂಟೆಗಳನ್ನು ಎಣಿಸುತ್ತಿದ್ದೀರಿ ಎನಿಸುತ್ತಿದೆ ಸಿಎಂ ಬದಲಾವಣೆ ಎಂಬ ಬೆಳವಣಿಗೆಗೆ ಕಾರಣವೇನು? ನಿಮ್ಮ ಆಡಳಿತದ ವೈಫಲ್ಯವೇ? ಅಥವಾ #BJPvsBJP ಕಾದಾಟವೇ? ಅಥವಾ ಯಡಿಯೂರಪ್ಪನವರ ಕೋಪವೇ ಎಂದು ಪ್ರಶ್ನಿಸಿದೆ.
ರಾಜ್ಯಕ್ಕೆ ಸಂಕಟ, ಬಿಜೆಪಿಗೆ ಅಧಿಕಾರದಾಟ. ಅತಿವೃಷ್ಟಿಯಿಂದ ಜನತೆ ಪರದಾಡುತ್ತಿರುವಾಗ ಸಮರೋಪಾಧಿಯಲ್ಲಿ ನೆರವಿನ ಕಾರ್ಯ ಮಾಡುವುದನ್ನು ಬಿಟ್ಟು ಕರ್ನಾಟಕ ಬಿಜೆಪಿ 3ನೇ ಸಿಎಂ ಪ್ರತಿಷ್ಠಾಪನೆಗೆ ಕಸರತ್ತು ನಡೆಸುತ್ತಿದೆ. ರಾಜ್ಯಕ್ಕೆ ಸಂಕಷ್ಟ ಎದುರಾದಾಗಲೆಲ್ಲ ಬಿಜೆಪಿ ರಾಜಕೀಯದಾಟಕ್ಕೆ ಚಾಲನೆ ಕೊಡುತ್ತದೆ ಎಂದು ಟೀಕಿಸಿದೆ.
ಇದನ್ನೂ ಫದಿ | ನಾನು, ಶಿವಕುಮಾರ್ ಒಟ್ಟಾಗಿದ್ದೇವೆ; ನಮ್ಮ ನಡುವೆ ಬಿರುಕಿಲ್ಲ: ಸಿದ್ದರಾಮಯ್ಯ ಪ್ರತಿಪಾದನೆ
ಎಷ್ಟು ಪ್ರಯತ್ನಿಸಿದರೂ ಜನತಾ ಪರಿವಾರಿಯಾಗಿದ್ದ ಬೊಮ್ಮಾಯಿ ಅವರನ್ನು ಕೇಶವ ಕೃಪಾದವರು ‘ಸಂಘಪರಿವಾರಿ’ಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ! ಆಡಿಸಿ ನೋಡು ಎಂದು ಗೊಂಬೆಯಂತಿದ್ದ #PuppetCM ಬೊಮ್ಮಾಯಿಯವರನ್ನು ಬೀಳಿಸಿ ನೋಡಲು ಹೊರಟಿದೆ ಹೈಕಮಾಂಡ್! ಈ ಬದಲಾವಣೆ ಯತ್ನ ಸರ್ಕಾರದ ವೈಫಲ್ಯಕ್ಕೋ, 3 ಸಿಎಂ ಎಂಬ ನಿಮ್ಮ ಸಂಪ್ರದಾಯಕ್ಕೋ? ಎಂದು ಪ್ರಶ್ನಿಸಿದೆ.
ಸುಧಾಕರ್ ತಿರುಗೇಟು
ಕಾಂಗ್ರೆಸ್ ಟ್ವೀಟ್‌ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ. ಗಾಜಿನ ಮನೆಯಲ್ಲಿ ನಿಂತು ಅನ್ಯರತ್ತ ಕಲ್ಲು ತೂರುತ್ತಿರುವ ಕಾಂಗ್ರೆಸಿಗರ ಮನಃಸ್ಥಿತಿಯ ಬಗ್ಗೆ ಅಯ್ಯೋ ಎನ್ನಿಸುತ್ತಿದೆ. ದಿಲ್ಲಿ ಮಾಲೀಕರು ಕಳುಹಿಸಿದ ಚೀಟಿ ಆಧಾರದ ಮೇಲೆ ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಘನ ಉದಾಹರಣೆ ನಿಮ್ಮ ಪಕ್ಷಕ್ಕೆ ಮಾತ್ರ ಇದೆ. ಕಾಂಗ್ರೆಸ್ ಆಳ್ವಿಕೆ ಕಾಲದಲ್ಲಿ ಸಿಎಂ ಎಂದರೆ ಚೀಫ್ ಮಿನಿಸ್ಟರ್ ಬದಲು ಚೀಟಿ ಮಿನಿಸ್ಟರ್ ಎಂಬಂತಾಗಿತ್ತು. ದಿಲ್ಲಿ ಪೋಸ್ಟ್ ಮ್ಯಾನ್ ಗಳು ಕಳುಹಿಸಿದ ಚೀಟಿ ಆಧಾರದ ಮೇಲೆ ಕಾಂಗ್ರೆಸ್ ಬದಲಾಯಿಸಿದ ಮುಖ್ಯಮಂತ್ರಿಗಳ ಸಂಖ್ಯೆಯ ಲೆಕ್ಕ ಕೊಡಬೇಕೆ?
ಮುಖ್ಯಮಂತ್ರಿ ಸ್ಥಾನದ ಘನತೆ- ಗೌರವಗಳನ್ನು ಹಾಳುಗೆಡವಿದ್ದೇ ಕಾಂಗ್ರೆಸ್. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮನೆಯ ಗೇಟ್ ಕೀಪರ್ ಗಳ ರೀತಿ ಕಾಂಗ್ರೆಸ್ ಮುಖ್ಯಮಂತ್ರಿಗಳು ವರ್ತಿಸಿದ್ದು ಇತಿಹಾಸ. ಆದರೆ ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತಿರುವ ರಾಜ್ಯದ ಇಬ್ಬರು ಹಿರಿಯ ನಾಯಕರು ಈಗಲೇ ಗಾಂಧಿ ಕುಟುಂಬದ ಗೇಟ್ ಕಾಯುತ್ತಿರುವುದು ವರ್ತಮಾನ. ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಎಂಬುದು ಕಾಂಗ್ರೆಸ್ ಕಾಣುತ್ತಿರುವ ಕನಸು. ಬೊಮ್ಮಾಯಿ ಅವರ ದಕ್ಷ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಆದರೆ ಕಾಂಗ್ರೆಸ್‌ನ ಡಬಲ್ ಡೋರ್ ಬಸ್ಸಿನಿಂದ ಯಾರು, ಯಾರನ್ನು ಕೆಳಗಿಳಿಸುತ್ತಾರೆ ಎಂಬುದು ಸದ್ಯದಲ್ಲೇ ಗೊತ್ತಾಗುತ್ತದೆ ಎಂದಿದ್ದಾರೆ.
ಅವರ ಪಕ್ಷದವರೇ ಹೇಳುತ್ತಿದ್ದಾರೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಬಿಜೆಪಿ ಪಕ್ಷದ ಶಾಸಕರೇ ಸಿಎಂ ಬದಲಾವಣೆ ಬಗ್ಗೆ ಮಾತನ್ನಾಡುತ್ತಿದ್ದಾರೆ. ಅವರಲ್ಲಿ ಯಾರಿಗೂ ಬೊಮ್ಮಾಯಿ ಕುರಿತು ವಿಶ್ವಾಸ ಇಲ್ಲ. ಅದೇ ಕಾರಣಕ್ಕೆ ಸಿಎಂ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಮಳೆಯಿಂದ ಜನರು ಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ. ಮೂಲ ಬಿಜೆಪಿ ನಾಯಕರಿಗೆ ಸಿಎಂ ಮೇಲೆ ನಂಬಿಕೆ ಇಲ್ಲ. ಬಿಜೆಪಿ ಬದಲಾವಣೆಯನ್ನು ಜನರು ಬಯಸಿದ್ದಾರೆ. ಮುಂದೆ ನಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಎಲೆಕ್ಷನ್ ಹವಾ | ಕುಂದಗೋಳ | ಆಕಾಂಕ್ಷಿಗಳ ಸಂಖ್ಯೆಗೆ ಕುಂದಿಲ್ಲ; ಸಿದ್ದರಾಮಯ್ಯ ಸ್ಪರ್ಧೆ ಚರ್ಚೆಯೂ ಇದೆ