Site icon Vistara News

Kidnap case | ಮಧ್ಯರಾತ್ರಿ ಬೆಂಗಳೂರು ಪೊಲೀಸರ ಡೆಡ್ಲಿ ಚೇಸಿಂಗ್, ಕಿಡ್ನಾಪ್‌ ಆರೋಪಿಯ ಬಂಧನ

kidnap case

ಬೆಂಗಳೂರು: ರಾಜಧಾನಿ ಪೊಲೀಸರು ಸಮಯಪ್ರಜ್ಞೆ ಮೆರೆದಿದ್ದಾರೆ. ಮಧ್ಯರಾತ್ರಿ ಕಾರೊಂದನ್ನು ಚೇಸ್ ಮಾಡಿ ಕಿಡ್ನಾಪ್ ಆರೋಪಿಯ ಬಂಧಿಸಿದ್ದು, ಅಪಹೃತನನ್ನು ರಕ್ಷಿಸಿದ್ದಾರೆ. ಈ ಚೇಸ್‌ ದೃಶ್ಯ ವಿಸ್ತಾರ ನ್ಯೂಸ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಆಡುಗೋಡಿ ಇನ್‌ಸ್ಪೆಕ್ಟರ್ ಮಂಜುನಾಥ್ ಸಮಯಪ್ರಜ್ಞೆಯಿಂದಾಗಿ ಒಂದು ಜೀವ ಉಳಿದಿದೆ. ಇದು ರಾತ್ರಿ 11.40ರ ಸುಮಾರಿಗೆ ನಡೆದ ಘಟನೆ. ಅವರು ಕೋರಮಂಗಲ 100 ಫೀಟ್ ರಸ್ತೆ ಬಳಿ ಚೆಕ್‌ಪೋಸ್ಟ್‌ನಲ್ಲಿ ನೈಟ್ ರೌಂಡ್ಸ್‌ನಲ್ಲಿದ್ದರು. ಈ ವೇಳೆ ವೇಗವಾಗಿ ಬಂದ ಹೋಂಡಾ ಸಿಟಿ ಕಾರ್ ಬ್ಯಾರಿಕೇಡ್‌ಗೆ ಗುದ್ದಿತ್ತು. ಕಾರಿನಲ್ಲಿದ್ದ ಒಬ್ಬ ಕಾಪಾಡಿ..ಕಾಪಾಡಿ ಎಂದು ಚೀರಿಕೊಂಡಿದ್ದ. ಬ್ಯಾರಿಕೇಡ್ ಗುದ್ದಿ ನಿಲ್ಲಿಸದೆ ಪರಾರಿಯಾದ ಕಾರನ್ನು ತಕ್ಷಣ ಮಂಜುನಾಥ್‌ ಚೇಸ್‌ ಮಾಡಿದ್ದರು. 2 ಕಿ.ಮೀ. ಹಿಂಬಾಲಿಸಿ ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ಕಾರನ್ನು ಅಡ್ಡಹಾಕಿದ್ದರು.

ಆಡುಗೋಡಿ ಇನ್‌ಸ್ಪೆಕ್ಟರ್‌ ಮಂಜುನಾಥ್

ಕಾರಿನಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದರು. ಒಬ್ಬನನ್ನು ಕಿಡ್ನಾಪ್ ಮಾಡಿ‌ ಕಾರಿನಲ್ಲಿ ಹಾಕಿಕೊಂಡಿದ್ದರು. ಕಾರು ನಿಂತ ತಕ್ಷಣ ಮೂವರು ಆರೋಪಿಗಳು ಇಳಿದು ಪರಾರಿಯಾಗಿದ್ದಾರೆ. ಒಬ್ಬ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅಪಹೃತ ಯುವಕನನ್ನು ರಕ್ಷಣೆ ಮಾಡಲಾಗಿದೆ. ಆರೋಪಿಯನ್ನು ಗೋಪಿ ಎಂದು, ಅಪಹೃತ ಯುವಕನನ್ನು ತೌಹಿದ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ | Haryana Crime | ವ್ಯಕ್ತಿಯ ಕೈ ಕತ್ತರಿಸಿ, ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದ ದುಷ್ಕರ್ಮಿಗಳು!

ಮೂರು ದಿನದ ಹಿಂದೆ ಬಂಡೆಪಾಳ್ಯ ಬಳಿ ತೌಹಿದ್‌ನನ್ನು ಕಿಡ್ನಾಪ್ ಮಾಡಲಾಗಿತ್ತು. ಮೂರು ದಿನದಿಂದ ಆರೋಪಿಗಳು ಈತನನ್ನು ಗೌಪ್ಯ ಸ್ಥಳದಲ್ಲಿರಿಸಿಕೊಂಡು ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದು, 60 ಸಾವಿರ ಹಣ ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡಿದ್ದರು. ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ನಿನ್ನೆ ಸಂಜೆ 35 ಸಾವಿರ ರೂ. ಹಣವನ್ನು ತೌಹಿದ್ ತಾಯಿ ನೀಡಿದ್ದರು. ಹಣ ಕೊಟ್ಟ ಮೇಲೂ ತೌಹಿದ್‌ನನ್ನು ಆರೋಪಿಗಳು ಬಿಟ್ಟಿರಲಿಲ್ಲ.

ಹೀಗಾಗಿ ಮಡಿವಾಳ‌ ಪೊಲೀಸ್ ಠಾಣೆಗೆ ತಡರಾತ್ರಿ ದೂರು‌ ನೀಡಲು ತೌಹಿದ್‌ ಕುಟುಂಬ ಆಗಮಿಸಿತ್ತು. ಅಷ್ಟರಲ್ಲಾಗಲೇ ಆರೋಪಿಗಳ‌ನ್ನು ಚೇಸ್ ಮಾಡಿ ಹಿಡಿಯಲಾಗಿತ್ತು. ನಂತರ ಯುವಕನನ್ನು ಮಡಿವಾಳ ಠಾಣೆಗೆ ಪೊಲೀಸರು ಕರೆತಂದಿದ್ದಾರೆ. ಮಗನನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ತೌಹಿದ್ ಕೂಡ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆತನ ಮೇಲೆ ಕೂಡ ಕೇಸ್‌ಗಳಿವೆ. ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಿಡ್ನಾಪ್ ಆಗಿದ್ದು, ತೌಹಿದ್ ಮತ್ತು ಆರೋಪಿ ಗೋಪಿಯನ್ನು ಬಂಡೇಪಾಳ್ಯ ಠಾಣೆಗೆ ಒಪ್ಪಿಸಲಾಗಿದೆ. ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ತೌಹಿದ್‌ ಹೇಳುತ್ತಿದ್ದು, ಆರೋಪಿ ಗೋಪಿಯ ಹೆಚ್ಚಿನ ವಿಚಾರಣೆ ಬಳಿಕ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.

ಇದನ್ನೂ ಓದಿ | Crime news | ಫೇಸ್‌ಬುಕ್‌ ಸುಂದರಿಗಾಗಿ ಪತ್ನಿಗೆ ವಿಷ ಹಾಕಿದ ಪತಿರಾಯ

Exit mobile version