ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕಿಡ್ನಾಪ್ (Kidnap case) ಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹೆಸರು ದುರ್ಬಳಕೆ ಮಾಡಿದ ಪ್ರಕರಣ ವರದಿಯಾಗಿದೆ. ನಾಲ್ವರನ್ನು ಬಂಧಿಸಲಾಗಿದೆ.
ದೂರು ದಾಖಲಾದ ಬಳಿಕ ಕಾರ್ಯಾಚರಣೆ ವೇಳೆ ದನದ ಮಾಂಸ ಕಳ್ಳತನದ ಅಸಲಿ ಕಹಾನಿ ಬಯಲಾಗಿದೆ. ಇದೇ ತಿಂಗಳ 10ರಂದು ಕಿಡ್ನಾಪ್ ನಡೆದಿತ್ತು. ಜಾವಿದ್ ಬೇಗ್ ಎಂಬಾತನನ್ನು ಕಾರ್‌ನಲ್ಲಿ ಬಂದಿದ್ದ ಮೂವರು ವಾಹನ ಸಮೇತ ಕಿಡ್ನಾಪ್ ಮಾಡಿದ್ದರು.
ಜಾವೀದ್ ರಾಮನಗರದಿಂದ ತಿಲಕನಗರಕ್ಕೆ ಬರುತ್ತಿದ್ದು, ದನದ ಮಾಂಸ ಗಾಡಿಯಲ್ಲಿಟ್ಟುಕೊಂಡು ಅಂಗಡಿ ಡೆಲಿವರಿಗೆಂದು ತರುತ್ತಿದ್ದರು. ಈ ವೇಳೆ ಮೈಕೊ ಸಿಗ್ನಲ್ ಬಳಿ ಮೂವರು ಕಿಡ್ನಾಪರ್ಸ್ ಅಡ್ಡ ಹಾಕಿದ್ದರು. ತಾವು ಆರ್‌ಎಸ್‌ಎಸ್‌ನವರೆಂದು ತಡೆದು ವಾಹನ ಸಮೇತ ಜಾವಿದ್‌ರನ್ನು ಕರೆದೊಯ್ದಿದ್ದರು.
ಬಳಿಕ ಬಿಟ್ಟು ಕಳುಹಿಸಬೇಕಾದರೆ ಒಂದು ಲಕ್ಷ ರೂ. ಹಣ ಕೊಡು ಎಂದು ಡಿಮ್ಯಾಂಡ್ ಮಾಡಿದ್ದರು. ಕೊನೆಗೆ ಹತ್ತು ಸಾವಿರ ಪಡೆದು ಬಿಟ್ಟು ಕಳುಹಿಸಿದ್ದರು. ದನದ ಮಾಂಸ ಸಾಗಿಸುತಿದ್ದ ತನ್ನ ಗಾಡಿಯನ್ನು ಕೇಳಿದಾಗ, ಸೇಂಟ್ ಜಾನ್ ಸಿಗ್ನಲ್ ಬಳಿ ಬಿಟ್ಟಿರುವುದಾಗಿ ಹೇಳಿದ್ದರು. ಸಿಗ್ನಲ್ ಬಳಿ ಹೋದಾಗ ಕೇವಲ ಗಾಡಿ ಇದ್ದು, ಅದರಲ್ಲಿ ಮಾಂಸ ಇರಲಿಲ್ಲ. ನಂತರ ಜಾವೀದ್ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದಾಗ ಅಸಲಿ ಕಹಾನಿ ಹೊರಬಿದ್ದಿದೆ.
ಮಾಂಸ ಡೆಲಿವರಿಯಾಗಬೇಕಿದ್ದ ಅಂಗಡಿಯ ಮಾಲೀಕ ಮಹಮದ್ ಎಂಬಾತನಿಂದಲೇ ಕಿಡ್ನಾಪ್ ನಡೆದಿದ್ದು ಬಯಲಿಗೆ ಬಂದಿದೆ. ಚಾಲಕನನ್ನು ಬೆದರಿಸಲು ಈತ ಆರ್‌ಎಸ್‌ಎಸ್ ಹೆಸರು ಬಳಸಿದ್ದ. ಮೂವರು ಯುವಕರನ್ನು ಬಿಟ್ಟು ಕಿಡ್ನಾಪ್ ಕೃತ್ಯ ಮಾಡಿಸಿದ್ದ. ದನದ ಮಾಂಸ ಕದಿಯಲೆಂದೇ ಈ ಕೃತ್ಯ ನಡೆಸಿದ್ದು, ರಾಮನಗರದಿಂದಲೇ ಫಾಲೋ ಮಾಡಿಸಿದ್ದ. ಬಳಿಕ ಮಾಂಸ ತನ್ನ ಅಂಗಡಿಗೆ ತರಿಸಿಕೊಂಡು ಗಾಡಿ ಕಳುಹಿಸಿದ್ದ. ನಂತರ ಮಾಂಸ ಡೆಲಿವರಿಯಾಗಿಲ್ಲ ಎಂದು ಕಥೆ ಕಟ್ಟಿದ್ದ. ಸದ್ಯ ಅಂಗಡಿ ಮಾಲೀಕ ಮಹಮದ್ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Hassan News: ಕುಡಿತದ ಬಾಜಿ ಕಟ್ಟಿ ಪ್ರಾಣ ಕಳೆದುಕೊಂಡ ವ್ಯಕ್ತಿ; 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್!