ಬೆಂಗಳೂರು: ತನ್ನ ನಾಲ್ಕು ವರ್ಷದ ಮಗನನ್ನು ಗೋವಾದಲ್ಲಿ(Goa Murder Case) ಹತ್ಯೆಗೈದ ಆರೋಪದ (Killer CEO) ಮೇಲೆ ಬೆಂಗಳೂರಿನ ಮಹಿಳೆ ಸುಚನಾ ಸೇಠ್ (Suchana Seth) ಬಂಧಿತಳಾಗಿ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾಳೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ ಈ ಪ್ರಕರಣದ ಒಂದೊಂದೇ ಮಾಹಿತಿ ಇದೀಗ ಹೊರ ಬರುತ್ತಿದೆ. ಇದೀಗ ಪೊಲೀಸರು ಆಕೆಯ ಕೈ ಬರಹದ ಟಿಪ್ಪಣಿಯನ್ನು ವಶಪಡಿಸಿಕೊಂಡಿದ್ದಾರೆ. ಟಿಪ್ಪಣಿಯ ನಿಖರ ವಿಷಯವನ್ನು ಪೊಲೀಸರು ಬಹಿರಂಗಪಡಿಸದಿದ್ದರೂ, ಸುಚನಾ ಸೇಠ್ ತನ್ನ ಪತಿ ವೆಂಕಟ್ ರಾಮನ್ನೊಂದಿಗಿನ ಕಹಿ ಸಂಬಂಧದ ಬಗ್ಗೆ ಅದರಲ್ಲಿ ಬರೆದಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಟಿಶ್ಯೂ ಪೇಪರ್ನಲ್ಲಿ ಬರೆದ ಟಿಪ್ಪಣಿ
ಸುಚನಾ ಸೇಠ್ ಟಿಶ್ಯೂ ಪೇಪರ್ನ ಮೇಲೆ ಐ ಲೈನರ್ ಬಳಸಿ ಇದನ್ನು ಬರೆದಿದ್ದಾಳೆ. ಹೆಚ್ಚಿನ ತನಿಖೆಗಾಗಿ ಈ ಕೈ ಬರಹವನ್ನು ಫಾರೆನ್ಸಿಕ್ ಸೈನ್ಸ್ ಲಾಬ್ (Forensic Science Laboratory-FSL)ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪತಿ ವೆಂಕಟ್ ರಾಮನ್ ಜತೆಗಿನ ಸಂಬಂಧ ಹೇಗೆ ಹದಗೆಟ್ಟಿದೆ ಮತ್ತು ಮಗುವನ್ನು ಭೇಟಿಯಾಗಲು ವೆಂಕಟ್ ರಾಮನ್ಗೆ ಅವಕಾಶ ನೀಡಿದ ನ್ಯಾಯಾಲಯದ ಆದೇಶದ ಬಗ್ಗೆ ಅಸಮಾಧಾನಗೊಂಡಿರುವ ಬಗ್ಗೆ ಸುಚನಾ ಈ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾಳೆ. ಇದು ಆಕೆಯ ಮಾನಸಿಕ ಸ್ಥಿತಿಯನ್ನು ಸೂಚಿಸುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಮಧ್ಯೆ ಸುಚನಾ ಸೇಠ್ ಪತಿಯಿಂದ ಗೃಹ ದೌರ್ಜನ್ಯಕ್ಕೆ ತುತ್ತಾಗಿರುವ ಬಗ್ಗೆ ಹಿಂದೆ ದೂರು ದಾಖಲಿಸಿದ್ದ ಹಾಗೂ ಜೀವನಾಂಶ ಅಪೇಕ್ಷಿಸಿದ್ದ ವಿವರಗಳು ಹೊರಗೆ ಬಂದಿತ್ತು. ಆಕೆ ಆಗಸ್ಟ್ನಲ್ಲಿ ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಪತಿಯ ವಿರುದ್ಧ ದಾಖಲಿಸಿದ್ದಳು. ಪತಿ ವೆಂಕಟರಾಮನ್ ತನ್ನ ಹಾಗೂ ಮಗುವಿನ ಮೇಲೆ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಸುಚನಾ ಆರೋಪಿಸಿದ್ದಳು. ಪತಿಯಿಂದ ವಿಚ್ಛೇದನ ಕೋರಿದ್ದು, ವಾರ್ಷಿಕ ₹1 ಕೋಟಿ ರೂ.ಗೂ ಅಧಿಕ ಆದಾಯ ಹೊಂದಿರುವ ಪತಿಯಿಂದ ಮಾಸಿಕ ₹2.5 ಲಕ್ಷ ಜೀವನಾಂಶ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Killer CEO : ಸುಚನಾ ಸೇಠ್ ಬಂಧನವೇ ರೋಚಕ; ಪೊಲೀಸರ ಕೈಹಿಡಿದ ಕೊಂಕಣಿ
ಸುಚನಾ ಸೇಠ್ ಮತ್ತು ರಾಮನ್ 2010 ನವೆಂಬರ್ನಲ್ಲಿ ವಿವಾಹವಾಗಿದ್ದರು. 2019ರಲ್ಲಿ ಆಗಸ್ಟ್ನಲ್ಲಿ ಮಗ ಜನಿಸಿದ್ದ. ಮಾರ್ಚ್ 2021ರಿಂದ ಆಕೆ ತನ್ನ ಪತಿಯಿಂದ ದೂರವಾಗಿ ವಾಸಿಸಲು ಆರಂಭಿಸಿದ್ದಳು. ಮೈಂಡ್ಫುಲ್ ಎಐ ಲ್ಯಾಬ್ಸ್ (mindful AI labs) ಸಿಇಒ ಸುಚನಾ ಸೇಠ್ ಕಳೆದ ವಾರ ಮಗನನ್ನು ಕರೆದುಕೊಂಡು ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಸರ್ವಿಸ್ ಅಪಾರ್ಟ್ಮೆಂಟ್ ಚೆಕ್ಇನ್ ಆಗಿದ್ದಳು. ಅಲ್ಲಿಂದ ಮಗುವಿನ ಶವವನ್ನು ಸೂಟ್ಕೇಸ್ಗೆ ತುಂಬಿಸಿಕೊಂಡು ಹೊರಬಿದ್ದಿದ್ದಳು. ಅನುಮಾನದ ಆಧಾರದಲ್ಲಿ ಆಕೆಯನ್ನು ಬಂಧಿಸಿದಾಗ ಹತ್ಯೆ ನಡೆಸಿದ್ದು ತಿಳಿದುಬಂದಿತ್ತು. ಕೊಲೆಗೆ ಈಕೆ ಪೂರ್ವಯೋಜಿತ ಸಂಚು ನಡೆಸಿದ್ದಳು ಎಂಬುದಕ್ಕೆ ಪೂರಕ ಸಾಕ್ಷ್ಯವಾಗಿ ಈಕೆ ಉಳಿದಿದ್ದ ರೂಮಿನಲ್ಲಿದ್ದ ಖಾಲಿ ಕೆಮ್ಮು ಸಿರಪ್ ಬಾಟಲಿಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ