Site icon Vistara News

Mahalaya Amavasya 2024: ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ; ಮಾಂಸ ಮಾರಾಟ ನಿಷೇಧ ಹಿಂಪಡೆಯುವಂತೆ ಒತ್ತಾಯ

Mahalaya Amavasya on Gandhi Jayanti Poultry Association demands withdrawal of ban on sale of meat

ಬೆಂಗಳೂರು: ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆಯ (Mahalaya Amavasya 2024) ಪಿತೃಪಕ್ಷ ಹಬ್ಬ ಬರುತ್ತಿದೆ. ಗಾಂಧಿ ಜಯಂತಿ ಹಿನ್ನೆಲೆ ಅಂದು ಮಾಂಸ ಮಾರಾಟ ನಿಷೇಧ ಇದೆ. ಹೀಗಾಗಿ ವಿಶೇಷ ಸಂದರ್ಭ ಎಂದು ಪರಿಣಗಣಿಸಿ ಮಾಂಸ ಮಾರಾಟ ನಿಷೇಧ ಆದೇಶ ಹಿಂಪಡೆಯುವಂತೆ ಕರ್ನಾಟಕ ಪೌಲ್ಟ್ರಿ ಅಸೋಸಿಯೇಶನ್ ಅಧ್ಯಕ್ಷ ಕೆ ಎನ್ ನಾಗರಾಜ್ ಒತ್ತಾಯಿಸಿದ್ದಾರೆ.

ಮಹಾಲಯ ಅಮಾವಾಸ್ಯೆಯ ಹಬ್ಬದ ದಿನದಂದು ರಾಜ್ಯದ ಕೋಟ್ಯಂತರ ಜನರು, ಮಾಂಸಾಹಾರ ಸಿದ್ಧಪಡಿಸಿ ತಮ್ಮ ಹಿರಿಯರಿಗೆ ಎಡೆ ಇಟ್ಟು, ಪೂಜೆ ಮಾಡಿ ಬಂಧು ಬಳಗ, ಸ್ನೇಹಿತರೊಂದಿಗೆ ಊಟ ಮಾಡುವ ಪದ್ಧತಿ ಇದೆ. ಈ ಬಾರಿ ಅದೇ ದಿನದಂದು ಗಾಂಧಿ ಜಯಂತಿ ಇರುವುದರಿಂದ ಈ ಬಗ್ಗೆ ಪರಿಶೀಲಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಅ.2 ರಂದು ರಾಜ್ಯಾದ್ಯಂತ ಗಾಂಧಿ ನಡಿಗೆ

“ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿಕೊಂಡು 100 ವರ್ಷವಾಗಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಕ್ಟೋಬರ್ 2 ರಂದು ರಾಜ್ಯಾದ್ಯಂತ ‘ಗಾಂಧಿ ನಡಿಗೆ’ ಹಾಗೂ ‘ಸ್ವಚ್ಛತೆಯ ಪ್ರತಿಜ್ಞಾ ಸ್ವೀಕಾರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಶಿವಕುಮಾರ್ ಅವರು “ಕಾರ್ಯಕ್ರಮದ ಮೊದಲ ಭಾಗವಾಗಿ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು 1 ಕಿ. ಮೀ. ‘ಗಾಂಧಿ ನಡಿಗೆ’ ಮತ್ತು ‘ಸ್ವಚ್ಛತಾ ಪ್ರತಿಜ್ಞಾ ಸ್ವೀಕಾರ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಕೇಂದ್ರ ಹಾಗೂ ಪಾಲಿಕೆ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಲ್ಲಿಯೂ ಬರುವ ಬುಧವಾರ ಬೆಳಗ್ಗೆ 9 ಗಂಟೆಗೆ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೂ ನಡಿಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು” ಎಂದು ತಿಳಿಸಿದರು.

500 ಶಾಲಾ ಮಕ್ಕಳಿಗೆ ಜೂಮ್ ಮೂಲಕ ಪ್ರತಿಜ್ಞಾ ವಿಧಿ

“ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರ ಜನ್ಮದಿನವೂ ಒಂದೇ ದಿನ ಆಗಿರುವ ಕಾರಣ ಇಬ್ಬರ ಪ್ರತಿಮೆಗೂ ಮಾಲಾರ್ಪಣೆ ಮಾಡಲಾಗುವುದು. ನಂತರ ನಡಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾಗೂ ಬೆಂಗಳೂರಿನ 500 ಶಾಲಾ, ಕಾಲೇಜು ಮಕ್ಕಳಿಗೆ ಜೂಮ್ ಮೂಲಕ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಗುವುದು. ಇದು ಸರ್ಕಾರದ ಕಾರ್ಯಕ್ರಮ, ಗಾಂಧಿ ಅವರ ಆದರ್ಶವನ್ನು ಯುವ ಪೀಳಿಗೆಗೆ ತಲುಪಿಸಲು ಈ ಕಾರ್ಯಕ್ರಮ ರೂಪಿಸಿದೆ” ಎಂದರು.

ಶ್ವೇತ ವಸ್ತ್ರ ಧರಿಸಿ ನಡಿಗೆ

“ಜಿಲ್ಲಾ ಕೇಂದ್ರದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ. ಈ ನಡಿಗೆ ವೇಳೆ ಬಿಳಿ ವಸ್ತ್ರ, ಗಾಂಧಿ ಟೋಪಿ ಧರಿಸಿ ಹೆಜ್ಜೆ ಹಾಕುವಂತೆ ಮನವಿ ಮಾಡಲಾಗುವುದು. ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಿದ್ದು, ಇಡೀ ವರ್ಷ ಗಾಂಧೀಜಿ ಅವರ ಆಚಾರ ವಿಚಾರವನ್ನು ಯುವ ಪೀಳಿಗೆಗೆ ತಿಳಿಸಲು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರತಿಜ್ಞಾ ವಿಧಿಗಾಗಿ ಆ್ಯಪ್ ಮೂಲಕ ನೋಂದಣಿ

ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲು ಒಂದು ಆ್ಯಪ್ ಸಿದ್ಧಪಡಿಸಲಾಗಿದ್ದು, ಈಗಾಗಲೇ 35 ಸಾವಿರ ಮಂದಿ ಈ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿಜ್ಞಾ ವಿಧಿ ಪಡೆದವರಿಗೆ ಆನ್‌ಲೈನ್‌ನಲ್ಲೇ ಪ್ರಮಾಣಪತ್ರ ನೀಡಲಾಗುವುದು. ಇದು ಮೊದಲ ಹಂತದ ಕಾರ್ಯಕ್ರಮವಾಗಿದ್ದು, ಇಡೀ ವರ್ಷ ಬೇರೆ ಬೇರೆ ಕಾರ್ಯಕ್ರಮ ಮಾಡಲಾಗುವುದು. ನಂತರ ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮವನ್ನು ಮಧ್ಯಾಹ್ನ 12 ಗಂಟೆ ನಂತರ ಬೆಂಗಳೂರಿನ ಭಾರತ ಜೋಡೋ ಭವನದಲ್ಲಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಇನ್ನೂ ಬೆಂಗಳೂರಿನ ರಸ್ತೆಗಳು ಗುಂಡಿಮುಕ್ತವಾಗಿವೆಯೇ ಎಂದು ಕೇಳಿದಾಗ, “ಸಂಪೂರ್ಣವಾಗಿ ಗುಂಡಿ ಮುಚ್ಚಲಾಗಿದೆ ಎಂದು ನಾನು ಹೇಳುವುದಿಲ್ಲ. ನಾನು ಕೆಲವು ಭಾಗಗಳಲ್ಲಿ ರಸ್ತೆ ಗುಂಡಿ ನೋಡಿದ್ದೇನೆ. ಅಧಿಕಾರಿಗಳು ದಾಖಲೆ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ನಾನು ಈ ಬಗ್ಗೆ ಈಗ ಏನು ಹೆಚ್ಚಿಗೆ ಹೇಳುವುದಿಲ್ಲ. ಮತ್ತೊಂದು ಸುತ್ತಿನ ಪರಿಶೀಲನೆ ಮಾಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಮತ್ತೊಮ್ಮೆ ವಿವರವಾಗಿ ಮಾತನಾಡುತ್ತೇನೆ” ಎಂದು ತಿಳಿಸಿದರು.

ಸಿಎಂ ವಿರುದ್ಧ ಎಫ್ಐಆರ್ ಪದೇ ಪದೇ ಚರ್ಚೆ ಬೇಡ

ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಈಗಾಗಲೇ ಸಾಕಷ್ಟು ಮಾತನಾಡಿದ್ದೇನೆ. ನಮ್ಮ ಎಐಸಿಸಿ ಅಧ್ಯಕ್ಷರು ಈ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪದೇ ಪದೆ ಈ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ” ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version