Site icon Vistara News

Bengaluru: ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಕಲ್ಲು ಎತ್ತಿಹಾಕಿದ ದುಷ್ಟ; ದುರುಳನಿಗೆ ಬಿತ್ತು ಧರ್ಮದೇಟು!

Bengaluru

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇತ್ತೀಚೆಗೆ ಅಪರಾಧ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿರುವ ಮಹಿಳೆ ಮೇಲೆ ಹಲ್ಲೆ, ವಾಕಿಂಗ್‌ ಮಾಡುತ್ತಿದ್ದ ಮಹಿಳೆಗೆ ಲೈಂಗಿ ಕಿರುಕುಳ, ದರೋಡೆ, ಕಳ್ಳತನ, ಕೊಲೆ ಸೇರಿ ಅಪರಾಧ ಕೃತ್ಯಗಳು (Crime Cases) ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಕೊಡಿಗೇಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಸಹಕಾರ ನಗರದಲ್ಲಿ (Sahakar Nagar) ದುಷ್ಟನೊಬ್ಬ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ನೋಡಿದ ಜನ ದುಷ್ಟನಿಗೆ ಧರ್ಮದೇಟು ಕೊಟ್ಟಿದ್ದಾರೆ.

ಸಹಕಾರ ನಗರದಲ್ಲಿ ಸುನಿತಾ (38) ಎಂಬ ಮಹಿಳೆಯು ಗುರುವಾರ (ಆಗಸ್ಟ್‌ 8) ಸಂಜೆ ನಡೆದುಕೊಂಡು ಹೋಗುವಾಗ ವ್ಯಕ್ತಿಯು ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಕಲ್ಲು ಎತ್ತಿ ಹಾಕಿದ್ದಲ್ಲದೆ, ಕಲ್ಲಿನಿಂದ ಅವರ ತಲೆಯನ್ನು ಜಜ್ಜಿದ್ದಾನೆ. ಇದರಿಂದಾಗಿ ಮಹಿಳೆಯು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ದುಷ್ಟನನ್ನು ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸರು ಆರೋಪಿಯ ವಿಚಾರಣೆ ಮಾಡುತ್ತಿದ್ದಾರೆ.

https://vistaranews.com/wp-content/uploads/2024/08/1.mp4

ಸುನಿತಾ ಅವರು ಬೆಂಗಳೂರಿನಲ್ಲಿ ಇಬ್ಬರ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಇವರ ಪತಿಯು ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಏಕಾಏಕಿ ದಾಳಿ ಮಾಡಲು ಕಾರಣ ಏನು ಎಂಬುದು ಗೊತ್ತಾಗಿಲ್ಲ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮಹಿಳೆಯು ಆಂಧ್ರಪ್ರದೇಶದ ಕಡಪ ಮೂಲದವರು ಎಂದು ತಿಳಿದುಬಂದಿದೆ.

https://vistaranews.com/wp-content/uploads/2024/08/2.mp4

ವಾಕಿಂಗ್‌ ಮಾಡುವಾಗ ಮಹಿಳೆಗೆ ಕಿಸ್‌ ಕೊಟ್ಟ ಕಾಮುಕ

ಬೆಂಗಳೂರಿನ ಕೋಣನಕುಂಟೆಯ ಕೃಷ್ಣಾ ನಗರದಲ್ಲಿ ಮನೆ ಬಳಿ ವಾಕಿಂಗ್‌ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಕಿಸ್‌ ಕೊಟ್ಟಿದ್ದ ಪ್ರಕರಣ ಸುದ್ದಿಯಾಗಿತ್ತು. ಬೆಳಗಿನ ಜಾವ ಮಹಿಳೆಯು ಮನೆಯ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್‌ ಕೊಟ್ಟಿದ್ದ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದರು. ಅವರ ಹಿಂದೆಯೇ ಓಡಿ ಬಂದ ದುರುಳನು, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವ ವಿಡಿಯೊಗಳು ವೈರಲ್‌ ಆದ ಬಳಿಕ ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಕೂಡ ಭಯಪಡುವಂತಾಗಿದೆ. ಹೆಣ್ಣುಮಕ್ಕಳ ಆಭರಣ, ಮೊಬೈಲ್‌ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಂಡು ಹೋಗುವುದು, ಹತ್ಯೆ, ಹಲ್ಲೆ ನಡೆಸುವುದು ಸೇರಿ ಹಲವು ಕೃತ್ಯ ಎಸಗುತ್ತಿರುವ ಇಂತಹ ದುಷ್ಕರ್ಮಿಗಳನ್ನು ಪೊಲೀಸರು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Self Harming : ನನ್ನಿಂದ ನನ್ನ ಹೆಂಡ್ತಿನಾ ದೂರ ಮಾಡಿದ್ರು ಅಂತ ಆತ್ಮಹತ್ಯೆಗೆ ಯತ್ನಿಸಿದ ಯುವಕ

Exit mobile version