Site icon Vistara News

Mangalore Issue : ಶಿಕ್ಷಕಿಯಿಂದ ರಾಮನ ಅವಹೇಳನ: ಸದನದಲ್ಲಿ ಕಾಂಗ್ರೆಸ್‌-ಬಿಜೆಪಿ ಜಟಾಪಟಿ

Mangalore Case

ಬೆಂಗಳೂರು: ಮಂಗಳೂರಿನ ಜೆರೋಸಾ ಹೈಸ್ಕೂಲ್‌ನಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮ, ಶ್ರೀ ರಾಮನಿಗೆ ಅವಮಾನ ಮಾಡಿದ ಪ್ರಕರಣ (Mangalore Issue) ಹಾಗೂ ಅದಕ್ಕೆ ಸಂಬಂಧಿಸಿ ಮಂಗಳೂರಿನ ಇಬ್ಬರು ಶಾಸಕರ ಮೇಲೆ ಎಫ್‌ಐಆರ್‌ (FIR on BJP MLAs) ದಾಖಲಿಸಿದ ವಿಚಾರ ವಿಧಾನಸಭೆಯಲ್ಲಿ ಗುರುವಾರ ಭಾರಿ ಕೋಲಾಹಲವನ್ನೇ ಸೃಷ್ಟಿಸಿತು. ಗುರುವಾರ ವಿಧಾನಸಭಾ ಅಧಿವೇಶನ (Budget Session) ಆರಂಭವಾಗುತ್ತಿದ್ದಂತೆಯೇ ಶಾಸಕ ಭರತ್‌ ಶೆಟ್ಟಿ ಅವರು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಒಂದಿಷ್ಟು ಜಟಾಪಟಿ ನಡೆದಿತ್ತು. ಅಂತಿಮವಾಗಿ ಸಂಜೆಯ ಹೊತ್ತಿಗೆ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಅವರು ಉತ್ತರ ನೀಡಿದರು. ಆಗಲೂ ಸಾಕಷ್ಟು ಬಿಸಿ ಬಿಸಿ ಚರ್ಚೆ ನಡೆಯಿತು.

ಮಂಗಳೂರಿನ ಶಿಕ್ಷಕಿ ಪ್ರಕರಣಕ್ಕೆ ಸಂಬಂಧಿಸಿ ಸಂಜೆ ಸದನದಲ್ಲಿ ಉತ್ತರ ನೀಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ಘಟನಾ ಸಂದರ್ಭದಲ್ಲಿ ಶಾಸಕ ಭರತ್ ಶೆಟ್ಟಿ ಸ್ಥಳದಲ್ಲಿ ಇರಲಿಲ್ಲ ಎಂಬುದನ್ನು ಒಪ್ಪಿಕೊಂಡರು. ಆದರೆ, ಅವರ ಮೇಲೆ ಯಾಕೆ ಅವರ ಮೇಲೆ ಎಫ್‌ಐಆರ್‌ ಮಾಡಲಾಗಿದೆ ಎಂಬ ಬಗ್ಗೆ ವಿವರಣೆ ಪಡೆಯಲಾಗುವುದು ಎಂದರು.

ಇದನ್ನೂ ಓದಿ : Jai Shri Ram : ಜೈ ಶ್ರೀರಾಮ್‌ ಅಂದವರಿಗೆ FIR, ರಾಮನ ಅವಹೇಳನ ಮಾಡಿದವ್ರಿಗೆ ಏನೂ ಇಲ್ಲ; ಇದೇನಾ ಕಾನೂನು?

ಆಗ ಬಿಜೆಪಿ ನಾಯಕರು ಭರತ್ ಶೆಟ್ಟಿ ಸ್ಥಳದಲ್ಲಿ ಇಲ್ಲದೆ ಇದ್ದರೂ ಅವರ ವಿರುದ್ಧ ಎಫ್ಐಆರ್ ಮಾಡಿದ್ದು ಏಕೆ? ಹಾಗೆ ಎಫ್ ಐ ಆರ್ ದಾಖಲು ಮಾಡಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಒತ್ತಾಯಿಸಿದರು.

ಶಿಕ್ಷಕಿಯೊಬ್ಬರು ಶಾಲೆಯ ಮಕ್ಕಳ ಮುಂದೆ ಹಿಂದು ಧರ್ಮ, ರಾಮ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅವಹೇಳನಕಾರಿಯಾಗಿ ಮಾತನಾಡಿದರೂ ಯಾಕೆ ಎಫ್ ಐ ಆರ್ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪೋಲಿಸರು ತಮ್ಮ ಕರ್ತವ್ಯದಲ್ಲಿ ತಾರತಮ್ಯ ಮಾಡಿದ್ದಾರೆ. ಶಿಕ್ಷಕರ ಮೇಲೆ ದೂರು ಬಂದಾಗ ಎಫ್ ಐ ಆರ್ ಮಾಡಿಲ್ಲ. ತಪ್ಪನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ಎಫ್ ಐ ಆರ್ ಮಾಡಲಾಗಿದೆ. ಪೋಷಕರು ಕೊಟ್ಟ ದೂರು ಆಧರಿಸಿ ಶಿಕ್ಷಕಿ ಮೇಲೆ ಎಫ್ಐಆರ್ ಆಗಬೇಕು. ಶಾಸಕರ ವಿರುದ್ಧ ಎಫ್ಐಆರ್ ಮಾಡಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಹಿಂದೂ ಸಮಾಜದ ಅವಹೇಳನ ಮಾಡಿದ ಶಿಕ್ಷಕಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಬರುತ್ತದೆ ಎಂದು ಹೇಳಿದರು.

ಮತಾಂತರಕ್ಕೆ ಪ್ರಚೋದನೆ ಮಾಡಿದ ಶಿಕ್ಷಕಿ ಮೇಲೆ ಎಫ್ಐ ಆರ್ ಮಾಡಬೇಕಿತ್ತು. ಆದರೆ, ಅದನ್ನು ಮಾಡದೆ ಶಾಸಕರ ಮೇಲೆ ಕ್ರಮ ಕೈಗೊಳ್ಳಲು ಹವಣಿಸಿದ್ದಾರೆ. ಇದರ ನಡುವೆ ಡಿಡಿಪಿಐಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.

ಇದೇ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿ, ಡಿಡಿಪಿಐ ಈ ವಿಚಾರವಾಗಿ ವರ್ಗಾವಣೆ ಆಗಿಲ್ಲ. ಅವರನ್ನು ವರ್ಗಾವಣೆ ಬೇರೆ ಕಾರಣಕ್ಕಾಗಿ ಮಾಡಲಾಗಿದೆ ಎಂದರು.

ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಘಟನೆಯ ಸತ್ಯಾಸತ್ಯತೆ ತನಿಖೆ ನಡೆಯುತ್ತಿದೆ. ಶಿಕ್ಷಕಿ ಹಾಗೆ ಹೇಳಿದ್ದಾರೋ ಇಲ್ಲವೋ ಎಂದು ಸಾಬೀತು ಆಗಿಲ್ಲ. ಒತ್ತಡದಿಂದ ಶಾಲೆ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದ್ದಾರೆ. ತನಿಖೆಯ ಪ್ರಕಾರ ಕ್ರಮ ಆಗುತ್ತದೆ ಎಂದರು.

ಈ ಶಾಲೆಗೆ ಮಂಗಳೂರಿನಲ್ಲಿ ಒಳ್ಳೆಯ ಹೆಸರಿದೆ. ಅವರು ಶಿಕ್ಷಕಿಯನ್ನು ಅಮಾನತು ಮಾಡಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಅದರ ಬಳಿಕ ನಡೆದ ವಿದ್ಯಮಾನಗಳನ್ನು ಆಧರಿಸಿ ಶಾಸಕರ ಮೇಲೆ ಕೇಸು ದಾಖಲಾಗಿದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದಾಗ ಭಾರಿ ಕೋಲಾಹಲ ಉಂಟಾಯಿತು.

ಈ ನಡುವೆ, ಗೃಹ ಸಚಿವ ಜಿ. ಪರಮೇಶ್ವರ್‌ ಅವರು ಭರತ್‌ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಒಂದು ಪೋಸ್ಟ್‌ನ್ನು ಉಲ್ಲೇಖಿಸಿ ಇದು ಸರಿಯೇ ಎಂದು ಪ್ರಶ್ನಿಸಿದರು. ಕ್ರಿಶ್ಚಿಯನ್ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂಬಂತೆ ಭರತ್ ಶೆಟ್ಟಿ ಅವರು ಮಾಡಿದ್ದ ಪೋಸ್ಟನ್ನು ಜಿ. ಪರಮೇಶ್ವರ್‌ ಓದಿದರು. ಆಗ ಭರತ್‌ ಶೆಟ್ಟಿ ಅದರಲ್ಲಿ ಏನು ತಪ್ಪಿದೆ ಎಂದು ಆಕ್ರೋಶದಿಂದ ಕೇಳಿದರು. ಆಗ ಪರಮೇಶ್ವರ್‌ ಅವರು ನಿಧಾನಕ್ಕೆ ಮಾತಾಡಿ, ಉದ್ವೇಗ ಬೇಡ ಅಂದರು. ಪರಮೇಶ್ವರ ಮಾತಿಗೆ ಬಿಜೆಪಿ ಸದಸ್ಯರು ಸಿಟ್ಟಿನಿಂದ ಪ್ರತಿಕ್ರಿಯಿಸಿದರು.

ಸದನದಲ್ಲಿ ಮಾತಿನ ಚಕಮಕಿ ಜೋರಾಗಿ ಪ್ರಿಯಾಂಕ ಖರ್ಗೆ, ಸುನೀಲ್ ಕುಮಾರ್‌ ಸೇರಿ ಪರಸ್ಪರ ವಾಕ್ಸಮರ ಜೋರಾಯಿತು. ಗದ್ದಲದ ನಡುವೆಯೇ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

Exit mobile version