ಬೆಂಗಳೂರು: ಶ್ರೀಮಂತ ಯುವತಿಯರು, ಡೈವೋರ್ಸ್ ಪಡೆದಿರುವ ಮಹಿಳೆಯರನ್ನು ಮದುವೆಯಾಗುತ್ತೇನೆಂದು ಯಾಮಾರಿಸಿ ಹಣಕಾಸು ದೋಚುವ ಖದೀಮನೊಬ್ಬನ ಮೇಲೆ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ.
ಕೇರಳ ಮೂಲದ ಸುನೀಶ್ ಪಿಳ್ಳೈ ಎಂಬ ಈ ವಂಚಕನ ಕಾರ್ಯಕ್ಷೇತ್ರ ಬೆಂಗಳೂರು. ಇವನ ವಿರುದ್ಧ ಬೆಂಗಳೂರು, ಮೈಸೂರು, ಕೇರಳದಲ್ಲಿ ಸಾಲು ಸಾಲು ವಂಚನೆ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ಹೆಬ್ಬಾಳ, ಯಲಹಂಕ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಹಾಗೂ ಮೈಸೂರಿನಲ್ಲಿ ಎಫ್ಐಆರ್ ದಾಖಲಾಗಿವೆ. ಸದ್ಯ ಹೆಬ್ಬಗೋಡಿ ಪೊಲೀಸರಿಂದ ಆರೋಪಿ ಪತ್ತೆಗೆ ತೀವ್ರ ಶೋಧ ನಡೆಯುತ್ತಿದ್ದು, ಅಂತಾರಾಜ್ಯ ಮ್ಯಾಟ್ರಿಮೋನಿ ವಂಚಕನ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ.
ಎಲ್ಲೇ ದೂರು ದಾಖಲಾದರೂ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿರುವ ಈ ಶೋಕಿಲಾಲನ ಕಾರ್ಯವೈಖರಿ ಹೀಗಿದೆ: ಈತ ಡೈವೋರ್ಸ್ ಮ್ಯಾಟ್ರಿಮೋನಿ ವೆಬ್ ತಾಣಗಳಲ್ಲಿ ಸದಾ ಸಕ್ರಿಯ. ಚಂದದ ಮಹಿಳೆಯರಿಗೆ ಗಾಳ ಹಾಕುತ್ತಾನೆ. ಈತನ ಟಾರ್ಗೆಟ್ ಮಾತ್ರ ನಲವತ್ತರ ಆಸುಪಾಸಿನಲ್ಲಿರುವ ಮಹಿಳೆಯರು, ವಿಚ್ಛೇದಿತೆಯರು, ಅದರಲ್ಲೂ ಸಾಕಷ್ಟು ಹಣಕಾಸು ಹೊಂದಿರುವವರು. ನಾನೊಬ್ಬ ಉದ್ಯಮಿ, ನಿಮ್ಮನ್ನು ಮದುವೆಯಾಗುತ್ತೇನೆ ಎಂದು ನಂಬಿಸುತ್ತಾನೆ. ನಂತರ ಬ್ಯುಸಿನೆಸ್ ಲಾಸ್ ಆಗಿದೆ. ಇನ್ವೆಸ್ಟ್‌ಮೆಂಟ್ ಮಾಡಬೇಕು ಎಂದು ಕೈ ಹಿಡಿದಾಕೆಯಿಂದ ಹಣ, ಆಭರಣ ಪಡೆದುಕೊಳ್ಳುತ್ತಾನೆ. ʼಭಾವಿ ಪತಿʼಯ ಬಣ್ಣದ ಮಾತುಗಳಿಗೆ ಮರುಳಾಗಿ ಅರ್ಧ ಕೋಟಿ, ಮುಕ್ಕಾಲು ಕೋಟಿ ಕಳೆದುಕೊಂಡವರೇ ಹೆಚ್ಚು. ಕೆಲವೊಮ್ಮೆ ದೇವಸ್ಥಾನಗಳಲ್ಲಿ ಮದುವೆಯಾಗುತ್ತಾನೆ. ಹಣ ಇಸಿದುಕೊಂಡ ಬಳಿಕ ಕಣ್ಮರೆಯಾಗುತ್ತಾನೆ. ಹಾಗೆ ಕಣ್ಮರೆಯಾದವನು ಮತ್ತೊಂದು ಹೆಣ್ಣಿಗೆ ಗಾಳ ಹಾಕುತ್ತಾನೆ.
ಹಾಗೆ ಲಪಟಾಯಿಸಿದ ಆಭರಣಗಳನ್ನು ಧರಿಸಿಕೊಂಡು ಬಿಂದಾಸ್ ಪೋಸ್ ನೀಡುವುದು ಕೂಡ ಇವನ ಶೋಕಿ. ಹೀಗೆ ಈ ನಯವಂಚಕನಿಂದ ಮೋಸ ಹೋದವರು ಹದಿನೈದಕ್ಕೂ ಹೆಚ್ಚು ಮಂದಿ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Loan app | ಸಾಲದ ಆ್ಯಪ್ ಮೂಲಕ ಗ್ರಾಹಕರಿಗೆ ವಂಚನೆ, 37 ಕೋಟಿ ರೂ. ಮುಟ್ಟುಗೋಲು