Site icon Vistara News

Medical Negligence: ಕಣ್ಣು ಬಿಡುವ‌ ಮುನ್ನವೇ ಗರ್ಭದಲ್ಲೇ ಕಣ್ಮುಚ್ಚಿದ ಮಗು; ಕೆಸಿ ಜನರಲ್‌ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ!

Medical Negligence KC General Hospital

ಬೆಂಗಳೂರು: ಪ್ರಪಂಚ ನೋಡುವ ಮುನ್ನವೇ ಮಗುವೊಂದು ತಾಯಿ ಗರ್ಭದಲ್ಲೇ ಕಣ್ಮುಚ್ಚಿದೆ. ನಗರದ ಪ್ರತಿಷ್ಠಿತ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ (KC General Hospital) ವೈದ್ಯರ ನಿರ್ಲಕ್ಷ್ಯದಿಂದ (Medical Negligence) ಮಗುವು ಹೊಟ್ಟೆಯಲ್ಲಿ ಮೃತಪಟ್ಟಿದೆ ಎಂಬ ಆರೋಪವೊಂದು ಕೇಳಿ ಬಂದಿದೆ. ಬಡವರ ಪ್ರಾಣಕ್ಕೆ ಬೆಲೆ ಇಲ್ವಾ? ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಕಾವೇರಿ ಎಂಬುವವರು ಮಗುವನ್ನು ಕಳೆದುಕೊಂಡವರು. ಕಾವೇರಿಗೆ ಮದುವೆಯಾಗಿ ನಾಲ್ಕು ವರ್ಷವಾದರೂ ಮಕ್ಕಳಾಗಿರಲಿಲ್ಲ. ಹರಕೆ, ಪ್ರಾರ್ಥನೆ ಎಂದು ಕುಟುಂಬಸ್ಥರು ನೂರಾರು ದೇವಸ್ಥಾನಗಳನ್ನು ಸುತ್ತಿದ್ದರು. ಕಡೆಗೂ ನಾಲ್ಕು ವರ್ಷದ ನಂತರ ದೇವರು ಕಣ್ಣು ಬಿಟ್ಟಿದ್ದ, ಕಾವೇರಿ ಗರ್ಭ ಧರಿಸಿದ್ದಳು.

ತಡವಾಗಿ ಗರ್ಭಿಣಿಯಾಗಿದ್ದರಿಂದ ಕಾವೇರಿ ಕುಟುಂಬಸ್ಥರು ಬಹಳ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದರು. ಮಗು ಬೆಳೆವಣಿಗೆಯೂ ಚೆನ್ನಾಗಿತ್ತು. ಹೆರಿಗೆಗೆ ದಿನಗಳು ಹತ್ತಿರ ಬಂದಾಗ ನಗರದ ಕೆಸಿ ಜನರಲ್‌ ಆಸ್ಪತ್ರೆಗೆ ದಾಖಲಾಗಿದ್ದರು.ಸ್ಕ್ಯಾನಿಂಗ್ ಮಾಡಿ ಮಗು ಬೆಳವಣಿಗೆ ಎಲ್ಲವೂ ಚೆನ್ನಾಗಿದೆ. ನಾರ್ಮಲ್ ಡೆಲಿವರಿಯಾಗುತ್ತೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Medical Ethics : ಎದೆ ನೋವೆಂದು ಕ್ಲಿನಿಕ್​ಗೆ ಬಂದ ಯುವತಿ; ತಪಾಸಣೆ ನೆಪದಲ್ಲಿ ಅಂಗಿ ಬಿಚ್ಚಿಸಿ ಮುತ್ತಿಟ್ಟ ವೈದ್ಯ; ಕೇಸ್​ ದಾಖಲಿಸಲು ಕೋರ್ಟ್​ ಸೂಚನೆ

ಆದರೆ ಮೊನ್ನೆ ಮಧ್ಯರಾತ್ರಿ ವೈದ್ಯರು ದಿಢೀರ್‌ ಅಂತ ಆಪರೇಷನ್ ಮಾಡಬೇಕು ಎಂದಿದ್ದಾರೆ. ಇಂಜೆಕ್ಷನ್ ಕೊಟ್ಟ ಕೆಲಹೊತ್ತಲ್ಲಿ ಕಾವೇರಿಗೆ ನೋವು ಕಾಣಿಸಿಕೊಂಡು ನರಳಾಡಿದ್ದಾರೆ. ನೋವಿನಲ್ಲಿ ನರಳಾಡುತ್ತಿದ್ದರೂ ತುರ್ತಾಗಿ ಹೆರಿಗೆ ಕೊಠಡಿಗೆ ಕರೆದೊಯ್ಯದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದೇ ಒಂದು ಇಂಜೆಕ್ಷನ್ ನಮ್ಮ ಅಷ್ಟು ದಿನದ ಹರಕೆ, ಪ್ರಾರ್ಥನೆ ,ಕನಸು ನೆಲಸಮ ಮಾಡಿದೆ. ಹೊಟ್ಟೆಯಲ್ಲೆ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಗೋಳಾಡಿದ್ದಾರೆ.

ಕುಟುಂಬಸ್ಥರು ಒತ್ತಡ ಹಾಕಿದ ನಂತರ ವೈದ್ಯೆ ಡೆಲಿವರಿ ರೂಂಗೆ ಕರೆದುಕೊಂಡು ಹೋಗಿದ್ದಾರೆ. ಹೀಗೆ ಹೋದ ಕೆಲ ನಿಮಿಷದಲ್ಲಿಯೇ ಮಗುವು ಮೃತಪಟ್ಟಿದೆ ಎಂದೇಳಿ ವೈದ್ಯೆ ಎಸ್ಕೇಪ್ ಆಗಿದ್ದರಂತೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ರೀತಿಯಾಗಿದೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೆಸಿ ಜನರಲ್ RMO ಹೇಳಿದ್ದೇನು?

ಘಟನೆಯ ಬಗ್ಗೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಡೆಲಿವರಿ ರೂಂಗೆ ಕರೆದುಕೊಂಡು ಹೋಗುವಾಗ ತಡವಾಗಿದೆ ಅನ್ನುತ್ತಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನನಗಿಲ್ಲ. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಕೆಸಿ ಜನರಲ್ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಮೋಹನ್ ಬಿ.ಆರ್ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version