Site icon Vistara News

Mental Health : Good News; ರಾಜ್ಯದ ಎಲ್ಲ 33 ಜಿಲ್ಲಾಸ್ಪತ್ರೆಗಳಲ್ಲಿ ನಿಮ್ಹಾನ್ಸ್‌ ಮಾದರಿ ಸೇವೆ

Mental Health Dinesh Gundu rao

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಸೇವೆಗೆ (Brain Health Service) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸೋಮವಾರ ಚಾಲನೆ ನೀಡಿದರು. ನಿಮ್ಹಾನ್ಸ್ ಸಂಸ್ಥೆಯ (Nimhans Institute) ಸಹಯೋಗದಲ್ಲಿ ರಾಜ್ಯದ 33 ಸರ್ಕಾರಿ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ.‌ ಈ ಮೂಲಕ ನಿಮ್ಹಾನ್ಸ್ ಮೇಲಿನ ಒತ್ತಡ ಕಡಿಮೆ ಮಾಡುವುದರೊಂದಿಗೆ, ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿಯೇ ಮೆದುಳು ಹಾಗೂ ನರ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಆರೋಗ್ಯ ಸೇವೆ (Mental Health) ಒದಗಿಸುವತ್ತ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ನೂತನ ಮೆದುಳು ಆರೋಗ್ಯ ಕೇಂದ್ರಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ದೇಶದಲ್ಲಿ ಇದೊಂದು ಮಾದರಿ ಕಾರ್ಯಕ್ರಮವಾಗಲಿದೆ ಎಂದರು. ಮೆದುಳು ಆರೋಗ್ಯದ ವಿಚಾರದಲ್ಲಿ ಹೆಚ್ಚು ಒತ್ತು ನೀಡಬೇಕಾಗಿದೆ. ಕರ್ನಾಟಕ ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಜಿಲ್ಲಾ ಕೇಂದ್ರಗಳಲ್ಲೇ ನಿಮ್ಹಾನ್ಸ್‌ ಮಾದರಿ ಸೇವೆ (Nimhans model Service)

ಮೆದುಳು ಹಾಗೂ ನರ ಸಮಸ್ಯೆಗಳಿಗೆ ರಾಜ್ಯದ ಜನರು ಬೆಂಗಳೂರಿನ ನಿಮ್ಹಾನ್ಸ್ ಗೆ ಆಗಮಿಸಬೇಕಾಗಿತ್ತು. ನಿಮ್ಹಾನ್ಸ್ ಮೇಲೆ ಹೆಚ್ಚಿನ ಒತ್ತಡ ಇತ್ತು‌. ಈ ಒತ್ತಡವನ್ನ ಕಡಿಮೆ ಮಾಡುವುದರ ಜೊತೆಗೆ, ಜಿಲ್ಲಾ ಮಟ್ಟದಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲು 33 ಮೆದುಳು ಆರೋಗ್ಯ ಕೇಂದ್ರಗಳನ್ನ ತೆರೆಯಲಾಗಿದೆ. ನಿಮ್ಹಾನ್ಸ್ ಸಹಯೋಗ ಹಾಗೂ ಸಲಹೆಗಳೊಂದಿಗೆ ಈ ಕೇಂದ್ರಗಳಲ್ಲಿ ಇನ್ಮುಂದೆ ಚಿಕಿತ್ಸೆ ದೊರೆಯಲಿದೆ ಎಂದರು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ನಿಮ್ಹಾನ್ಸ್ ತಜ್ಞ ವೈದ್ಯರ ಸಲಹೆ ಪಡೆದುಕೊಂಡು ಜಿಲ್ಲಾ ಕೇಂದ್ರಗಳಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Mental Health Dinesh Gundu rao1

ಪಾರ್ಶ್ವವಾಯು, ಅಪಸ್ಮಾರ, ಮರೆವಿನ ಕಾಯಿಲೆ ಮತ್ತು ತಲೆನೋವು ಸೇರಿದಂತೆ ನರವೈಜ್ಞಾನಿಕ ಕಾಯಿಲೆಗಳ ಹೊರ ಭಾರತದಲ್ಲಿ ಹೆಚ್ಚಾಗುತ್ತಿದೆ. ಇವು ಮರಣ ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿವೆ. ಇದನ್ನು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳು ಸಹಕಾರಿಯಾಗಲಿವೆ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಪಿಸಿಯೋಥೆರಪಿಸ್ಟ್, ಸ್ಪೀಚ್ ಥೆರಪಿಸ್ಟ್, ಮನಶ್ಯಾಸ್ತ್ರಜ್ಞರು, ನರ್ಸ್ ಮತ್ತು ಜಿಲ್ಲಾ ಸಂಯೋಜಕರನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ : Raja Marga Column : ಪದೇಪದೆ ಡಿಪ್ರೆಸ್‌ ಆಗ್ತಾ ಇದ್ದೀರಾ? ಹುಷಾರು ಆತಂಕ ಒಂದು ನಿಧಾನ ವಿಷ!

Mental Health Dinesh Gundu rao1

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಪ್ರಮುಖ ಅಂಶಗಳು

ಮೆದುಳು ಆರೋಗ್ಯ ಚಿಕಿತ್ಸಾಲಯಗಳ ಸ್ಥಾಪನೆ

ಕರ್ನಾಟಕದ 31 ಜಿಲ್ಲೆ ಮತ್ತು ಬಿಬಿಎಂಪಿಯ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ. ನರರೋಗಿಗಳಿಗೆ ಸಕಾಲಿಕ ಚಿಕಿತ್ಸೆಯನ್ನು ಖಾತ್ರಿಪಡಿಸುವ ಮತ್ತು ಆರೈಕೆಗಾಗಿ ನೋಡಲ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.

ವೈದ್ಯರು, ಆಶಾ ಕಾರ್ಯಕರ್ತರ ತರಬೇತಿ ಮೂಲಕ ಸಾಮರ್ಥ್ಯ ವೃದ್ಧಿ

ನರವೈಜ್ಞಾನಿಕ ಅಸ್ವಸ್ಥತೆಗಳ ನಿರ್ವಹಣೆಯನ್ನು ಹೆಚ್ಚಿಸಲು ರಾಜ್ಯಾದ್ಯಂತ ಆಶಾ ಕಾರ್ಯಕರ್ತರು, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೈಕೆ ವೈದ್ಯರು ಮತ್ತು ಫಿಜಿಷಿಯನ್ಸ್ ಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನರರೋಗತಜ್ಞರ ರಾಜ್ಯವ್ಯಾಪಿ ನೆಟ್ವರ್ಕ್

ಪ್ರಾಥಮಿಕ ಹಂತದಲ್ಲಿ ವಿಶೇಷ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ತಜ್ಞರ ಸಮಾಲೋಚನೆ, ಟೆಲಿನ್ಯೂರಾಲಜಿ ಮತ್ತು ಟೆಲಿಮೆಂಟರಿಂಗ್ ಸೇವೆಗಳನ್ನು ಒದಗಿಸುವ ನರರೋಗತಜ್ಞರುಗಳನ್ನು ಸಂಯೋಜಿಸಲಾಗಿದೆ. ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳ ನಡುವೆ ಸಂಬಂಧವನ್ನು ಬಲಪಡಿಸುವ ಮತ್ತು ಪ್ರಾಥಮಿಕ ಹಂತದಲ್ಲಿ ರೋಗನಿರ್ಣಯ, ಸಕಾಲಿಕ ಚಿಕಿತ್ಸೆಯನ್ನು ಸುಲಭಗೊಳಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಯೋಜಕರ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಅಂತರ್ವಿಭಾಗೀಯ ಸಮನ್ವಯ

ಅಸಾಂಕ್ರಾಮಿಕ ರೋಗಗಳು, ಮಾನಸಿಕ ಆರೋಗ್ಯ, ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳೊಂದಿಗೆ ನಿಬಂಧನೆಗಳ ಏಕೀಕರಣಗೊಳಿಸಿದೆ.

ಮೆದುಳಿನ ಆರೋಗ್ಯ ಜಾಗೃತಿ ಅಭಿಯಾನಗಳು

ಮೆದುಳಿನ ಆರೋಗ್ಯವನ್ನು ಉತ್ತೇಜಿಸಲು ವ್ಯಾಪಕವಾದ ಅಭಿಯಾನಗಳು, ತಡೆಗಟ್ಟುವಿಕೆ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳ ಆರಂಭಿಕ ಗುರುತಿಸುವಿಕೆಯ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವುದು.

ಡಿಜಿಟಲ್ ಡೇಟಾ ಮತ್ತು ಮಾಹಿತಿ ವ್ಯವಸ್ಥೆ

ಸಂವಹನ, ಕೆಲಸದ ಹರಿವು ಮತ್ತು ಪ್ರಭಾವದ ಮೌಲ್ಯಮಾಪನವನ್ನು ಸುಗಮಗೊಳಿಸುವ ಅತ್ಯಾಧುನಿಕ ವ್ಯವಸ್ಥೆ.

Exit mobile version